ಬೀದಿ ನಾಯಿಗಳ ದಾಳಿ, 21 ಕುರಿಗಳ ಸಾವು
ಚಿಂತಾಮಣಿ: ಕುರಿಗಳ ಅಟ್ಟಿಗೆ ಬೀದಿ ನಾಯಿಗಳು ನುಗ್ಗಿ ಕುರಿಗಳನ್ನು ಕಚ್ಚಿದ ಪರಿಣಾಮ 21 ಕುರಿಗಳು ಸಾವನ್ನಪ್ಪಿ ಇನ್ನೂ ಹಲವು ಜೀವನ್ಮರಣದ ಹೋರಾಟ ನಡೆಸುತ್ತಿರುವ ದಾರುಣ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ಕುರುಬೂರು ಗ್ರಾಮದ ಬಡರೈತ ಮುನಿಯಪ್ಪ ಎಂಬವರಿಗೆ ಸೇರಿದ ಕುರಿಗಳ ಅಟ್ಟಿಗೆ ಸುಮಾರು 10 ಕ್ಕೂ ಹೆಚ್ಚು ಹುಚ್ಚು ಬೀದಿನಾಯಿಗಳು ಬಂದು ಕುರಿಗಳಿಗೆ ಕಚ್ಚಿದ ಪರಿಣಾಮ 21 ಕುರಿಗಳು ಸಾವನ್ನಪ್ಪಿವೆ. ಇದರಿಂದ ಬಡರೈತ ದಿಕ್ಕು ತೋಚದೆ ತಲೆ ಮೇಲೆ ಕೈಹಾಕಿಕೊಂಡು ತನ್ನ ನೋವನ್ನು ಗ್ರಾಮಸ್ಥರಲ್ಲಿ ತೋಡಿಕೊಂಡಿದ್ದಾನೆ.
ಪಂಚಾಯ್ತಿ ಕಚೇರಿ ಮುಂಭಾಗ ಧರಣಿ: ಕುರುಬೂರು ಗ್ರಾಮದಲ್ಲಿ ಕಳೆದ ಹಲವು ದಿನಗಳ ಹಿಂದೆ ಎಂ.ಜಿ.ರಂಗ ಎಂಬವರಿಗೆ ಸೇರಿದ 19 ಕುರಿಗಳು ಬೀದಿನಾಯಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ್ದು, ಇದರ ಬೆನ್ನಲ್ಲಿಯೇ ಗುರುವಾರ ರಾತ್ರಿ ಗ್ರಾಮದ ರೈತರಾದ ಮುನಿಯಪ್ಪನಿಗೆ ಸೇರಿದ 21, ತ್ಯಾಗರಾಜು ಮತ್ತು ರಾಮಚಂದ್ರ ಎಂಬವರ ಮನೆಯಲ್ಲಿಯೂ ದಾಳಿ ನಡೆದ ಪರಿಣಾಮ 4 ಕುರಿಗಳು ಸಾವನ್ನಪ್ಪಿವೆ. ಇದರಿಂದ ಅಕ್ರೋಶಗೊಂಡ ಗ್ರಾಮದ ರೈತರು ಶುಕ್ರವಾರ ಗ್ರಾಮಪಂಚಾಯ್ತಿ ಕಾರ್ಯಾಲಯದ ಮುಂಭಾಗದಲ್ಲಿ ಸತ್ತ ಕುರಿಗಳನ್ನು ಇಟ್ಟು ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪಂಚಾಯ್ತಿಗೆ ಬೀಗ: ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ಗ್ರಾಮಪಂಚಾಯ್ತಿ ಅಧಿಕಾರಿಗಳು ವಿಫಲಗೊಂಡಿದ್ದಾರೆಂದು ಹಾಗೂ ಪರಿಹಾರ ನೀಡಲು ಒತ್ತಾಯಿಸಿ ನೂರಾರು ರೈತರು ಅಧಿಕಾರಿಗಳ ವಿರುದ್ಧ ದಿಕ್ಕಾರಗಳನ್ನು ಕೂಗಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದ ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಗೌರಮ್ಮ ಮುನಿನಾರಾಯಣಪ್ಪ ಹಾಗೂ ಕಾರ್ಯದರ್ಶಿ ಲಕ್ಷ್ಮಿಪತಿ ನೊಂದ ರೈತನಿಗೆ ಸಮಾಧಾನ ಪಡಿಸಿ ತಾತ್ಕಾಲಿಕ ಪರಿಹಾರವಾಗಿ ಗ್ರಾಮಪಂಚಾಯ್ತಿ ವತಿಯಿಂದ 5 ಸಾವಿರ ರು. ನಗದು ಹಣವನ್ನು ನೀಡಿದರು. ಮುಂದಿನ ದಿನಗಳಲ್ಲಿ ತಾಲೂಕು ದಂಡಾಧಿಕಾರಿ ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಜತೆ ಚರ್ಚಿಸಿ ಪರಿಹಾರವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಮುಖಂಡರಾದ ಪ್ರಭಾಕರ್, ವೆಂಕಟಸ್ವಾಮಿ, ವೆಂಕಟೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.