ಸುಗಮ ಸಂಚಾರಕ್ಕೆ ಆದ್ಯತೆ: ಎಸ್ಪಿ ಭರವಸೆ
ಗೌರಿಬಿದನೂರು: ಅಪಘಾತ ರಹಿತ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಪ್ರಥಮ ಆದ್ಯತೆ ನೀಡುತ್ತಿದ್ದು, ಇದಕ್ಕೆ ಸಾರ್ವಜನಿಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರ ಅಗತ್ಯ ಎಂದು ಎಸ್ಪಿ ಶಿವಪ್ರಸಾದ್ ತಿಳಿಸಿದರು. ಪಟ್ಟಣ ಸಾಕಷ್ಟು ದಿನೇ ದಿನೇ ವಿಸ್ತಾರವಾಗಿ ಬೆಳೆಯುತ್ತಿದೆ, ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ, ವಾಹನಗಳನ್ನು ನಿಲುಗಡೆ ಮಾಡಲು ಪಟ್ಟಣ ವ್ಯಾಪ್ತಿಯಲ್ಲಿನ ನಿಗಧಿತ ಸ್ಥಳವಿಲ್ಲ, ಸಾರ್ವಜನಿಕರಲ್ಲಿಯೂ ಸಂಚಾರದ ನಿಯಮಗಳ ಬಗ್ಗೆ ಅರಿವಿಲ್ಲ ಎಂದು ಅವರು ಪಟ್ಟಣದ ಪುರ ಠಾಣೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪೊಲೀಸ್ ಠಾಣೆಯಲ್ಲಿ ಅಗತ್ಯ ಸಿಬ್ಬಂದಿ ಕೊರತೆ ಇದೆ, ಇಷ್ಟೆಲ್ಲ ಸಮಸ್ಯೆಗಳ ನಡುವೆ ಸಾರ್ವಜನಿಕರಿಗೆ ಅಪಘಾತ ರಹಿತ ಸುಗಮ ಸಂಚಾರ ಕಲ್ಪಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ ಎಂದರು.
ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು ನಾಡಿನ ಪ್ರತಿಯೊಬ್ಬ ನಾಗರಿಕನೂ ಸಮವಸ್ತ್ರ ರಹಿತ ಪೊಲೀಸರೇ ಆದ್ದರಿಂದ ನಾವು ಮೊದಲು ಕಾಲೇಜು ವಿದ್ಯಾರ್ಥಿಗಳಲ್ಲಿ ಕಾನೂನು ಪ್ರಜ್ಞೆ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸಲು ಗೃಹರಕ್ಷಕ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲು ಕ್ರಮಕೈಗೊಳ್ಳುತ್ತಿದ್ದೇವೆ ಎಂದರಲ್ಲದೆ, ಪಟ್ಟಣದಲ್ಲಿ ರಸ್ತೆ ಅಗಲೀಕರಣವಾಗಬೇಕಿದೆ ಮತ್ತು ರಸ್ತೆಗಳ ಬದಿಗಳಲ್ಲಿ ಫುಟ್ಪಾತ್ ನಿರ್ಮಿಸಬೇಕಿದೆ ಎಂದು ಹೇಳಿದರು. ಪಟ್ಟಣದಲ್ಲಿ ಅವಶ್ಯ ಕಡೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಲು ಸ್ಥಳ ನಿಗದಿಪಡಿಸಲು ಪುರಸಭೆ ಹಾಗೂ ಪುರ ಪೋಲಿಸ್ ಠಾಣೆಗೆ ಈಗಾಗಲೇ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ಎ.ಬಿ. ದೇವಯ್ಯ ವೃತ್ತ ನಿರೀಕ್ಷಕ ಮಹೇಶ್‌ಕುಮಾರ್ ಪುರ ಠಾಣೆ ಎಸ್.ಐ. ಚೇತನ್‌ಕುಮಾರ್ ಹಾಜರಿದ್ದರು.
ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ
ಚಿಂತಾಮಣಿ: ಉತ್ತರಾಖಂಡದಲ್ಲಿ ಪ್ರವಾಸಿಗರ ಸ್ಥಿತಿಗತಿಗಳನ್ನು ಸುಧಾರಿಸಲು ಸಂಕಷ್ಟದಲ್ಲಿರುವ ಜನರಿಗೆ ಮಾನವೀಯತೆ ದೃಷ್ಟಿಯಿಂದ ಪ್ರತಿಯೊಬ್ಬರು ತಮ್ಮ ಕೈಯಲ್ಲಾದ ಧನಸಹಾಯ ನೀಡುವುದರ ಮೂಲಕ ಕೈಜೋಡಿಸಬೇಕೆಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು. ಶುಕ್ರವಾರ ಪಟ್ಟಣದಲ್ಲಿನ ಪ್ರವಾಸಿ ಮಂದಿರದಲ್ಲಿ ಜೆಡಿಎಸ್‌ನ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನಾಯಕತ್ವದಲ್ಲಿ ಪಾದಯಾತ್ರೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೆರೆ ಸಂತ್ರಸ್ತರ ನೆರವಿಗೆ ಪರಿಹಾರ ನಿಧಿ ಸಂಗ್ರಹಿಸಿದರು. ಸಾರ್ವಜನಿಕರಿಂದ ಒಟ್ಟು 1 ಲಕ್ಷ 40 ಸಾವಿರ ರು.ಸಂಗ್ರಹಿಸಲಾಯಿತೆಂದು ಶಾಸಕರು ತಿಳಿಸಿದರು. ನಂತರ ಮುಖಂಡರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಈಶ್ವರ್,ಯನುಮಲಪಾಡಿ ಚಂದ್ರಾರೆಡ್ಡಿ, ವಿ.ಅಮರ್, ಮಂಜುನಾಥ್, ವೆಂಕಟರೆಡ್ಡಿ, ನಾಗರಾಜರೆಡ್ಡಿ, ತಿಮ್ಮಸಂದ್ರ ಚೌಡರೆಡ್ಡಿ, ನಯಾಸ್, ಆರ್.ಪ್ರಕಾಶ್, ರಾಜಾಚಾರಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಇದ್ದರು.
ಡಿಸಿಸಿ ಬ್ಯಾಂಕ್ ಸಾಲ ವಿತರಣೆ
ಮುಳಬಾಗಲು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳಿಂದ ಸಾಲ ಪಡೆದ 13 ಸಹಕಾರಿ ಸಂಘಗಳು ಮರುಪಾವತಿ ಮಾಡಿದ್ದು 2012-13 ನೇ ಸಾಲಿನಲ್ಲಿ ಬ್ಯಾಂಕ್ 2 ಕೋಟಿ ರು. ನಿವ್ವಳ ಲಾಭ ಪಡೆದಿದೆ ಎಂದು ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ .ಕೆ.ಸಿ.ಯತೀಶ್‌ಕುಮಾರ್ ಹೇಳಿದರು. ಪಟ್ಟಣದ ಡಿಸಿಸಿ ಬ್ಯಾಂಕ್‌ನಲ್ಲಿ ವಿವಿಧ ಫಲಾನುಭವಿಗಳಿಗೆ ಸಾಲ ವಿತರಿಸಿ ಮಾತನಾಡಿ, ಕೋಲಾರ ಜಿಲ್ಲೆ ಬರಗಾಲ ಪೀಡಿತವಾಗಿರುವ ಕಾರಣ ಕೆಲ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ವಿತರಿಸಲು ಮುಂದಾಗಿರುವುದಾಗಿ ತಿಳಿಸಿದರು. ಮುಳಬಾಗಲು ಡಿಸಿಸಿ ಬ್ಯಾಂಕ್ ನಿರ್ವಹಣಾಧಿಕಾರಿ ರಾಮಕೃಷ್ಣರೆಡ್ಡಿ, ಶ್ರೀನಾಥ್, ಮಂಡಿಕಲ್ ಕೆ.ಎಂ.ಗೋಪಾಲ್ ಮುಂತಾದವರು ಭಾಗವಹಿಸಿದ್ದರು.
