ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಟಿಎಂ ಮೂಲಕ ಶುದ್ಧ ಕುಡಿಯುವ ನೀರು

Srinivasa Murthy VN
Updated On : 12 Nov 2013, 12:22 pm

-ಪಾ.ಶ್ರೀ. ಅನಂತರಾಮ್
ಕೋಲಾರ: ಜಲ ಸಂವರ್ಧನೆ ಯೋಜನೆಯ ಅನುಷ್ಠಾನದಲ್ಲಿ ಸಾಧನೆ ಮಾಡಿ ರಾಷ್ಟ್ರದ ಗಮನ ಸೆಳೆದಿರುವ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಪಂ ಈಗ ಎಟಿಎಂ ಮೂಲಕ ಹಳ್ಳಿಯ ಜನರು ಶುದ್ಧ ನೀರು ಪಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
ಈ ಯೋಜನೆಯ ಅನುಷ್ಠಾನದಲ್ಲಿ ಅಖಿಲ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಎಂ. ಗೋಪಾಲ್ ಅವರ ಶ್ರಮವಿದ್ದು ಪ್ಲೋರೈಡ್ ನೀರಿನ ಬಳಕೆಯಿಂದ ಜನತೆ ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ನಿವಾರಣೆಗೆ ಹೆಬ್ಬಣಿ ಗ್ರಾಪಂ ಜನಪ್ರತಿನಿಧಿಗಳು ಕೈ ಜೋಡಿಸಿರುವುದರಿಂದ ಸುಮಾರು 15 ಗ್ರಾಮಗಳ ಜನರು ಕಡಿಮೆ ಹಣದಲ್ಲಿ ಶುದ್ಧೀಕರಿಸಿದ ಕುಡಿಯುವ ನೀರನ್ನು ಹೊಂದಲು ಸಹಾಯವಾಗಿದೆ.
ಹೆಬ್ಬಣಿ ಗ್ರಾಪಂನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಎಟಿಎಂ ಮೂಲಕ ಶುದ್ಧ ನೀರು ಒದಗಿಸುವ ಯೋಜನೆ ಜಾರಿಗೆ ತರಲಾಗಿದ್ದು ಇದಕ್ಕೆ ಕೇವಲ 1 ಲಕ್ಷ ರು. ಖರ್ಚು ಮಾಡಲಾಗಿದೆ.
ಬೆಂಗಳೂರಿನ ಎಕ್ಸನ್ ಕಂಪನಿ ಈ ಘಟಕವನ್ನು ಅಳವಡಿಸಿದೆ. ಹೆಬ್ಬಣಿ ಗ್ರಾಪಂ ವ್ಯಾಪ್ತಿಯಲ್ಲಿ 1,600 ಮನೆಗಳಿದ್ದು ಸುಮಾರು 7,500 ಜನರು ವಾಸಲಾಗಿದ್ದಾರೆ. ಗ್ರಾಪಂ ಪ್ರತಿಯೊಂದು ಮನೆಯಿಂದ 150 ರು. ಮುಂಗಡವಾಗಿ ಸಂಗ್ರಹಣೆ ಮಾಡಿ ಎಟಿಎಂ ಕಾರ್ಡುಗಳನ್ನು ವಿತರಿಸಲಾಗುತ್ತಿದೆ.
ಎಟಿಎಂ ಕಾರ್ಡು ಹೊಂದಿರುವ ಗ್ರಾಹಕ 5 ರು.ಗಳಿಗೆ 25 ಲೀಟರ್, 10 ರು.ಗಳಿಗೆ 50 ಲೀಟರ್ ನೀರು ಪಡೆಯಬಹುದಾಗಿದೆ. ಕರೆನ್ಸಿ ಖಾಲಿಯಾದ ಮೇಲೆ ಗ್ರಾಹಕ ಮತ್ತೆ ಹಣ ಪಾವತಿಸಿ ಮೊಬೈಲ್‌ನಲ್ಲಿ ಹೇಗೆ ಕರೆನ್ಸಿ ಬಳಕೆ ಮಾಡಿ ಸೌಲಭ್ಯ ಪಡೆಯಬಹುದೋ ಅದೇ ರೀತಿ ಇಲ್ಲಿ ನೀರನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ.
ಪ್ರಸ್ತುತ ನೀರಿನ ಘಟಕದಲ್ಲಿ 3 ರಿಂದ 4 ಸಾವಿರ ಲೀಟರ್ ಸಂಗ್ರಹಣೆ ಮಾಡಿ ಜನತೆ ಬೇಡಿಕೆಯನ್ನು ಪೂರೈಸಲಾಗುತ್ತಿದೆ. ಖಾಸಗಿ ಮಿನರಲ್ ಕಂಪನಿಗಳು 20 ಲೀಟರ್ ನೀರಿನ ಕ್ಯಾನಿಗೆ 30 ರಿಂದ 40 ರು. ವಸೂಲಿ ಮಾಡುತ್ತಿವೆ. ನಾವು ವಿದ್ಯುತ್ ವೆಚ್ಚ ಹಾಗೂ ಸಿಬ್ಬಂದಿ ವೇತನಕ್ಕಾಗಿ ಕಡಿಮೆ ಹಣ ಪಡೆಯುತ್ತಿದ್ದೇವೆ. ರಾಜ್ಯದ ಎಲ್ಲಾ ಕಡೆ ಈ ರೀತಿಯ ಎಟಿಎಂ ಸೌಲಭ್ಯ ಅನುಷ್ಠಾನಗೊಂಡಲ್ಲಿ ಕಡಿಮೆ ವೆಚ್ಚದಲ್ಲಿ ಶುದ್ಧವಾದ ಕುಡಿಯುವ ನೀರು ಒದಗಿಸಬಹುದಾಗಿದೆಯಲ್ಲದೆ ಎಂದು ಯೋಜನೆಯ ರೂವಾರಿ ಎಂ. ಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement