ಗ್ರಾಪಂಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ
ಬಾಗೇಪಲ್ಲಿ: ರೇಷನ್ ಕಾರ್ಡಿಗೆ ಫೋಟೋ ತೆಗೆಯುವಂತೆ ಒತ್ತಾಯಿಸಿ ಎಂ.ನಲ್ಲಗುಟ್ಲಪಲ್ಲಿ ಗ್ರಾಮಸ್ಥರು ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ತಾಲೂಕಿನ ಚೇಳೂರು ಹೋಬಳಿ ಎಂ.ನಲ್ಲಗುಟ್ಲಪಲ್ಲಿ ಗ್ರಾಪಂ ಕಾರ್ಯಾಲಯದಲ್ಲಿ ರೇಷನ್ ಕಾರ್ಡ್ ಫೋಟೋ ತೆಗೆಯುವ ಕಂಪ್ಯೂಟರ್ ಆಪರೇಟರ್ ಹಾಗೂ ಕಾರ್ಯದರ್ಶಿ ಸೇರಿದಂತೆ ಕಳೆದ ಒಂದು ವಾರದಿಂದ ಯಾರೂ ಕಚೇರಿಗೆ ಬರುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದರು. ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುವಂತಹ ಗ್ರಾಮಸ್ಥರಿಗೆ ಖಾಲಿ ಕಚೇರಿಯನ್ನು ನೋಡಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಬರಿಗೈಯಲ್ಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದಲ್ಲಿ ಬಹುತೇಕ ಜನರು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುವವರಾಗಿದ್ದು, ಪದೇ ಪದೆ ಗ್ರಾಪಂ ಸುತ್ತಾ ಗಿರಕಿ ಹೊಡೆಯುತ್ತಿದ್ದರೆ ಜೀವನ ನಡೆಸುವುದಾರೂ ಹೇಗೆ ಎಂದು ತಮ್ಮ ಆಳಲನ್ನು ತೋಡಿಕೊಂಡರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ವಿದ್ಯಾರ್ಥಿಗಳಿಗೆ ಐದು ಸಾವಿರ ಲ್ಯಾಪ್ಟಾಪ್: ಶಾಸಕ ಮಂಜುನಾಥ್
ಕೋಲಾರ: ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಐದು ಸಾವಿರ ಲ್ಯಾಪ್ಟ್ಯಾಪ್ಗಳನ್ನು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಏಳೂವರೆ ಸಾವಿರ ಸೈಕಲ್ಗಳನ್ನು ನೀಡಲಾಗುವುದೆಂದು ಮುಳಬಾಗಿಲು ಕ್ಷೇತ್ರದ ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದ ಗಡಿಭಾಗವಾದ ಮುಳಬಾಗಿಲು ತಾಲೂಕಿನಾದ್ಯಂತ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ನಂತರದ ಉನ್ನತ ಶಿಕ್ಷಣಕ್ಕೆ ನೆರವು ನೀಡುವ ದೃಷ್ಟಿಯಲ್ಲಿ ಈ ಯೋಜನೆ ಕೈಗೊಂಡಿರುವುದಾಗಿ ಹೇಳಿದರು. ಪೆಟ್ರೋಲ್ ದರ ಏರಿಕೆ ಅರಿತು ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರಥಮ ಹಂತವಾಗಿ ಸೈಕಲ್ಗಳನ್ನು ವಿತರಿಸಲಾಗುವುದೆಂದು ಅವರು ತಿಳಿಸಿದರು. ಸಣ್ಣ ಪ್ರಮಾಣದ ಗುಡಿ ಕೈಗಾರಿಕೆ ಸ್ಥಾಪನೆಗೆ ಚಿಂತನೆ ಮಾಡಲಾಗಿ ಎಂದರು. ಶಾಸಕರ ಆಪ್ತರಾದ ಶ್ರೀನಿವಾಸ್, ಗೊಲ್ಲಹಳ್ಳಿ ವೆಂಕಟೇಶ್, ವೆಂಕಟೇಶ್ಬಾಬು, ಪುರಸಭಾ ಸದಸ್ಯ ಜಗನ್ ಮೋಹನ್ ರೆಡ್ಡಿ, ಶ್ರೀನಾಥ್ ಇದ್ದರು.