ಸಭೆ ನೆಪದಲ್ಲಿ ಶಾಸಕರ ಕೊಠಡಿ ಉದ್ಘಾಟನೆ...
ಚಿಂತಾಮಣಿ: ಶಿಡ್ಲಘಟ್ಟ ಕ್ಷೇತ್ರದ ಶಾಸಕ ಎಂ.ರಾಜಣ್ಣ ಅವರು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಎಂದು ಹೇಳಿಕೊಂಡು ಶಾಸಕರ ಕೊಠಡಿ ಉದ್ಘಾಟನೆಯನ್ನು ತರಾತುರಿಯಲ್ಲಿ ನೆರವೇರಿಸಲು ಕಾರಣವೇನು ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕೊಠಡಿ ಉದ್ಘಾಟನಾ ಕಾರ್ಯಕ್ರಮಕ್ಕೆ ಜೆಡಿಎಸ್ನ ಇಬ್ಬರು ಶಾಸಕರ ಪೈಕಿ ಒಬ್ಬರು ಹಾಜರಾಗಿ ಮತ್ತೊಬ್ಬರು ಗೈರು ಹಾಜರಿಯಾಗಿರುವುದಿಂದ ಮೇಲ್ನೋಟಕ್ಕೆ ಇಬ್ಬರ ಶಾಸಕರ ನಡುವೆ ಭಿನ್ನಾಭಿಪ್ರಾಯವೇ ಕಾರಣವಾಗಿರಬಹುದು ಎಂದು ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪಟ್ಟಣದಲ್ಲಿನ ತಾಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಇಂದು ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ರಾಜಣ್ಣ ಶಾಸಕರ ಕೊಠಡಿ ಉದ್ಘಾಟನಾ ಕಾರ್ಯಕ್ಕೆ ಚಾಲನೆ ನೀಡಲು ಕಾರ್ಯಕ್ರಮದ ಪೂರ್ವ ಸಿದ್ದತೆಗಳು ಸಂಬಂಧಪಟ್ಟ ಅಧಿಕಾರಿಗಳಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆದರೆ, ಪಕ್ಕದ ಕೊಠಡಿ ಜೆಡಿಎಸ್ನ ಸ್ಥಳೀಯ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕೊಠಡಿಯಾಗಿದ್ದು, ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರು ಹಾಜರಿಯಾಗಿರುವುದರಿಂದ ಈ ನಿಟ್ಟಿನಲ್ಲಿ ಇದು ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೂ ಗೊಂದಲಕ್ಕೆ ಕಾರಣವಾಯಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಸುಧಾಕರ್ ತನ್ನ ರಾಜಕೀಯ ವಿರೋಧಿ ಮಾಜಿ ಸಚಿವ ವಿ.ಮುನಿಯಪ್ಪ ಅವರನ್ನು ಸೋಲಿಸಲು ರಾಜಣ್ಣ ಪರವಾಗಿ ಚಿಲಕಲನೇರ್ಪು ಹೋಬಳಿಯಲ್ಲಿ ಸಭೆ ಹಾಗೂ ಚುನಾವಣಾ ಪ್ರಚಾರದಲ್ಲಿ ಬಹಿರಂಗವಾಗಿ ತೊಡಗಿಸಿಕೊಂಡು ಶಾಸಕರನ್ನಾಗಿ ಮಾಡಲು ಸಹಕರಿಸಿದರು.
ಈ ನಿಟ್ಟಿನಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಸೋಲನ್ನು ಕಂಡ ಸುಧಾಕರ್ ಒಳಗಿನ ವಿಶ್ವಾಸದಿಂದ ಇಂದು ಏಕಾಏಕಿ ಶಿಡ್ಲಘಟ್ಟ ಕ್ಷೇತ್ರ ಶಾಸಕ ಎಂ.ರಾಜಣ್ಣ ತಮ್ಮದೇ ಪಕ್ಷದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅವರನ್ನು ಬಿಟ್ಟು ಚಿಂತಾಮಣಿಯಲ್ಲಿ ತನ್ನ ಬೆಂಬಲಿಗರೊಂದಿಗೆ ಆಗಮಿಸಿ ಕಾರ್ಯಕ್ರಮ ನಡೆಸುವ ಉದ್ದೇಶವೇನಿತ್ತು ಎಂಬ ಅಸಮಾಧಾನದ ಹೊಗೆಯಾಡುತ್ತಿದೆ.
ಅಂದು ತಾವು ಗೆಲ್ಲಲು ಸಹಕರಿಸಿದ ಹಿನ್ನೆಲೆಯಲ್ಲಿ ಎಂ.ರಾಜಣ್ಣ ಇಂದು ಸುಧಾಕರ್ ಬೆಂಬಲಿಗರ ಜೊತೆಯಲ್ಲಿಯೂ ಸಹ ಕಾಣಿಸಿಕೊಂಡಿರುವುದರಿಂದ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿಗರಿಗೆ ಒಂದು ಕಡೆ ಅಸಮಾಧಾನವೂ ಉಂಟಾಗಿದೆ. ಈ ನಿಟ್ಟಿನಲ್ಲಿ ಚಿಂತಾಮಣಿ ಕ್ಷೇತ್ರದ ಒಂದು ಹೋಬಳಿ ಶಿಡ್ಲಘಟ್ಟ ಕ್ಷೇತ್ರಕ್ಕೆ ಸೇರಿವುದರಿಂದ ಸದ್ಯದ ರಾಜಕೀಯ ವಿದ್ಯುಮಾನ ಇನ್ನು ಮುಂದೆ ಯಾವ ರೂಪ ತಾಳುತ್ತದೋ ಎಂಬ ಲೆಕ್ಕಾಚಾರದಲ್ಲಿ ಕಾರ್ಯಕರ್ತರು ತೊಡಗಿದ್ದಾರೆ.