ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪರಮಶಿವಯ್ಯ ವರದಿ ಜಾರಿಗೆ ಆಗ್ರಹಿಸಿ ಧರಣಿ

Srinivasa Murthy VN
Updated On : 1 Jul 2013, 12:17 pm

ಶಿಡ್ಲಘಟ್ಟ:  ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಎಲ್ಲಾ ಜಾತಿಯ ಬಡವರ ಮೂಲ ಸೌಕರ್ಯ ಮತ್ತು ಡಾ. ಪರಮಶಿವಯ್ಯ ವರದಿ ಜಾರಿ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಕಚೇರಿ ಆವರಣದಲ್ಲಿ ಧರಣಿ ನಡೆಸಿತು. ಈ ಸಂದರ್ಭ ಮಾತನಾಡಿದ ವಕೀಲೆ ಲಕ್ಷ್ಮೀ, ದೇಶದಲ್ಲಿ ದಲಿತರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಸರ್ಕಾರಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ. ಪ್ರತಿವರ್ಷ ಬಜೆಟ್‌ನಲ್ಲಿ ದಲಿತರಿಗೆ ಪ್ರತ್ಯೇಕ ಮೀಸಲು ನೀಡುತ್ತಿದ್ದರೂ, ಸಮರ್ಪಕವಾಗಿ ತಲುಪದಿರುವುದು ವಿಪರ್ಯಾಸ. ರೈತರು ಕೇವಲ ಮಳೆ ನೀರಿನ ಮೇಲೆ ಅವಲಂಬಿತವಾಗಿ ಬೆಳೆ ಬೆಳೆದು ಜೀವನ ಸಾಗಿಸುವುದು ಕಷ್ಟ. ಕೆಲವೆಡೆ ರಸ್ತೆ ಸೌಕರ್ಯಗಳಿಲ್ಲದೆ ಹಳ್ಳಿಯಿಂದ ನಗರದ ವ್ಯಾಪ್ತಿಯವರೆಗೂ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕು ಎಂದರು. ತಾಲೂಕಿನಾದ್ಯಂತ 16 ಸಾವಿರಕ್ಕೂ ಹೆಚ್ಚು ಬಿಪಿಎಲ್ ಮತ್ತು ಅಂತ್ಯೋದಯ ಚೀಟಿ ಪಡಿತರ ಕಾರ್ಡ್‌ಗಳನ್ನು ಪ್ರತ್ಯೇಕವಾಗಿ ದಲಿತರ ಕಾಲೋನಿಗಳಲ್ಲಿ ತೆಗೆದುಹಾಕಲಾಗಿದೆ. ಆದರೆ, ಈ ಬಗ್ಗೆ ತಹಸೀಲ್ದಾರರಾಗಲಿ, ಆಹಾರ ಇಲಾಖೆಯವರಾಗಲಿ ಸ್ಪಷ್ಟನೆ ನೀಡಿಲ್ಲ.  ಈ ಕೂಡಲೇ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಬಡ ದಲಿತರಿಗೆ ಬಿಪಿಎಲ್ ಕಾರ್ಡ್‌ಗಳನ್ನು ನೀಡುವಂತೆ ಆದೇಶಿಸಲು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಲಕ್ಷಣರಾಜ್, ಅರುಣ್, ಅಶೋಕ್, ಮುನಿವೆಂಕಟಪ್ಪ, ತಿರುಪೆಳ್ಳಪ್ಪ, ಜಯಶೀಲಕುಮಾರ್ ಮುಂತಾದವರು ಹಾಜರಿದ್ದರು.

ಸಂಗೀತೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ
ಚಿಂತಾಮಣಿ:
ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಕೈವಾರ ಕ್ಷೇತ್ರದಲ್ಲಿ ಜುಲೈ 20 ರಿಂದ 22 ರವರೆಗೆ ನಡೆಯುವ ರಾಷ್ಟ್ರಮಟ್ಟದ ಸಂಗೀತೋತ್ಸವ ಮತ್ತು ಗುರುಪೂಜಾ ಮಹೋತ್ಸವದ ಆಹ್ವಾನಪತ್ರಿಕೆಯನ್ನು ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಸನ್ನಿಧಿಯಲ್ಲಿ ಧರ್ಮಾಧಿಕಾರಿಗಳಾದ ಡಾ.ಎಂ.ರಾ. ಜಯರಾಮುರವರು ಸದ್ಗುರುಗಳಿಗೆ ಸಮರ್ಪಿಸುವುದರ ಮೂಲಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಎಂ.ಆರ್. ಜಯರಾಮುರವರು ಮಾತನಾಡುತ್ತಾ, ನಮ್ಮ ಧಾರ್ಮಿಕ ಪರಂಪರೆಯಲ್ಲಿ ಗುರುವಿಗೆ ಮಹತ್ವದ ಸ್ಥಾನ ನೀಡಿದ್ದಾರೆ. ಅಂತಹ ಗುರುಗಳ ಪೂಜೆ ಮತ್ತು ಸಂಗೀತೋತ್ಸವ ಗುರುಪೂರ್ಣಿಮೆಯ ವಿಶೇಷವಾಗಿ 3 ದಿನಗಳ ನಿರಂತರ 72 ಗಂಟೆಗಳ ಕಾಲ ಶ್ರೀಕ್ಷೇತ್ರದಲ್ಲಿ ನಡೆಯುತ್ತಿದೆ ಎಂದರು. ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕರಾದ ಬಾಲಕೃಷ್ಣ ಭಾಗವತರ್‌ರವರು ಮಾತನಾಡಿ, ಜು.20 ಶನಿವಾರ ಬೆ.6 ಗಂಟೆಗೆ ಗುರುಪೂಜೆ ಸಂಗೀತೋತ್ಸವ ಆರಂಭ ಎಂದರು.

'ಶಿಕ್ಷಣ ಪಡೆದು ಸ್ವಾವಲಂಬನೆ ಸಾಧಿಸಿ'
ಶಿಡ್ಲಘಟ್ಟ:
ಪ್ರತಿಯೊಬ್ಬರೂ ವಿದ್ಯಾವಂತರಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ಜಿಪಂ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯುತ್ ಮಗ್ಗ ನೇಕಾರರ, ಹುರಿಕಾರರ ಮತ್ತು ಸಿದ್ಧ ಉಡುಪು ತಯಾರಕರ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್ ವಿತರಿಸಿ ಮಾತನಾಡಿದರು. 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ 444 ನೇಕಾರರ ಮಕ್ಕಳಿಗೆ ತಲಾ 1,200 ಗಳ ವಿದ್ಯಾರ್ಥಿ ವೇತನ,  ಎಸ್‌ಎಸ್‌ಎಲ್‌ಸಿ-ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಶಾಸಕ ಎಂ.ರಾಜಣ್ಣ, ಜಿಪಂ ಸದಸ್ಯೆ ಶಿವಲೀಲಾ, ಕೈಮಗ್ಗ ಹಾಗೂ ಜವಳಿ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಾ, ಜವಳಿ ತನಿಖಾಧಿಕಾರಿ ಜಮೀರಾ, ನೇಕಾರರ ಸಂಘದ ಅಧ್ಯಕ್ಷ ಬಿ.ಜಗದೀಶ್, ನಿರ್ದೇಶಕರಾದ ಎಸ್.ಕೆ.ನಾಗರಾಜ್, ಚಲಪತಿ, ರಮೇಶಬಾಬು, ನಾರಾಯಣಸ್ವಾಮಿ, ಮಂಜುನಾಥ ಮತ್ತಿತರರು ಇದ್ದರು.