'ವಿಕಲಚೇತನ ಮಕ್ಕಳಿಗೆ ಸಮನ್ವಯ ಶಿಕ್ಷಣ ಅಗತ್ಯ'
ಗೌರಿಬಿದನೂರು: ವಿಕಲ ಚೇತನ ಮಕ್ಕಳಿಗೆ ಸಾಮಾನ್ಯ ಮಕ್ಕಳ ಜೊತೆಯಲ್ಲಿ,ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಸಾಮಾನ್ಯ ಶಾಲೆಯಲ್ಲಿ ಸಾಮಾನ್ಯ ಶಿಕ್ಷಕರಿಂದಲೇ ಶಿಕ್ಷಣವನುಢಿ ನೀಡಬೇಕಾಗಿದೆ. ಇದನ್ನು ಸಮನ್ವಯ ಶಿಕ್ಷಣ ಎಂದು ಕರೆಯುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್ ತಿಳಿಸಿದರು. ಅವರು ಶುಕ್ರವಾರ ಕೋಟೆ ಶಾಲೆಯ ಆವರಣದಲ್ಲಿ ಎಪಿಡಿ ಸಂಸ್ಥೆಯವರಿಂದ ವಿಕಲಚೇತನ ಮಕ್ಕಳ ಹಾಗೂ ಗೃಹಾಧಾರಿತ ಮಕ್ಕಳ ಶಾಲಾ ದಾಖಲಾತಿಗಾಗಿ ಜನಜಾಗೃತಿ ಕಾರ್ಯಕ್ರಮವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ಸಂಯೋಜಕರಾದ ಕೃಷ್ಣಪ್ಪ, ಡಯಟ್ ಉಪನ್ಯಾಸಕರಾದ ಅಶ್ವತ್ಥರೆಡ್ಡಿ, ಎಲ್.ಎಲ್.ಸಿ. ಸದಸ್ಯರಾದ ಲೇಪಾಕ್ಷಿ ಸಂತೋಷರಾವ್, ಎಂ.ಆರ್. ಡಬ್ಲಿಯು ಕೃಷ್ಣಪ್ಪ, ಎಪಿಡಿ ಸಂಸ್ಥೆಯ ಸಂಯೋಜಕರಾದ ಮುನಿನಾರಾಯಣ, ಕುಮಾರಿ ಆಯಿಷಾ ಸಿದ್ದಿಕಾ, ಕುಮಾರಿ ಅರುಣ, ಕೋಟೆ ಶಾಲೆಯ ಅಧ್ಯಾಪಕರು ಮುಂತಾದವರು ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ಚಿಂತಾಮಣಿ: ವಕ್ಕಲಿಗರ ನೌಕರರ ಕ್ಷೇಮಾಭಿವೃದ್ಧಿ ಸಂಘ ಚಿಂತಾಮಣಿ ಶಾಖೆಯಿಂದ 2012-13 ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾನ್ವಿತ ವಕ್ಕಲಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ಮತ್ತು ಅಂಗವಿಕಲ ಮಕ್ಕಳಿಗೆ ಸಹಾಯಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಯಸುವ ವಿದ್ಯಾರ್ಥಿಗಳು ಚಿಂತಾಮಣಿ ತಾಲೂಕಿನ ವಾಸಸ್ಥರಾಗಿರಬೇಕು, ತಾಲೂಕು ವ್ಯಾಪ್ತಿಯಲ್ಲಿನ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿರಬೇಕು, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ಶೇ. 80 ಕ್ಕಿಂತ ಹೆಚ್ಚು ಸಾಧನೆ ಮಾಡಿರಬೇಕು. ಅರ್ಹ ವಿದ್ಯಾರ್ಥಿಗಳು ಪೂರ್ಣ ಮಾಹಿತಿಯನ್ನು ದಿನಾಂಕ 10-07-2013 ರೊಳಗೆ ಈ ಕೆಳಕಂಡವರಿಗೆ ಸಲ್ಲಿಸಲು ಸಂಘದ ಅಧ್ಯಕ್ಷ ಆರ್. ವೆಂಕಟರಮಣಾರೆಡ್ಡಿ, ಕಾರ್ಯದರ್ಶಿ ಡಿ.ಎನ್. ಮಹದೇವರೆಡ್ಡಿ, ಪತ್ರಿಕಾ ಕಾರ್ಯದರ್ಶಿ ವಿ. ರಮೇಶ್ ತಿಳಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸಂಘದ ವತಿಯಿಂದ ಸತ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ ಬೈರಾರೆಡ್ಡಿ-8861907311, ಎಸ್.ಸಿ.ಶ್ರೀನಿವಾಸರೆಡ್ಡಿ-9449378416.
