ಮಕ್ಕಳ ಪ್ರಶ್ನಾ ಗುಣ ಚಿವುಟಬೇಡಿ: ಪ್ರೊ. ನಾಗರಾಜ್
ಕನ್ನಡಪ್ರಭವಾರ್ತೆ,ಕೋಲಾರ,ಜೂ.30
ವಿಜ್ಞಾನ ಕ್ಷೇತ್ರ ಇನ್ನಷ್ಟು ಬಲಿಷ್ಟವಾಗಬೇಕಾದರೆ ವೈಜ್ಞಾನಿಕ ಸಂಶೋಧನೆಗಳು ಹೆಚ್ಚಾಗಿ ನಡೆಯುವುದು ಅಗತ್ಯವೆಂದು ಪ್ರೊ.ಎಂ.ಆರ್.ನಾಗರಾಜ್ ಅಭಿಪ್ರಾಯಿಸಿದರು.
ತಾಲೂಕಿನ ಕೂತಾಂಡಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲಾ ಮಾಗದರ್ಶಿ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವಿಜ್ಞಾನ ದೈನಂದಿನ ಬದುಕಿಗೆ ಅತ್ಯವಶ್ಯಕವಾಗಿದ್ದು ಇದರಿಂದ ಆಗುವ ಸಾಧಕ-ಬಾಧಕಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.
ಮಕ್ಕಳಲ್ಲಿ ಸಹಜವಾಗಿ ಪ್ರಶ್ನೆ ಮಾಡುವ ಗುಣವಿರುತ್ತದೆ. ವಿಜ್ಞಾನವು ಪ್ರಶ್ನೆಯಿಂದಲೇ ಶುರುವಾಗಿ ಪ್ರಶ್ನೆಯಿಂದಲೇ ಮುಕ್ತಾಯಗೊಳ್ಳುತ್ತದೆ. ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಪ್ರಶ್ನಿಸುವ ಸಹಜ ಗುಣವನ್ನು ಚಿವುಟಿ ಹಾಕಬಾರದು ಎಂದು ಸಲಹೆ ನೀಡಿದರು.
ದೈನಂದಿನ ಬದುಕಿನಲ್ಲಿ ಕಾಣಸಿಗುವ ಅಂಶಗಳಿಂದಲೇ ಯೋಜನೆಗಳಿಗೆ ವಸ್ತು ಮತ್ತು ವಿನ್ಯಾಸಗಳನ್ನು ರೂಪಿಸಬೇಕಾಗಿದ್ದು, ವೈಜ್ಞಾನಿಕ ಸಂಶೋಧನೆಗಳು ಹೆಚ್ಚುವುದರಿಂದ ಅನೇಕ ವಿಚಾರಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಸುಮಾರು 40 ಶಾಲೆಗಳಿಂದ ಶಿಬಿರಾರ್ಥಿಗಳು ಹಾಜರಿದ್ದರು. ಪ್ರಾರಂಭದಲ್ಲಿ ಗಿಡ ನೆಡುವ ಮೂಲಕ ಎಂ.ಆರ್. ನಾಗರಾಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಜ್ಞಾನ ವಿಷಯ ಪರಿವೀಕ್ಷಕರಾದ ವೆಂಕಟೇಶ್, ತಜ್ಞ ಅನಿದಾಸ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಂಯೋಜಕಿ ಮಂಜುಳಾ ಭೀಮರಾವ್, ರಣವಂ ಚಾರಿಟಬಲ್ ಟ್ರಸ್ಟ್‌ನ ಹರೀಶ್‌ಕುಮಾರ್, ಲೇಖಕ ರಾಯಲಪಾಡು ರಾಘವೇಂದ್ರ ಇದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ವೆಂಕಟರಮಣ ಸ್ವಾಗತಿಸಿದರು.