ಸಂತ್ರಸ್ತರಿಗೆ ನೆರವು: ದಾನಿಗಳಿಗೆ ಸೂಚನೆ
ಚಿಕ್ಕಬಳ್ಳಾಪುರ:
ಉತ್ತರಾಖಂಡ ಪ್ರವಾಹ, ಭೂಕುಸಿತದಲ್ಲಿ ಸಿಲುಕಿರುವವರಿಗೆ ಸಹಾಯಹಸ್ತ ನೀಡಲು ಸಾರ್ವಜನಿಕರನ್ನು ಕೋರಿದ್ದು, ನೆರವು ನೀಡುವವರು ಹಣ Prime Minister Nationl Relief Fund  ಹೆಸರಿಗೆ ಡಿ.ಡಿ. ತೆಗೆದು ತಮ್ಮ ಕಚೇರಿಗೆ ಸಲ್ಲಿಸಬಹುದು. ಇತರೆ ಖಾಸಗಿ ವ್ಯಕ್ತಿಗಳು, ಸಂಘ ಸಂಸ್ಥೆಗಳಿಗೆ ಹಣ ನೀಡಬಾರದೆಂದು ತಹಶೀಲ್ದಾರ್ ನಟೇಶ್ ತಿಳಿಸಿದ್ದಾರೆ.

ಫಿಲ್ಟರ್ ಮರಳು ಅಡ್ಡೆಗಳ ಮೇಲೆ ದಾಳಿ: ಸಾಮಗ್ರಿ ವಶ
ಕ.ಪ್ರ.ವಾರ್ತೆ ಕೋಲಾರ ಜೂ.30

ಮುಳಬಾಗಿಲು ತಾಲೂಕಿನ ನಂಗಲಿ, ವಡ್ಡಹಳ್ಳಿ, ನಗವಾರ, ತಾತಿಕಲ್ಲು ಕೆರೆಗಳಲ್ಲಿ ಅಕ್ರಮ ಫಿಲ್ಟರ್ ಮರಳು ತಯಾರಿಸುತ್ತಿದ್ದ ಅಡ್ಡೆಗಳ ಮೇಲೆ ಅಧಿಕಾರಿಗಳು ಮತ್ತು ರೈತ ಸಂಘದ ಮುಖಂಡರು ದಾಳಿ ಮಾಡಿ ಫಿಲ್ಟರ್ ಮರಳು ತಯಾರಿಕೆಗೆ ಉಪಯೋಗಿಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ರೈತ ಸಂಘದ ಮುಖಂಡರು ಮುಳಬಾಗಿಲು ತಾಲೂಕಿನಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ದಂಧೆ ನಡೆಯುತ್ತಿದೆ ಎಂದು ತಹಸೀಲ್ದಾರ್ ರಾಮಮೂರ್ತಿ ಅವರಿಗೆ ದೂರು ನೀಡಿದ್ದರು. ಇದಕ್ಕೆ ಸಂಪಂಧಿಸಿದ ಅವರು ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಮರಳು ಅಡ್ಡೆಗಳ ಮೇಲೆ ದಾಳಿ ಮಾಡಿದಾಗ ಆರೋಪಿಗಳು ಪರಾರಿಯಾಗಿದ್ದಾರೆ.
ಫಿಲ್ಟರ್ ಮರಳು ತಯಾರಿಸಲು ಬಳಸಲಾಗಿದ್ದ ನೀರಿನ ಪೈಪುಗಳನ್ನು, ಮೋಟಾರ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಲಾಗಿದೆ.
ಮುಳಬಾಗಿಲು ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್, ರಾಯಲ್ಪಾಡು ಪಿ.ಎಸ್.ಐ. ಮಹದೇವಪ್ಪ, ಜಿಲ್ಲಾ ರೈತ ಸಂಘದ ಅಧ್ಯಕ್ಷ ನಾರಾಯಣಗೌಡ, ಮುಳಬಾಗಲು ತಾಲೂಕು ಅಧ್ಯಕ್ಷ ಗೊಟ್ಟುಕುಂಟೆ ಕೃಷ್ಣ, ವಿದ್ಯಾರ್ಥಿ ಮುಖಂಡ ರಂಜಿತ್‌ಕುಮಾರ್ ಹಾಗೂ ಪದಾಧಿಕಾರಿಗಳಾದ ಸೀನಪ್ಪ, ಸಾಗರ್, ವಿಕ್ರಮ ರಾಜ್, ಪುತ್ತೇರಿ ರಾಜ್ ದಾಳಿಯಲ್ಲಿ ಭಾಗವಹಿಸಿದ್ದರು.

ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್‌ಗೆ ದಕ್ಕದ ಜಿಪಂ, ತಾಪಂ
ಬಾಗೇಪಲ್ಲಿ:
ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯವಿರುವ ನಿಟ್ಟಿನಲ್ಲಿ ಜಿಪಂ ಮತ್ತು ತಾಪಂಗಳಲ್ಲಿ ಅಧಿಕಾರವನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ರವೀಂದ್ರ ವ್ಯಂಗ್ಯವಾಡಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಡಾ.ಎಂ.ವೀರಪ್ಪಮೊಯ್ಲಿ ತಮ್ಮ ಸ್ವಂತ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದಾಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜನರು ರಾಜಕೀಯವಾಗಿ ಪುನರ್‌ಜನ್ಮ ನೀಡಿದರು. ಆದರೆ ಸಚಿವರು ನೀಡಿರುವ ಭರವಸೆಗಳು ಇದುವರೆಗೂ ಈಡೇರದೆ ಇರುವುದು ಖಂಡನೀಯ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದ್ದು ನರೇಂದ್ರಮೋದಿ ಪ್ರಧಾನಿ ಮಂತ್ರಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಹಲವಾರು ಕಾರಣಗಳಿಂದ ಬಿಜೆಪಿ ಸೋತಿರಬಹುದು. ಆದರೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಅಧ್ಯಕ್ಷ-ಗೂಳೂರು ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನರೆಡ್ಡಿ, ಮುಖಂಡರಾದ ನಿಕಟಪೂರ್ವ ಅಧ್ಯಕ್ಷ ಜಿ.ಎಸ್.ಚೌಡರೆಡ್ಡಿ, ಕೃಷ್ಣಯ್ಯಶೆಟ್ಟಿ, ಮಂಜುಳ, ಕಿಶೋರ್‌ಕುಮಾರ್, ಕೃಷ್ಣಪ್ಪ, ವೆಂಕಟೇಶ್, ಭಾನುಪ್ರಕಾಶ್, ನಾಗೇಶ್ ಇದ್ದರು.

ಎಟಿಎಂನಿಂದ ಹಣ ಪಡೆದು ವಂಚನೆ: ದೂರು
ಕೆಜಿಎಫ್: 
ವ್ಯಕ್ತಿಯೊಬ್ಬರ ಎಟಿಎಂ ಕಾರ್ಡ್‌ನಿಂದ 35000 ಡ್ರಾ ಮಾಡಿ ವಂಚನೆ ಮಾಡಿರುವ ಘಟನೆ ನಡೆದಿದೆ. ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಹ್ಯಾರಿಸ್ ಸಗಾಯ್ ಎಂಬವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಖಾತೆ ಹೊಂದಿದ್ದರು. 26-6-2013 ರಂದು ಬೆಳಗ್ಗೆ ನಗರದ ಎಸ್‌ಬಿಎಂ ಎಟಿಎಂ ಕೇಂದ್ರದಲ್ಲಿ 3400 ಡ್ರಾ ಮಾಡಿ ನಂತರ ಎಟಿಎಂನ ಗಣಯಂತ್ರದ ಪ್ರತ್ಯುತ್ತರ ಸರಿಯಾಗಿ ಗಮನಿಸದೇ ಹಾಗೆಯೇ ಹೊರಬಂದಿದ್ದರು. ಅವರ ಹಿಂದೆಯೇ ಬಂದ ಅಪರಿಚಿತ ವ್ಯಕ್ತಿ ಎಟಿಎಂನ ಗಣಯಂತ್ರ ಕೇಳಿದ ಪ್ರತ್ಯುತ್ತರವನ್ನು ಪ್ರಶ್ನೆಗೆ 'ಹೌದು' ಎಂಬ ಬಟನ್ ಒತ್ತಿ 35000 ಹಣ ಡ್ರಾ ಮಾಡಿ ವಂಚಿಸಿದ್ದಾರೆ. ವಿಷಯ ತಿಳಿದ ನಂತರ ಹ್ಯಾರಿಸ್ ಸಗಾಯ್ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement