ಸೊಳ್ಳೆಗಳು ಸಾರ್... ಸೊಳ್ಳೆಗಳು...!
ಕನ್ನಡಪ್ರಭ ವಾರ್ತೆ ಕೋಲಾರ ಜೂ.27
ಜಿಲ್ಲೆಯಾದ್ಯಂತ ಈಡಿಸ್ ಸೊಳ್ಳೆಗಳ ಕಾಟ ಹೆಚ್ಚಾಗಿರುವುದರಿಂದ ಜನತೆ ತತ್ತರಿಸಿದ್ದಾರೆ.
ಮನುಷ್ಯರ ಪ್ರಾಣದ ಜತೆ ಚೆಲ್ಲಾಟವಾಡುವ ಈಡಿಸ್ ಸೊಳ್ಳೆಗಳಿಂದಾಗಿ ಇದ್ದಕ್ಕಿದ್ದಂತೆ ತೀವ್ರ ಜ್ವರ, ತಲೆ, ಕಣ್ಣುಗಳ ಹಿಂಭಾಗದಲ್ಲಿ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸುವುದು, ಬಾಯಿ, ಮೂಗು ಮತ್ತು ಒಸಡುಗಳಲ್ಲಿ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು ಕಾಣಿಸಿಕೊಳ್ಳುವುದರಿಂದ ವೈದ್ಯ ಲೋಕದಲ್ಲಿ ಈ ಕಾಯಿಲೆಗೆ ಡೆಂಘೀ ಎಂದು ನಾಮಕರಣ ಮಾಡಲಾಗಿದೆ.
ಈ ರೋಗದ ಚಿಕಿತ್ಸೆಗೆ ನಿರ್ದಿಷ್ಟವಾದ ಔಷದಿಯನ್ನು ಇನ್ನು ಕಂಡು ಹಿಡಿಯದಿರುವುದರಿಂದ ಈಗಾಗಲೇ ಅನೇಕರು ಸತ್ತಿದ್ದಾರೆ. ಕಾಯಿಲೆಗೆ ತಕ್ಷಣ ತುರ್ತಾಗಿ ಚಿಕಿತ್ಸೆ ಪಡೆದವರು ಮಾತ್ರ ಉಳಿದುಕೊಂಡಿದ್ದಾರೆ.
ತೆರೆದಿಟ್ಟ ನೀರಿನ ತೊಟ್ಟಿಗಳಲ್ಲಿ, ಹಳೆಯ ನೀರು ತುಂಬಿದ ಬಿಂದಿಗೆಗಳಲ್ಲಿ ಹಾಗೂ ಮನೆಯ ಸುತ್ತಮುತ್ತಲ ಚರಂಡಿಗಳಲ್ಲಿ ಕುಳಿತುಕೊಳ್ಳುವ ಸೊಳ್ಳೆಗಳಿಂದಾಗಿ ಡೆಂಘೀ ಹರಡುವುದರಿಂದ ಜನರು ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವ ಮೂಲಕ ಕಾಯಿಲೆ ಉಲ್ಬಣಗೊಳ್ಳದಂತೆ ಎಚ್ಚರ ವಹಿಸುವುದೊಂದೇ ಸೊಳ್ಳೆಗಳ ನಿಯಂತ್ರಕ್ಕೆ ಮಾರ್ಗೋಪಾಯವಾಗಿದೆ.
ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳು ಹಾಗೂ ಸಂಘ ಸಂಸ್ಥೆಗಳು ಆರೋಗ್ಯ ಇಲಾಖೆಯ ಸಹಯೋಗದಿಂದ ಈಡಿಸ್ ಸೊಳ್ಳೆಗಳ ನಾಶಕ್ಕೆ ಸಮರೋಪಾದಿಯಲ್ಲಿ ಕಾರ್ಯಕ್ರಮ ರೂಪಿಸುವ ಮೂಲಕ ಜನತೆ ಡೆಂಘೀ ಎಂಬ ಮಹಾಮಾರಿಗೆ ಬಲಿಯಾಗುವುದನ್ನು ತಪ್ಪಿಸಬೇಕಾಗಿದೆ.
