ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬರದ ಭೀತಿ ಮಧ್ಯೆ ವರುಣನ ಪ್ರಾರ್ಥನೆ

Srinivasa Murthy VN
Updated On : 1 Jul 2013, 12:13 pm

ಮಳೆಯಿಲ್ಲದೇ ಕೆಜಿಎಫ್ ರೈತರು ಕಂಗಾಲು ಟಿ ಉತ್ತಮ ಬೆಳೆ ಆಸೆಯಿಂದ ಭೂಮಿ ಹದಗೊಳಿಸಿ ನಿರೀಕ್ಷೆ
-ಆರ್. ರಜನೀಕಾಂತ್
ಕ.ಪ್ರ.ವಾರ್ತೆ ಕೆಜಿಎಫ್ ಜೂ.30

ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವ ಕೋಲಾರ ಜಿಲ್ಲೆಯಲ್ಲಿ ಸುಮಾರು 8 ವರ್ಷಗಳಿಂದ ಮಳೆಯಿಲ್ಲದೆ ಬೆಳೆ ಬೆಳೆಯಲು ರೈತರು ಪರದಾಡುವಂತಾಗಿದೆ.
ಮರಳು ದಂಧೆಯಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸಾವಿರಾರು ಅಡಿ ಬೋರ್ ಕೊರೆದರೂ ನೀರು ಸಿಗುತ್ತಿಲ್ಲ. ಜನ-ಜಾನುವಾರಿಗೆ  ಕುಡಿಯಲು ನೀರಿಲ್ಲದೆ, ತತ್ವಾರ ಶುರುವಾಗಿದೆ. ಈ ಮಧ್ಯೆ ಸಮರ್ಪಕ ರಸಗೊಬ್ಬರ ಲಭ್ಯವಾಗದಿರುವುದು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
15 ದಿನಗಳ ಹಿಂದೆ ಕೆಜಿಎಫ್ ಕ್ಷೇತ್ರದಲ್ಲಿ ಬಿದ್ದ ಮುಂಗಾರು ಮಳೆಗೆ ಸಂತಸಗೊಂಡ ರೈತರು ತಮ್ಮ ಹೊಲ- ಗದ್ದೆಗಳಲ್ಲಿ ಉಳುಮೆ ಮಾಡಿದ್ದರು. ಬೇತಮಂಗಲ ಹೋಬಳಿಯ ಸುಂದರಪಾಳ್ಯಾ, ಕ್ಯಾಸಂಬಳ್ಳ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿತ್ತು. ರಾಗಿ, ಬತ್ತ, ಅವರೆ, ತೊಗರಿ ಮುಂತಾದ ಬೆಳೆಗಳನ್ನು ಬೆಳೆಯಲು ಎಲ್ಲಾ ಸಿದ್ಧತೆ ಕೈಗೊಂಡಿದ್ದರು. ಆದರೆ, ಭೂಮಿ ಉಳುಮೆ ಮಾಡಿ ತಿಂಗಳಾದರೂ ಮಳೆ ಕೈ ಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದಾರೆ.
ಇತ್ತ ತೋಟಗಾರಿಕೆ ಬೆಳೆಗಾರರು ಕೆರೆ, ಬಾವಿ ಮತ್ತು ಟ್ಯಾಂಕರ್ ಮೂಲಕ ಅಲ್ಪಸ್ವಲ್ಪ ನೀರು ತಂದು ಬೆಳೆ ಉಳಿಸಿಕೊಳ್ಳುವ ಹರಸಾಹಸ ಮಾಡುತ್ತಿದ್ದಾರೆ. ತಮ್ಮ 1-2 ಎಕರೆ ಜಮೀನಿನಲ್ಲಿ ಹನಿ ನೀರಾವರಿಯಿಂದ ಟೊಮೆಟೋ ಟೊಮೆಟೊ, ಕೋಸು, ಮೂಲಂಗಿ, ಕ್ಯಾರೆಟ್, ಮುಸುಕಿನ ಜೋಳ, ದೊಡ್ಡ ಮೆಣಸು ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಂತಹ ಬೆಳೆಗಳಿಂದ ರೈತರಿಗೆ ಉತ್ತಮ ಲಾಭ ಸಿಗದಿದ್ದರೂ ಸಾಲ ಮಾಡಿ ಬೆಳೆಗಳನ್ನು ಬೆಳೆಯುವ ರೈತರಿಗೆ ಸ್ವಲ್ಪಮಟ್ಟಿಗೆ ಉಸಿರಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರೈತರು.
ಈಗಾಗಲೇ ಭೂಮಿ ಸಿದ್ಧಪಡಿಸಿರುವ ರೈತರು ಬಿತ್ತನೆಬೀಜ, ರಸಗೊಬ್ಬರ ಸಂಗ್ರಹಿಸಿ, ಮಳೆಗಾಗಿ ಕಾಯುತ್ತಿದ್ದಾರೆ. ಉತ್ತಮ ಬೆಳೆ ಆಸೆ ಮನದಲ್ಲಿ ಹಸಿರಾಗಿಟ್ಟುಕೊಂಡು ವರುಣನ ಕೃಪೆಗಾಗಿ ಕಾಯುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement