ಶಾಸಕರು ಹೊಣೆ ಅರಿತರೆ ಜಿಲ್ಲೆ ಸಮಗ್ರ ಅಭಿವೃದ್ಧಿ
-ಪಾ.ಶ್ರೀ. ಅನಂತರಾಮ್
ಕ.ಪ್ರ.ವಾರ್ತೆ ಕೋಲಾರ ಜೂ.30
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡುವ ಹೊಣೆಯನ್ನು ಮತದಾರ ಪ್ರಭುಗಳು ಜನಪ್ರತಿನಿಧಿಗಳಿಗೆ ನೀಡಿದ್ದು ಜುಲೈನಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಹೆಚ್ಚಿನ ಲಾಭವಾಗುವ ರೀತಿ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ.
ಅತಿ ಹೆಚ್ಚು ದಲಿತರು, ಹಿಂದುಳಿದ ವರ್ಗದವರು ಹಾಗೂ ಕೃಷಿಯನ್ನೇ ನಂಬಿ ಬದುಕುತ್ತಿರುವ ಜನತೆಗೆ ಸರ್ಕಾರದ ವಿವಿಧ ಯೋಜನೆಗಳಡಿ ಹೆಚ್ಚಿನ ಅನುಕೂಲ ದೊರೆಯುವಂತಾಗಲು ವಿಧಾನಸಭೆಯ 6 ಮಂದಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿ ಬದ್ಧತೆ ಪ್ರದರ್ಶಿಸಬೇಕಾಗಿದೆ.
ಮಳೆಯಾಧಾರಿತ ಜಿಲ್ಲೆಗೆ ಶಾಶ್ವತ ನೀರಾವರಿಯೊಂದೇ ಪರಿಹಾರವಾಗಿದ್ದು ಜನಪ್ರತಿನಿಧಿಗಳು ಈ ಯೋಜನೆ ಆದಷ್ಟು ಬೇಗನೆ ಅನುಷ್ಠಾನ ಬರುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡದಿದ್ದರೆ ಜಿಲ್ಲೆ ಮರಳುಗಾಡು ಆಗುವುದರಲ್ಲಿ ಸಂಶಯವಿಲ್ಲ.
ಜಿಲ್ಲೆಯ ಜನತೆ ಮಳೆ ಕೊರತೆಯ ನಡುವೆಯೂ ಬದುಕಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಯಾರೊಬ್ಬರು ಐಷರಾಮಿ ಜೀವನಕ್ಕಾಗಿ ಹಂಬಲಿಸುತ್ತಿಲ್ಲ. ಉದ್ಯೋಗ, ವಸತಿ, ಕುಡಿಯುವುದಕ್ಕೆ ಶುದ್ಧವಾದ ನೀರು, ಒಳ್ಳೆಯ ರಸ್ತೆ,ಚರಂಡಿ, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕೇಳುವುದು ಮತದಾರರ ಹಕ್ಕು. ಈ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಜನಪ್ರತಿನಿಧಿಗಳು ಪ್ರಯತ್ನಿಸಿದರೆ ಜನತೆ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗುತ್ತದೆ.
ಕೋಲಾರ ಜಿಲ್ಲೆಯ ಜ್ವಲಂತ ಸಮಸ್ಯೆ ಎಂದರೆ ಶಾಶ್ವತ ನೀರಾವರಿ ಸೌಕರ್ಯ ಇಲ್ಲದಿರುವುದು, ರೈತ ಕಷ್ಟಪಟ್ಟು ಬೆಳೆದ ಆಹಾರ ಉತ್ಪನ್ನ, ತರಕಾರಿ, ಹಣ್ಣು, ಹೂವುಗಳಿಗೆ ನ್ಯಾಯ ಬೆಲೆ ಸಿಗದಂತಾಗಿರುವುದು, ಉಳ್ಳವರು ಬಡವರ ಸೌಕರ್ಯಗಳನ್ನು ಕಬಳಿಸಿ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುತ್ತಿದ್ದಾರೆ. ಪ್ರಾಕೃತಿಕ ಸಂಪತ್ತುಗಳಾದ ಮರಳು, ಕಲ್ಲು, ಮರ-ಗಿಡಗಳನ್ನು ಲೂಟಿ ಮಾಡುತ್ತಿದ್ದಾರೆ. ಇವನ್ನು ತಡೆಯಲು ಶಾಸಕರು ದಿಟ್ಟತನ ತೋರದಿದ್ದರೆ ಇನ್ನು 50 ವರ್ಷಗಳಾದರೂ ಜಿಲ್ಲೆ ಅಭಿವೃದ್ಧಿ ಕಾಣುವುದು ಅಸಾಧ್ಯ.
