ಗ್ರಾಪಂ ಅಧ್ಯಕ್ಷರ ಸಹಿ ಇಲ್ಲದೆ ನೀರು ಪೂರೈಸಿದ ವ್ಯಕ್ತಿಗೆ ಚೆಕ್ ವಿತರಣೆ
ಕೋಲಾರ: ತಾಲೂಕಿನ ಮುದುವಾಡಿ ಗ್ರಾಮ ಪಂಚಾಯಿತಿಯಿಂದ ನೀರು ಸರಬರಾಜುದಾರರೊಬ್ಬರಿಗೆ ನೀಡಿರುವ 64 ಸಾವಿರ ರು.ಗಳ ಚೆಕ್ಗೆ ಗ್ರಾಪಂ ಅಧ್ಯಕ್ಷರು ಸಹಿ ಮಾಡದೆ ಚೆಕ್ ವಿತರಣೆ ಮಾಡಿರುವುದರಿಂದ ಗುತ್ತಿಗೆದಾರ ಅಧ್ಯಕ್ಷರ ಸಹಿ ಪಡೆಯಲು ಅಲೆದಾಡುವಂತಾಗಿದೆ. ಮುದುವಾಡಿ ಗ್ರಾಮದ ಗೋಪಾಲ್ ಎಂಬುವರು ಗ್ರಾಮದ ಸುತ್ತಮುತ್ತಲಿನ ನಾಗನಾಯಕನಹಳ್ಳಿ, ಅರಿನಾಗನಹಳ್ಳಿ ಮತ್ತಿತರ ಪ್ರದೇಶಗಳಿಗೆ ಸುಮಾರು 40 ದಿನಗಳ ಕಾಲ ತನ್ನ ಟ್ರ್ಯಾಕ್ಟರ್ನಲ್ಲಿ ನೀರು ಪೂರೈಸಿದ್ದಕ್ಕಾಗಿ ಗ್ರಾಮ ಪಂಚಾಯಿತಿಯಿಂದ ನೀಡಿರುವ ಚೆಕ್ ಇದ್ದಾಗಿದ್ದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಲಿನಿಯವರು ತಮ್ಮ ಸಹಿಯನ್ನು ಹಾಕಿದ್ದಾರಾದರೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ. ಪದ್ಮಾವತಮ್ಮನವರು ತಮ್ಮ ಸಹಿಯನ್ನು ಹಾಕದೇ ನಿರ್ಲಕ್ಷ್ಯ ತೋರಿರುವುದರಿಂದ ಬ್ಯಾಂಕಿನಲ್ಲಿ ಚೆಕ್ ಮಾನ್ಯವಾಗದೆ ತೊಂದರೆ ಅನುಭವಿಸುವಂತಾಗಿದೆ ಎಂದು ಗೋಪಾಲ್ ದೂರಿದ್ದಾರೆ.
'ಧಾರ್ಮಿಕ ಕಾರ್ಯದಿಂದ ನೆಮ್ಮದಿ'
ಮಾಲೂರು: ಇಂದಿನ ವೇಗದ ಯುಗದ ಜಂಜಾಟದಲ್ಲಿ ನೆಮ್ಮದಿ ಕಾಣಬೇಕಾದರೆ ಧಾರ್ಮಿಕ ಕಾರ್ಯಗಳಲ್ಲಿ ಮನಪೂರ್ವಕವಾಗಿ ಭಾಗವಹಿಸುವುದರಿಂದ ಮಾತ್ರ ಸಾಧ್ಯ ಎಂದು ಹರಿಹರ ರಾಜೇನಹಳ್ಳಿಯ ಗುರುಪೀಠ ಪ್ರಸನ್ನನಂದಾ ಸ್ವಾಮೀಜಿ ಹೇಳಿದರು. ಅವರು ತಾಲೂಕಿನ ಮಾಸ್ತಿ ಹೋಬಳಿಯ ದುಡವನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ವರದಾರಾಯಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಶುಕ್ರವಾರದಂದು ಪಟ್ಟಣಕ್ಕೆ ಆಗಮಿಸಿದಾಗ ಸ್ಥಳೀಯ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ನೀಡಿದ ಭವ್ಯ ಸ್ವಾಗತವನ್ನು ಸ್ವೀಕರಿಸಿ ಮಾತನಾಡಿದರು.
ಜು.1ರಂದು ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ
ಕೋಲಾರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜು.1 ರ ಸೋಮವಾರ ಬೆಳಗ್ಗೆ 10 ಗಂಟೆಗೆ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಮಾಜಿ ವಿಧಾನ ಸಭಾಧ್ಯಕ್ಷರು ಹಾಗೂ ಶಾಸಕರಾದ ಕೆ.ಆರ್. ರಮೇಶ್ಕುಮಾರ್ ಉದ್ಘಾಟಿಸಲಿದ್ದು, ಬೆಂಗಳೂರಿನ ಹಿರಿಯ ಪತ್ರಕರ್ತರಾದ ಎಸ್.ಕೆ. ಶೇಷಚಂದ್ರಿಕಾ ವಿಶೇಷ ಉಪನ್ಯಾಸ ನೀಡಿದ್ದಾರೆ. ಶಾಸಕ ವರ್ತೂರು ಪ್ರಕಾಶ್ ಪ್ರತಿಭಾ ಪುರಸ್ಕಾರ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ನಸೀರ್ ಅಹಮದ್, ಡಿ.ಎಸ್. ವೀರಯ್ಯ, ವೈ.ಎ. ನಾರಾಯಣಸ್ವಾಮಿ, ಶಾಸಕರಾದ ರಾಮಕ್ಕ, ಎಸ್.ಎನ್.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಕೋಡಿಹಳ್ಳಿ ಮಂಜುನಾಥಗೌಡ ಮತ್ತಿತರರು ಉಪಸ್ಥಿತರಿದ್ದು, ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಸಿ.ಎಂ. ಮುನಿಯಪ್ಪ, ಎಸ್. ಲಕ್ಷ್ಮೀನಾರಾಯಣರನ್ನು ಸನ್ಮಾನಿಸಲಾಗುವುದು ಹಾಗೂ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್ ತಿಳಿಸಿದ್ದಾರೆ.