ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಲಸ ಕೊಡಿಸುವ ನೆಪದಲ್ಲಿ ಅಮಾಯಕರ ಮಾರಾಟ

Srinivasa Murthy VN
Updated On : 12 Nov 2013, 12:21 pm

-ಎನ್.ವೆಂಕಟೇಶ್
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ನ. 11
ಜಿಲ್ಲೆಯಲ್ಲಿ ಮಹಿಳೆಯರು ನಾಪತ್ತೆಯಾಗುವ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ದಂಧೆಯ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.  
ಜಿಲ್ಲೆಯಲ್ಲಿ ನಾಪತ್ತೆಯಾದ ಮೂವರು ಮಹಿಳೆಯರನ್ನು ದುಷ್ಕರ್ಮಿಗಳು ನಯವಾಗಿ ವಂಚಿಸಿ ವೇಶ್ಯಾವಾಟಿಕೆ ಅಡ್ಡೆಗೆ ಮಾರಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಚುರುಕು ಕಾರ್ಯಾಚರಣೆ ಕೈಗೊಂಡು ಜಿಲ್ಲೆಯ ಮೂವರೊಂದಿಗೆ ಇತರೆ 9 ಮಹಿಳೆಯರನ್ನೂ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ನಯವಂಚಕರು ಮಹಿಳೆಯರನ್ನು ನಂಬಿಸಿ ಕೊಲ್ಕತಾ, ಮುಂಬೈ, ದೆಹಲಿ ಸೇರಿದಂತೆ ಮಹಾನಗರಗಳಿಗೂ ಕರೆದೋಯ್ದು ಮಾರಿರುವ ಶಂಕೆ ವ್ಯಕ್ತವಾಗಿದೆ. ಕೆಲವರ ಮಾತುಗಳನ್ನು ನಂಬಿ ತಮ್ಮವರನ್ನು ಬಿಟ್ಟು ಹೋದ ವಿದ್ಯಾರ್ಥಿನಿಯರು, ವಿವಾಹಿತೆಯರು ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡು, ಇದೀಗ ಅದರಿಂದ ಹೊರ ಬರಲಾಗದೇ ಒದ್ದಾಡುತ್ತಿದ್ದಾರೆ.
ಮಾರಾಟ ಹೆಚ್ಚಳ: ಆಂಧ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯಲ್ಲಿ ಮಹಿಳೆಯರ ಮಾರಾಟ ದಂಧೆಯೊಂದು ದೊಡ್ಡ ಸಮಸ್ಯೆಯಾಗಿದೆ. ಒಂದೆಡೆ ಆಂಧ್ರದಿಂದ ಮಹಿಳೆಯರನ್ನು ಕರೆಸಿಕೂಂಡು ವೇಶ್ಯಾವಾಟಿಕೆ ನಡೆಸುವುದು ಹೆಚ್ಚಾಗುತ್ತಿದೆ. ಮತ್ತೊಂದೆಡೆ ಮಧ್ಯವರ್ತಿಗಳು ಅಮಾಯಕ ಮಹಿಳೆಯರ ಕಷ್ಟಗಳಿಗೆ ನೆರವಾಗುವ ಭರವಸೆ ನೀಡಿ, ಕೆಲಸ ಕೊಡಿಸುವುದಾಗಿ ನಂಬಿಸುತ್ತಾರೆ. ವ್ಯವಸ್ಥಿತ ಯೋಜನೆಯಂತೆ ದೆಹಲಿ, ಮುಂಬೈನ ವೇಶ್ಯಾವಾಟಿಕೆ ಕೇಂದ್ರಗಳಿಗೆ ಕರೆದುಕೊಂಡು ಹೋಗಿ 50 ಸಾವಿರದಿಂದ-2 ಲಕ್ಷದವರೆಗೂ ಮಾರುತ್ತಿದ್ದಾರೆ. ಮಹಿಳೆಯರನ್ನು ನಂಬಿಸಿ ಕರೆದೊಯ್ಯಲು ಮಧ್ಯವರ್ತಿಗಳೂ ಸಕ್ರಿಯವಾಗಿದ್ದಾರೆ.
ಆದರೆ, ಇಂಥ ದಂಧೆ ಹೆಚ್ಚಾಗುತ್ತಿದ್ದರೂ ವಿವಿಧ ಕಾರಣಗಳಿಂದ ಬೆಳಕಿಗೆ ಬರುವುದು ಕಡಿಮೆ. ಕೌಟುಂಬಿಕ ಕಲಹ ಸೇರಿದಂತೆ ನಾನಾ ಕಾರಣಗಳಿಗಾಗಿ ತಮ್ಮ ಕುಟುಂಬದಿಂದ ದೂರ ಉಳಿದು ಒಬ್ಬಂಟಿಯಾಗಿರುವ ಮಹಿಳೆಯರು ನಾಪತ್ತೆಯಾದಾಗ ಪ್ರಕರಣಗಳು ದಾಖಲಾಗುವುದೇ ಇಲ್ಲ. ಈ ದಂಧೆಯಲ್ಲಿ ತೊಡಗಿಸಿಕೊಂಡಿರುವವರಿಗೆ ತಕ್ಕ ಪಾಠ ಕಲಿಸಲು ಮುಂದಾಗದೇ ಕೇವಲ ದೂರು ದಾಖಲಾದ ಪ್ರಕರಣದಲ್ಲಿ ಮಹಿಳೆಯರನ್ನು ರಕ್ಷಿಸಲು ಪೊಲೀಸರು ಗಮನ ಕೊಡುತ್ತಿರುವುದು ಮಾರಾಟ ದಂಧೆ ಹೆಚ್ಚಲು ಕಾರಣವಾಗಿದೆ.

