ಪಾಸ್ ಇದ್ರೂ ಬಸ್ ನಿಲ್ಲಿಸದ ಚಾಲಕರು
ಚಿಂತಾಮಣಿ: ಬಸ್ ಪಾಸ್ ಹೊಂದಿದ್ದರೂ ಬಸ್ಸಿನಲ್ಲಿ ಪ್ರಯಾಣಿಸುವ ಭಾಗ್ಯವಿಲ್ಲದಂತಾಗಿದೆ ಎಂದು ಚಿಂತಾಮಣಿ-ಕೋಲಾರ ರಸ್ತೆಯಲ್ಲಿ ಸಂಚರಿಸುವ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ತಾಲೂಕಿನ ಮೈಲಾಂಡ್ಲಹಳ್ಳಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿದ್ದು ಇಲ್ಲಿಗೆ ಕುರುಟಹಳ್ಳಿ ಹಾಗೂ ಸುತ್ತಮುತ್ತಲ ಹಲವು ಗ್ರಾಮಗಳ ಒಂದು ನೂರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಾರೆ.
ಈ ವಿದ್ಯಾರ್ಥಿಗಳು ಸಾರಿಗೆ ಇಲಾಖೆ ವತಿಯಿಂದ ಬಸ್ ಪಾಸುಗಳನ್ನು ಹೊಂದಿರುತ್ತಾರೆ. ಆದರೆ ಇದರಿಂದ ಅವರುಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಏಕೆಂದರೆ ಈ ಮಾರ್ಗಗಳಲ್ಲಿ ಸಂಚರಿಸುವ ಸರ್ಕಾರಿ ಬಸ್ಸುಗಳ ನಿರ್ವಾಹಕರು ಹಾಗೂ ಚಾಲಕರು ಬಸ್ಸುಗಳನ್ನು ನಿಲ್ಲಸದೆ ಹೊರಟು ಹೋಗುತ್ತಾರೆ. ಮತ್ತೆ ಕೆಲವರು ಶಾಲೆಯ ಸಮಯವನ್ನು ಮೀರಿ ಬರುವುದನ್ನು ರೂಢಿ ಮಾಡಿಕೊಂಡಿದ್ದಾರೆ.
ಬಸ್ಸುಗಳು ಖಾಲಿಯಿದ್ದರೂ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವ ಕನಿಷ್ಠ ಸೌಜನ್ಯವನ್ನೂ ತೋರಿಸುತ್ತಿಲ್ಲವೆಂಬುದು ಸಾರ್ವನಿಕರ ಮತ್ತು ವಿದ್ಯಾರ್ಥಿಗಳ ಆರೋಪವಾಗಿದೆ. ಸರ್ಕಾರವು ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ವತಿಯಿಂದ ಬಸ್ ಪಾಸುಗಳನ್ನು ನೀಡಿದರೆ, ನಿರ್ವಾಹಕರ ಹಾಗೂ ಚಾಲಕರ ಬೇಜವಾಬ್ದಾರಿಯಿಂದಾಗಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲವೆಂಬಂತಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ವಿದ್ಯಾರ್ಥಿಗಳಿಗಾಗುತ್ತಿರುವ ಅನಾನುಕೂಲಗಳನ್ನು ನಿವಾರಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದ್ದಾರೆ.
1 ಲಕ್ಷಕ್ಕೂ ಅಧಿಕ ಮೌಲ್ಯದ ಒಡವೆ ಕಳವು
ಬಾಗೇಪಲ್ಲಿ: ದುಷ್ಕರ್ಮಿಗಳು ಮನೆಯೊಂದರ ಬೀಗ ಮುರಿದು ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ಒಡವೆಗಳು ಸೇರಿದಂತೆ ವಾಹನದ ದಾಖಲೆಗಳನ್ನು ಹಾಡಹಗಲೇ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಚೇಳೂರು ಗ್ರಾಮದ ಶಾಂತಿನಗರ ಬಡಾವಣೆಯಲ್ಲಿ ನಡೆದಿದೆ. ಕೆ.ರಾಮಾಂಜನೇಯ ಎಂಬವರ ಮನೆಯಲ್ಲಿ ಯಾರು ಇಲ್ಲದೇ ಇರುವ ಸಮಯ ನೋಡಿ ಮನೆಯ ಬೀಗವನ್ನು ಮುರಿದು ಮನೆಗೆ ನುಗ್ಗಿದ ಕಳ್ಳರು ಬೀರು ಮುರಿದು ಬೀರುವಿನಲ್ಲಿದ್ದ 75 ಸಾವಿರ ಮೌಲ್ಯದ ನಕ್ಲೇಸ್, 25 ಸಾವಿರ ಮೌಲ್ಯದ ಓಲೆ ಸಟ್ ಹಾಗೂ ಬೆಳ್ಳಿ ಕಾಲು ಚೈನುಗಳು ಸೇರಿದಂತೆ ದ್ವಿಚಕ್ರ ವಾಹನದ ದಾಖಲೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ರಾಮಾಂಜನೇಯ ಪೊಲೀಸರಿಗೆ ದೂರು ನೀಡಿದ್ದು, ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.