ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಡಿಎಸ್‌ಎಸ್ ಪ್ರತಿಭಟನೆ
ಕ.ಪ್ರ.ವಾರ್ತೆ ಗೌರಿಬಿದನೂರು ಜೂ.30
ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಭಾನುವಾರ ಪ್ರತಿಭಟನೆ ನಡೆಯಿತು.
ಸಂಘಟನೆ ರಾಜ್ಯ ಸಂಚಾಲಕ ಭದ್ರಾವತಿ ಸತ್ಯ ನೇತೃತ್ವದಲ್ಲಿ ಡನೆದ ಪ್ರತಿಭಟನೆಯಲ್ಲಿ ಮಂಚೇಹಳ್ಳಿ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಎ.ಸುಧಾಕರರೆಡ್ಡಿ ಅವರ ದಲಿತ ವಿರೋಧಿ ನೀತಿ ಖಂಡಿಸಲಾಯಿತು. ಕೂಡಲೇ ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಾಲೂಕಿನಾದ್ಯಂತ 148 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ತ್ವರಿತವಾಗಿ ನೂತನ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಬೇಕು. ಒತ್ತುವರಿಯಾದ ದಲಿತರ ಸ್ಮಶಾನ ಭೂಮಿಯನ್ನು ತೆರವುಗೊಳಿಸಿ ಕಾಂಪೌಂಡ್ ನಿರ್ಮಿಸಬೇಕು ಎಂದರು.
ಈ ಸಂದರ್ಭ 29 ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಜಿಲ್ಲಾ ಸಂಚಾಲಕರಾದ ಕೆ.ವಿ. ವೆಂಕಟೇಶ್, ನಂಜುಂಡಪ್ಪ, ತಾಲೂಕು ಸಂಚಾಲಕರಾದ ಶಿವಶಂಕರ್, ಗಂಗಣ್ಣ, ರಮೇಶ್, ಬಾಲಕೃಷ್ಣ, ನಾಗರಾಜು, ಗಂಗಾಧರ್ ಮುಂತಾದವರು ಮಾತನಾಡಿದರು.
ಶಿಡ್ಲಘಟ್ಟ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸುರೇಂದ್ರಗೌಡ
ಶಿಡ್ಲಘಟ್ಟ: ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸುರೇಂದ್ರ ಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಗರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ವೆಂಕಟೇಶ್ ಮಾತನಾಡಿ, ಅಧ್ಯಕ್ಷರ ಅವಧಿ 3 ವರ್ಷದಾಗಿದ್ದು, ಮಹತ್ವದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳು ಬರುತ್ತಿವೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ಕೆಲಸ ಅಧ್ಯಕ್ಷರು ಮಾಡಬೇಕಾಗಿದೆ. ಇದರಿಂದ ಯಾರೇ ಅಧ್ಯಕ್ಷರಾಗಲಿ ನಾವುಗಳೆಲ್ಲ ಅವರಿಗೆ ಎಲ್ಲ ರೀತಿಯ ಸಹಕಾರ ಹಾಗೂ ಸಹಾಯ ನೀಡಲು ಸಿದ್ಧ ಎಂದು ತಿಳಿಸಿದರು. ಕೆಂಪರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಪಕ್ಷ ಸಂಘಟನೆಯ ಕೊರತೆ ಕಾಣುತ್ತಿದೆ. ಅಧ್ಯಕ್ಷ ಸ್ಥಾನದಲ್ಲಿರುವವರು ಹೆಚ್ಚಿನ ಹೊಣೆಗಾರಿಕೆ ಹೊರಬೇಕು. ಜನರು ಬಿಜೆಪಿ ಪಕ್ಷದ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಪ್ರಮುಖ ಬೆಳವಣಿಗೆಯಾಗಿದೆ. ಪ್ರಮುಖ ಕಾರ್ಯಕರ್ತರನ್ನು ಹಾಗೂ ಜನರನ್ನು ಒಗ್ಗೂಡಿಸಿ ಮುಂಚೂಣಿಯಲ್ಲಿ ನಿಂತುಕೊಂಡು ನಡೆಸುವ ಕಾರ್ಯ ಅಧ್ಯಕ್ಷರದ್ದಾಗಿದೆ. ಬರುವ ಲೋಕಸಭೆ ಚುನಾವಣೆಗೆ ದೃಢ ಸಂಕಲ್ಪ ಹಾಗೂ ಕಾರ್ಯಕರ್ತರ ಕಡೆ ಗಮನಹರಿಸಿ ಹೆಚ್ಚಿನ ಮತಗಳನ್ನು ಗಳಿಸುವ ಹಾಗೆ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರವೀಂದ್ರ, ಬಾಗೇಪಲ್ಲಿ ವೆಂಕಟೇಶ್, ಸದಾಶಿವ, ರಮೇಶ್, ಮುನಿವೆಂಕಟಪ್ಪ, ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.
ಆಯ್ಕೆ ಮುಂದೂಡಿಕೆ: ಇದರ ಮಧ್ಯೆ ಕಾರ್ಯಕ್ರಮದಲ್ಲಿ ಭಿನ್ನಮತ ಸ್ಫೋಟಗೊಂಡು ಗೊಂದಲ ನಿರ್ಮಾಣವಾಯಿತು. ಪ್ರಧಾನ ಕಾರ್ಯದರ್ಶಿಗಳ ಆಯ್ಕೆಯಲ್ಲಿ ಗೊಂದಲ ಉಂಟಾಗಿದ್ದರಿಂದ ಆಯ್ಕೆ ಪ್ರಕ್ರಿಯೆ ಮೂಂದೂಡಲಾಯಿತು.