'ಜಾಗತೀಕರಣ ನೀತಿಯಿಂದ ನಿರುದ್ಯೋಗ ಸಮಸ್ಯೆ'
ಜಿಲ್ಲಾಮಟ್ಟದ ಸಂಘಟನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಬಿ.ರಾಜಶೇಖರ್
ಶಿಡ್ಲಘಟ್ಟ: ಜಾಗತೀಕರಣದ ನೀತಿಗಳಿಂದಾಗಿ ದೇಶದಲ್ಲಿ ನಿರುದ್ಯೋಗದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ್ ಹೇಳಿದರು.
ಪಟ್ಟಣದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಸಂಘಟನಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಲವಾರು ಗುಡಿ ಕೈಗಾರಿಕೆಗಳು, ಬೃಹತ್ ಕೈಗಾರಿಕೆಗಳು ಮುಚ್ಚಲ್ಪಟ್ಟಿವೆ. ಬಡವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಶಿಕ್ಷಣ ಲಭಿಸದಂತೆ ನೋಡಿಕೊಳ್ಳಲಾಗುತ್ತಿದೆ. ಕಂಪ್ಯೂಟ ಶಿಕ್ಷಣವನ್ನು ಬಡ ವಿದ್ಯಾರ್ಥಿಗಳು ಪಡೆಯದಂತೆ ಪಟ್ಟಭದ್ರಶಕ್ತಿಗಳು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಬಹುರಾಷ್ಟ್ರೀಯ ಕಂಪನಿಗಳು ದೇಶದೆಲ್ಲೆಡೆ ವಿಜೃಂಭಿಸುತ್ತಿರುವ ಪರಿಣಾಮ ಸರ್ಕಾರದ ಯುವಜನ ನೀತಿಗಳು ಇಡೀ ದೇಶದ ಯುವಜನತೆಯನ್ನು ಅಭದ್ರತೆಯತ್ತ ಕೊಂಡೊಯ್ಯುತ್ತಿವೆ. ಸರ್ಕಾರದ ನೀತಿಗಳಿಂದಾಗಿ ಕೃಷಿರಂಗ ದಿವಾಳಿಯಾಗುತ್ತಿದೆ. ಲಕ್ಷಾಂತರ ರೈತ ಕುಟುಂಬಗಳು ಬೀದಿಪಾಲಾಗುತ್ತಿವೆ. ಕೃಷಿ ನಂಬಿಕೊಂಡು ಬದುಕುತ್ತಿರುವ ಶೇ 67 ಕುಟುಂಗಳ ಅವಲಂಬಿತರಾಗಿರುವ ಯುವಜನತೆ ಕಂಗಾಲಾಗಿದ್ದಾರೆ. ದೇಶದ ಸಂಪತ್ತನ್ನು ಕಾಯಬೇಕಾಗಿರುವ ಯುವಜನತೆ ಸರ್ಕಾರಗಳ ನೀತಿಗಳಿಂದಾಗಿ ಕೋಮುವಾದ, ಭಾಷಾಂಧತೆ, ಜಾತಿ, ಭಯೋತ್ಪಾದನೆ, ನಕ್ಸಲ್, ಚಟುವಟಿಕೆ ಮುಂತಾದ ಸಮಾಜದ ಶಾಂತಿ ಕೆಡಿಸುವಂತಹ ಕೆಲಸಗಳಿಗೆ ಮುಂದಾಗುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಸ್‌ಎಫ್‌ಐ ಸಂಘಟನೆ ಯುವಜನತೆಯ ಶಿಕ್ಷಣದ ಹಕ್ಕುಗಳಿಗಾಗಿ ಹೋರಾಟಗಳನ್ನು ನಡೆಸುತ್ತಿದ್ದರೆ, ಡಿವೈಎಫ್‌ಐ ಸಂಘಟನೆಯು ಶಿಕ್ಷಣದ ಜೊತೆಗೆ ಯುವಜನತೆಗೆ ಉದ್ಯೋಗಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಹೋರಾಟಗಳನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಜುಲೈ 1ರಂದು ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಡಾ. ಬಿ.ಆರ್. ಅಂಬೆಡ್ಕರ್ ಭವನದಲ್ಲಿ ಯುವಜನತೆಯನ್ನು ವೈಜ್ಞಾನಿಕವಾದ ತಿಳಿವಳಿಕೆಗಳೊಂದಿಗೆ ಅಭ್ಯಾಸ ಮತ್ತು ಹೋರಾಟದ ಜೊತೆಗೆ ಪ್ರಗತಿಪರ ಚಿಂತನೆಗಳೊಂದಿಗೆ ಕೆಲಸ ನಿರ್ವಹಿಸುತ್ತಿರುವಂತೆ ಸಂಘಟಿಸಲು ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಶಿವಪ್ಪ, ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಕುಂದಲಗುಕರ್ ಮುನೀಂದ್ರ, ಫಯಾಜುಲ್ಲಾ, ರಾಘವೇಂದ್ರ, ನರಸಿಂಹಪ್ಪ, ನಟರಾಜ್, ಮುರಳಿ ಮುಂತಾದವರು ಹಾಜರಿದ್ದರು.