ರಮೇಶ್‌ಕುಮಾರ್ ಕಾಳಜಿ ವಹಿಸಬೇಕು: ಜಿಲ್ಲೆಯಿಂದ ಗೆದ್ದಿರುವ ಆರು ಮಂದಿ ಶಾಸಕರಲ್ಲಿ ಅತ್ಯಂತ ಹಿರಿಯ, ಅನುಭವಿ ಶಾಸಕರಾದ ಶ್ರೀನಿವಾಸಪುರದ ಕೆ.ಆರ್.ರಮೇಶ್‌ಕುಮಾರ್, ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳು ಅನುಷ್ಠಾನಕ್ಕೆ ಬರುವಂತೆ ನಿಗಾ ವಹಿಸಬೇಕಾಗಿದೆ. ಜತೆಗೆ ಉಳಿದ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾದರಿ ಜಿಲ್ಲೆಯನ್ನಾಗಿ ಮಾಡುವುದಕ್ಕೆ ನಾಯಕತ್ವ ವಹಿಸಿಕೊಳ್ಳಬೇಕು.
ಕಳೆದ ಬಾರಿ ಕೋಲಾರ ಕ್ಷೇತ್ರದಿಂದ ಪಕ್ಷೇತರರಾಗಿ ಗೆದ್ದು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದ ಆರ್.ವರ್ತೂರ್ ಪ್ರಕಾಶ್ ಎರಡನೇ ಬಾರಿಗೆ ಶಾಸಕರಾಗಿದ್ದಾರೆ. ಈಗ ಅವರ ಬಳಿ ಗುಟ್ಟದ ಕಾರು ಇಲ್ಲ. ಆದರೆ, ಸರ್ಕಾರದಿಂದ ಕೋಲಾರಕ್ಕೆ ಹೆಚ್ಚಿನ ಪ್ರಯೋಜನ ಗಿಟ್ಟಿಸಿಕೊಳ್ಳುವುದಕ್ಕೆ ಮತದಾರ ನೀಡಿರುವ ಅಸ್ತ್ರವನ್ನು ಸರಿಯಾಗಿ ಬಳಕೆ ಮಾಡಿದಲ್ಲಿ ಕೋಲಾರ ಕ್ಷೇತ್ರಕ್ಕಾದರೂ ನ್ಯಾಯ ಕಲ್ಪಿಸಬಹುದಾಗಿದೆ.
ಇನ್ನು ಬಂಗಾರಪೇಟೆ ಶಾಸಕ ಎಸ್. ಎನ್.ನಾರಾಯಣಸ್ವಾಮಿ, ಕೆಜಿಎಫ್‌ನ ವೈ.ರಾಮಕ್ಕ, ಮಾಲೂರಿನ ಕೋಡಿಹಳ್ಳಿ ಮಂಜುನಾಥಗೌಡ, ಮುಳಬಾಗಿಲಿನ ಕೊತ್ತೂರು ಮಂಜುನಾಥ ಅವರುಗಳು ವಿಧಾನಸಭೆಗೆ ಹೊಸಬರಾಗಿದ್ದು ಕ್ಷೇತ್ರದ ಕೆಲಸಕ್ಕೆ ಸಂಬಂಧಿಸಿದಂತೆ ಈಗಾಗಲೇ ಜನತೆ ಭರವಸೆಯಿಡುವ ರೀತಿಯಲ್ಲಿ ಹಜ್ಜೆ ಇಡುತ್ತಿದ್ದಾರೆ. ಈ ಹಜ್ಜೆಗಳು ಇನ್ನು 5 ವರ್ಷ ದಾರಿ ತಪ್ಪದ ರೀತಿಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಬೇಕಾಗಿದೆ.
ಪತ್ರಿಕಾ ದಿನಾಚರಣೆಗೆ ಆಹ್ವಾನ: ಜು.1 ರಂದು ಕೋಲಾರ ಜಿಲ್ಲಾ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿರುವ ಪತ್ರಿಕಾ ದಿನಾಚರಣೆಗೆ ಜಿಲ್ಲೆಯ ಶಾಸಕರನ್ನು ಆಹ್ವಾನಿಸಲಾಗಿದೆ. ಎಲ್ಲಾ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸುವರೆಂಬ ವಿಶ್ವಾಸವನ್ನು ಜನತೆ ಹೊಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಲ್ಲ ಶಾಸಕರು ಹಾಜರಾಗಿ ಜಿಲ್ಲೆಯ ಅಭಿವೃದ್ಧಿಗಾಗಿ ಪ್ರತಿಜ್ಞೆ ಸ್ವೀಕಾರ ಮಾಡಿ, ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವ ಮೂಲಕ ಆದರ್ಶ ಶಾಸಕರಾದಲ್ಲಿ ಕರ್ನಾಟಕ ಮಾತ್ರವಲ್ಲದೆ ದೇಶದ ಭೂಪುಟದಲ್ಲಿ ಕೋಲಾರ ಜಿಲ್ಲೆಗೆ ಒಂದು ವಿಶೇಷ ಮನ್ನಣೆ ಕಲ್ಪಿಸಿದಂತಾಗುತ್ತದೆ.