ಸಂಪಂಗಿ ಅಧ್ಯಕ್ಷತೆಯಲ್ಲಿ ಬಿಜೆಪಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ಸಭೆ
ಕೆಜಿಎಫ್: ಕ್ಷೇತ್ರದ ಬಿಜೆಪಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಕೋಲಾರ ಜಿಲ್ಲಾ ಬಿಜೆಪಿ ಚುನಾವಣಾ ವೀಕ್ಷಕ ಜಯರಾಮರೆಡ್ಡಿ ನೇತೃತ್ವದಲ್ಲಿ ನಗರದ ಕಿಂಗ್ಜಾರ್ಜ್ ಹಾಲ್ ಆವರಣದಲ್ಲಿ ಆಯೋಜಿಸಲಾಗಿತ್ತು.
ಸಭೆ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ ಕೇಂದ್ರ ಯುಪಿಎ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಕುಟುಂಬ ವರ್ಗದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿ ಪರದಾಡುವಂತೆ ಮಾಡಿದೆ. ಸಾಮಾನ್ಯ ವರ್ಗದ ಜನರನ್ನು ರಕ್ಷಿಸುವ ಹಿತದೃಷ್ಟಿಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕೆಜಿಎಫ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಜಯರಾಮರೆಡ್ಡಿ ಮತ್ತು ಶಿವಕುಮಾರ್, ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಯಾವುದೇ ಭಿನ್ನಭಿಪ್ರಾಯವಿಲ್ಲದೆ ಕೆಲಸ ಮಾಡಲು ಕರೆ ನೀಡಿದರು.
ಅದೇ ರೀತಿ ನಗರ ಮತ್ತು ಗ್ರಾಮೀಣ ಭಾಗದ ನೂತನ ಬಿಜೆಪಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಮಾಡುವ ಬಗ್ಗೆ ಚರ್ಚಿಸಲಾಯಿತು.
ನಗರ ಘಟಕಕ್ಕೆ ಮಾಜಿ ಅಧ್ಯಕ್ಷ ಸುರೇಶ್ನಾರಾಯಣ(ಕುಟ್ಟಿ), ನಗರಸಭೆ ಸದಸ್ಯ ವಿಜಯಕುಮಾರ್, ಮುಖಂಡರಾದ ನವೀನ್ಜೈನ್ ಮತ್ತು ಗೋಪಾಲ್ಸಿಂಗ್ ಹಾಗೂ ಗ್ರಾಮೀಣ ಭಾಗದ ಅಮರನಾರಾಯಣರೆಡ್ಡಿ, ವೆಂಕಟೇಶಪ್ಪ ಮತ್ತು ಮುನಿಸ್ವಾಮಿರೆಡ್ಡಿ ಅವರುಗಳ ಹೆಸರುಗಳನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಸೂಚಿಸಿದ್ದು ಮುಂದಿನ ವಾರದೊಳಗೆ ಆಯ್ಕೆಯ ಪಟ್ಟಿಯನ್ನು ಘೋಷಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ನರಸಿಂಹಮೂರ್ತಿ, ಸುರೇಶ್ನಾರಾಯಣ, ಬಾಟಾಗೋಪಾಲ್, ಮುನಿಸ್ವಾಮಿರೆಡ್ಡಿ, ಯಶ್ವಂತ್ರಾಜ್, ವಿಜಯಕುಮಾರ್, ಅಶೋಕ್ ಸೇರಿದಂತೆ ಇತರೆ ಮುಖಂಡರು, ಕಾರ್ಯಕರ್ತರು ಬೆಂಬಲಿಗರು ಹಾಜರಿದ್ದರು.
ಬೀದಿ ದೀಪಗಳ ನಿರ್ವಹಣೆಯಲ್ಲಿ ಪ.ಪಂ. ವಿಫಲ
ಗುಡಿಬಂಡೆ: ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಅಳವಡಿಸಲಾಗಿರುವ ಬೀದಿ ದೀಪಗಳು ಬೆಳಕು ಚೆಲ್ಲದೇ ಹಲವಾರು ದಿನಗಳು ಕಳೆದರೂ ಸಂಬಂದಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲವೆಂದು ತಾ.ಪಂ. ಮಾಜಿ ಅಧ್ಯಕ್ಷ ಗುರಂ ನರಸಿಂಹಯ್ಯ ದೂರಿದ್ದಾರೆ.
ತಾವು ವಾಸ ಮಾಡುತ್ತಿರುವ ರ್ನೇ ವಾರ್ಡ್ ಸೇರಿದಂತೆ ನೆರೆಯ ಎಂಟನೇ ವಾರ್ಡ್ನಲ್ಲಿ ಈ ಹಿಂದೆ ನಿವಾಸಿಗಳ ಅನುಕೂಲಕ್ಕಾಗಿ ವಿದ್ಯುತ್ ಕಂಬಗಳಿಗೆ ಟ್ಯೂಬ್ ಅಳವಡಿಸಲಾಗಿತ್ತು. ಆದರೆ ಇತ್ತೀಚೆಗೆ ಹೆಚ್ಚು ಬೆಳಕು ಬೀರುವ ಸಲುವಾಗಿ ಪ್ರತೀ ವಾರ್ಡ್ನಲ್ಲಿ ಇವುಗಳ ಬದಲಾಗಿ ಸೋಡಿಯಂ ಪೇಪರ್ ಬಲ್ಪವುಳ್ಳ ಲೈಟ್ಗಳನ್ನು ಹಾಕಲಾಗಿದೆ. ಆದರೆ ಇದೆಲ್ಲಾ ನಡೆದು ಸುಮಾರು ಒಂದು ತಿಂಗಳು ಕಳೆದಿದ್ದರೂ ದೀಪಗಳು ಮಾತ್ರ ಬೆಳಕು ನೀಡದೇ ವಾರ್ಡ್ಗಳು ಕತ್ತಲಲ್ಲಿ ಮುಳುಗಿಸಿವೆ.. ಸಮಸ್ಯೆ ಬಗ್ಗೆ ಮುಖ್ಯಾಧಿಕಾರಿ ಸೇರಿದಂತೆ ಸಿಬ್ಬಂದಿಗೆ ಹಲವಾರು ಬಾರಿ ಮನವಿ ಮಾಡಿದರೂ ಪರಿಹಾರ ಕಲ್ಪಿಸಿಲ್ಲವೆಂದು ಹೇಳಿರುವ ಅವರು ಪ.ಪಂ ವಿರುದ್ಧ ಕಿಡಿಕಾರಿದ್ದಾರೆ.