ಸೊಳ್ಳೆಗಳ ನಿಯಂತ್ರಣಕ್ಕಾಗಿ ರಾಸಾಯನಿಕ ಔಷಧಿಯುಳ್ಳ ಹೊಗೆಯನ್ನು (ಫಾಗಿಂಗ್) ಬಿಡುವುದು ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಫಾಗಿಂಗ್ನಿಂದ ರೇಷ್ಮೆ ಬೆಳೆಗೆ ಮತ್ತು ಜನತೆಯ ಆರೋಗ್ಯಕ್ಕೆ ಹಾನಿಯಾಗುತ್ತಿದೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿರುವುದರಿಂದ ಸ್ಥಳೀಯ ಸಂಸ್ಥೆಗಳು ಹಾಗೂ ಆರೋಗ್ಯ ಇಲಾಖೆಯವರು ಫಾಗಿಂಗ್ ಯಂತ್ರಗಳನ್ನು ಬಳಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಒಂದು ವೇಳೆ ಫಾಗಿಂಗ್ ಮಾಡಿದರೂ ಮನೆಯೊಳಗೆ ಮಾಡಿದಾಗ ಮಾತ್ರ ಸೊಳ್ಳೆಗಳು ನಿಯಂತ್ರಣಕ್ಕೆ ಬರುತ್ತದೆ, ಮನೆಯಾಚೆ ಫಾಗಿಂಗ್ ಮಾಡುವುದರಿಂದ ಸೊಳ್ಳೆಗಳು ಮನೆಗಳಲ್ಲಿ ಸೇರುವುದಕ್ಕೆ ಅವಕಾಶವಾಗುವುದರಿಂದ ಜನತೆಯನ್ನು ಒಪ್ಪಿಸುವುದು ಸಂಬಂಧಪಟ್ಟವರಿಗೆ ತಲೆ ನೋವಾಗಿ ಪರಿಣಮಿಸಿದೆ.
ಸೊಳ್ಳೆಗಳು ಹೆಚ್ಚಿರುವ ಪ್ರದೇಶಗಳನ್ನು ಆರೋಗ್ಯ ಇಲಾಖೆಯವರು ನರ್ಸಿಂಗ್ ವಿದ್ಯಾರ್ಥಿಗಳ ಮೂಲಕ ಮಾಡಿಸಿದ್ದು, ಹೆಚ್ಚು ಕಸಕಡ್ಡಿ ಎಸೆಯುವ, ಕೊಳಚೆ ನೀರು ನಿಲ್ಲುವ ಹಾಗೂ ಗಲ್ಲಿಗಳಲ್ಲಿ ಫಾಗಿಂಗ್ ಮಾಡುವುದರಿಂದ ಸೊಳ್ಳೆಗಳು ಕೊಂಚ ಮಟ್ಟಿಗೆ ಕಡಿಮೆ ಆಗುವ ಸಾಧ್ಯತೆ ಇರುವುದರಿಂದ ಆರೋಗ್ಯ ಸಿಬ್ಬಂದಿ ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರು ಅವಶ್ಯಕತೆ ಇರುವ ಕಡೆ ಹೆಚ್ಚು ಫಾಗಿಂಗ್ ಮಾಡಬೇಕೆಂಬುದು ಜನತೆಯ ಒತ್ತಾಸೆಯಾಗಿದೆ.ಸಭೆ: ಕೋಲಾರ ಜಿಲ್ಲೆಯಲ್ಲಿ ಈವರೆಗೆ 46 ಡೆಂಘೀ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ. ಪ್ರಕಾಶ್ಕುಮಾರ್ ಅವರು ಗುರುವಾರ ಜಿಲ್ಲೆಯ ಎಲ್ಲಾ ತಾಲೂಕಿನ ವೈದ್ಯಾಧಿಕಾರಿಗಳ ಜತೆ ಸಭೆ ನಡೆಸಿ ಡೆಂಘೀ ರೋಗ ಪತ್ತೆಯಾದ ಕೂಡಲೇ ರೋಗಿಗೆ ತುರ್ತು ಚಿಕಿತ್ಸೆ ನೀಡುವುದಲ್ಲದೆ, ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಸರ್ಕಾರದಿಂದ ವೆಚ್ಚ ಭರಿಸಲು ಅವಕಾಶವಿದ್ದು, ನಿಖರವಾದ ಪ್ರಕರಣಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.
ಕೋಲಾರ ತಾಲೂಕಿನಲ್ಲಿ ಅತಿ ಹೆಚ್ಚು 24 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದರೆ, ಮಾಲೂರು-13,ಬಂಗಾರಪೇಟೆ-6, ಮುಳಬಾಗಿಲು-1, ಶ್ರೀನಿವಾಸಪುರ ತಾಲೂಕಿನಲ್ಲಿ-2 ಪ್ರಕರಣಗಳು ಪತ್ತೆಯಾಗಿದ್ದು, ಯಾವುದೇ ರೋಗಿಯು ಚಿಕಿತ್ಸೆಯಿಂದ ವಂಚಿತರಾಗದಂತೆ ಎಚ್ಚರವಹಿಸಬೇಕು, ರೋಗಿಗಳ ಪ್ರಾಣ ಉಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಹೇಳಿದ್ದಾರೆ.