ರಾಜಸ್ಥಾನದಲ್ಲಿ ಕದ್ದು ಕೇರಳದಲ್ಲಿ ಸಿಕ್ಕಿ ಬಿದ್ದರು!
ಅಂಕೋಲಾ: ರಾಜಸ್ಥಾನ ಜೈಪುರದ ಚಿನ್ನಾಭರಣ ಮಳಿಗೆಯನ್ನು ದೋಚಿ ಬರುತ್ತಿದ್ದ 7 ಆರೋಪಿಗಳನ್ನು ಇಲ್ಲಿಯ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ಸುರತ್ಕಲಿನ ಪ್ರಕಾಶ, ಕೇರಳ ರಾಜ್ಯದ ತಿರುವನಂತಪುರದ ಶ್ರೀಜಿತ, ಕೇರಳ ರಾಜ್ಯದ ಕಾಸರಗೋಡಿನವರಾದ ಫಾರುಖ ಹಾಗೂ ಹಮಜಾದ ಕುನ್ನಿ, ರಾಜಸ್ಥಾನ ಉದಯಪುರದ ಪರ್ವತ ಸಿಂಗ್ ಹಾಗೂ ಈತನ ಪತ್ನಿ ರೇಣು ಯಾನೆ ಗಾಯತ್ರಿ, ಕೇರಣದ ಕಣ್ಣೂರಿನ ಅಬ್ದುಲ ಸತ್ತಾರ ಅವರನ್ನು ಬಂಧಿಸಲಾಗಿದೆ.
ಜೈಪುರದ ಆರ್.ಕೆ. ಜ್ಯುವೇಲರ್ಸ್ನ್ನು ಈ ಆರೋಪಿಗಳು ಜೂ.24ರ ಸಂಜೆ 5 ಗಂಟೆಗೆ ಪ್ರವೇಶಿಸಿ ಮಳಿಗೆಯಲ್ಲಿದ್ದ ಸಿಬ್ಬಂದಿಯ ಕಣ್ಣು, ಬಾಯಿ ಕಟ್ಟಿ ಹಾಕಿ ಕೋಟ್ಯಂತರ ರು. ಮೌಲ್ಯದ ಚಿನ್ನ, ಹವಳ, ಮುತ್ತು, ರತ್ನಗಳನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ಜೈಪುರದ ಮೋತಿಡೊಂಗ್ರಿ ಪೊಲೀಸ್ ಠಾಣೆಯಲ್ಲಿ ಆರ್.ಕೆ. ಜ್ಯುವೇಲರಿಯ ಮಾಲೀಕ ರಾಮಕಿಶೋರ ಅಗ್ರವಾಲ ದೂರು ದಾಖಲಿಸಿದ್ದರು. ದರೋಡೆ ಕೃತ್ಯದಲ್ಲಿ ಒಟ್ಟು 9 ಮಂದಿ ಪಾಲ್ಗೊಂಡಿದ್ದು, ಈ ಪೈಕಿ ಈಗ 7 ಜನರನ್ನು ಬಂಧಿಸಲಾಗಿದೆ. ಉಳಿದಿಬ್ಬರು ಆರೋಪಿಗಳ ಶೋಧ ನಡೆದಿದೆ.
ಸಂಚು ರೂಪಿಸಿದ್ದು ಹೀಗೆ: ಕೇರಳದಲ್ಲಿ ಈ ಎಲ್ಲ ಆರೋಪಿತರು ಬೇರೆ ಬೇರೆ ಉದ್ಯೋಗದಲ್ಲಿದ್ದರು. ಕೆಲವರಿಗೆ ವ್ಯವಹಾರದಲ್ಲಿ ನಷ್ಟವಾಗಿತ್ತು. ಸುಲಭವಾಗಿ ಹಣ ಸಂಪಾದಿಸುವ ಆಲೋಚನೆಯಲ್ಲಿ ಇವರು ದರೋಡೆಯ ಸಂಚು ರೂಪಿಸಿದರು. ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಜಸ್ಥಾನ ಉದಯಪುರದ ಪರ್ವತ ಸಿಂಗ್ ಜ್ಯುವೇಲರಿ ಶಾಪ್ನ ಮಾಲೀಕ ರಾಮಕಿಶೋರ ಅಗ್ರವಾಲನ ಜತೆ ವ್ಯಾವಹಾರಿಕ ಸಂಬಂಧ ಬೆಳೆಸಿಕೊಂಡಿದ್ದ. ಜ್ಯುವೇಲರಿ ಅಂಗಡಿಗೆ ಯಾವಾಗ ಹೆಚ್ಚು ಪ್ರಮಾಣದಲ್ಲಿ ಚಿನ್ನಾಭರಣಗಳು ಬರುತ್ತವೆ ಎಂದು ತಿಳಿದಿದ್ದ. ಈ ಎಲ್ಲ ಮಾಹಿತಿ ಕಲೆಹಾಕಿದ ಪರ್ವತ ಸಿಂಗ್ ತನ್ನ ಸಹಚರರೊಡನೆ ಸೇರಿ ದರೋಡೆ ನಡೆಸಿದ್ದಾನೆ ಎಂದು ಎಸ್ಪಿ ಆರ್. ದಿಲೀಪ್ ಹಾಗೂ ಎಎಸ್ಪಿ ಸುಭಾಷ ಗುಡಿಮನಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ದರೋಡೆ ಬಳಿಕ ಆರೋಪಿಗಳು ಮುಂಬೈಯ ಪನ್ವೇಲ್ ಮಾರ್ಗವಾಗಿ ಕೇರಳದತ್ತ ತವೆರಾ ವಾಹನದಲ್ಲಿ ಸಾಗುತ್ತಿದ್ದಾಗ ಬಾಳೆಗುಳಿ ಕ್ರಾಸ್ ಬಳಿ ಅಂಕೋಲಾ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಜೈಪುರದಿಂದ ಪೊಲೀಸರ ಆಗಮನ: ದರೋಡೆ ಪ್ರಕರಣ ದಾಖಲಿಸಿಕೊಂಡಿರುವ ಜೈಪುರ ಸಿಟಿ ಪೊಲೀಸರು ಅಂಕೋಲಾಕ್ಕೆ ಆಗಮಿಸುತ್ತಿದ್ದು, ಆರೋಪಿತರನ್ನು ಅವರ ವಶಕ್ಕೆ ಒಪ್ಪಿಸಲಾಗುವುದು. ದರೋಡೆಗೆ ಬಳಸಿದ ಟವೇರಾ ವಾಹನವನ್ನೂ ವಶಪಡಿಸಿಕೊಳ್ಳಲಾಗದೆ.