ಮರಕ್ಕೆ ಸ್ಯಾಂಟ್ರೋಡಿಕ್ಕಿ: ವ್ಯಕ್ತಿ ಸಾವು
ಶಿಡ್ಲಘಟ್ಟ: ನಿಶ್ಚಿತಾರ್ಥಕ್ಕಾಗಿ ತೆರಳುತ್ತಿದ್ದ ಸ್ಯಾಂಟ್ರೋ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟು ಮೂರು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ತೊಟ್ಟಿಬಾವಿ ರಸ್ತೆಯಲ್ಲಿ ಸಂಭವಿಸಿದೆ. ಕೋಲಾರದ ಅಮ್ಮವಾರಪೇಟೆ ನಿವಾಸಿ ಮಂಜುನಾಥ್ ಮೃತಪಟ್ಟಿದ್ದು ಅರ್ಜುನ್ ಅನುರಾಧ ಹಾಗೂ ಶೃತಿ ಎಂಬುವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ. ಗೌರಿಬಿದನೂರಿನಲ್ಲಿ ನಡೆಯಬೇಕಿದ್ದ ನಿಶ್ಚಿತಾರ್ಥಕ್ಕೆ ತೆರಳುವ ಸಂದರ್ಭದಲ್ಲಿ ತೊಟ್ಟಿಬಾವಿ ರಸ್ತೆಯಲ್ಲಿ ಹಳ್ಳವನ್ನು ತಪ್ಪಿಸಲು ಹೋಗಿ ರಸ್ತೆ ಬದಿಯಲಿದ್ದ ಮರಕ್ಕೆ ಅಪ್ಪಳಿಸಿ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಲೇರಿಯಾ ವಿರೋಧಿ ಮಾಸಾಚರಣೆ
ಶಿಡ್ಲಘಟ್ಟ: ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ಮಲೇರಿಯಾ ಜ್ವರ ವಿರೋಧಿ ಮಾಸಾಚರಣೆಯನ್ನು ಶಾಲಾ ಮಕ್ಕಳೊಂದಿಗೆ ಸೇರಿ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು. ಮಲೇರಿಯಾ ಜ್ವರ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಶಾಲೆಯ ಮಕ್ಕಳೊಂದಿಗೆ ಸೇರಿ ಜಾಥಾ ಕಾರ್ಯಕ್ರಮವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ನಡೆಸಲಾಯಿತು. ಸಾರ್ವಜನಿಕ ಆಸ್ಪತ್ರೆ ಆರೋಗ್ಯಾಧಿಕಾರಿ ಅಂಬರೀಶ್ ಗದ್ದಿ, ಸಾರ್ವಜನಿಕ ಆಸ್ಪತ್ರೆ ಆರೋಗ್ಯಾದಿಕಾರಿ ಅಂಬರೀಶ್ ಗದ್ದಿ, ತಾಲೂಕು ಆರೋಗ್ಯಾಧಿಕಾರಿ ಅನಿಲ್ ಕುಮಾರ್, ತಾಲೂಕು ಆರೋಗ್ಯ ಹಿರಿಯ ಆರೋಗ್ಯ ಅಧಿಕಾರಿ ದಾದಾಪೀರ್, ಆರೋಗ್ಯ ಶಿಕ್ಷಣಾಧಿಕಾರಿಗಳಾದ ಕಿರಣ್‌ಕುಮಾರ್ ಹಾಗೂ ವಿಂದ್ಯಾ, ಶಾಲಾ ಮಕ್ಕಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.