ನಿದರ್ಶನಗಳು ಹಲವು
ಈ ಹಿಂದೆ ದೇವನಹಳ್ಳಿಯ ತನ್ನ ಗಂಡನ ಮನೆಯಿಂದ ಜಗಳವಾಡಿಕೊಂಡು ಬಂದು ಗುಡಿಬಂಡೆ ತಾಲೂಕಿನ ಮಹಿಳೆಯೊಬ್ಬಳನ್ನು ಬಾಗೇಪಲ್ಲಿಯ ರೇಷ್ಮಾ, ಡೆಲ್ಲಿ ಬುವಮ್ಮ, ಶಕೀರಾ ಎಂಬ ಮೂವರು ಮಹಿಳೆಯರು ಕೆಲಸ ಕೊಡಿಸುವುದಾಗಿ ಹೇಳಿ ಕರೆದುಕೊಂಡು ಹೋಗಿ ಮಾರಿದ್ದರು. ಈ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಚಿಂತಾಮಣಿ ತಾಲೂಕಿನಲ್ಲಿ ಬಾಲಕಿಯನ್ನು ಮಾಡೆಲ್ ಮಹಮದ್ ಅಲ್ಲಾವುದ್ದೀನ್ ಮತ್ತು ಸ್ಥಳೀಯ ನಿವಾಸಿ ಕತ್ರಿಗುಪ್ಪೆಯ ವೆಂಕಟೇಶ್ ದೆಹಲಿಗೆ ಕರೆದುಕೊಂಡು ಹೋಗಿ ಮಾರಿದ್ದಲ್ಲೇದೆ ಅಮಾಯಕ ಮಹಿಳೆಯರ ನೀಲಿಚಿತ್ರಗಳನ್ನು ತಯಾರಿಸುತ್ತಿದ್ದರು. ಈ ಪ್ರಕರಣವನ್ನು ಬೆನ್ನತ್ತಿದ್ದಾಗ ಆರೋಪಿಗಳು ಜಿಲ್ಲೆಯ ಚಿಂತಾಮಣಿ, ಬಾಗೇಪಲ್ಲಿ ಮತ್ತು ಗುಡಿಬಂಡೆಯಲ್ಲಿ ಅಮಾಯಕ ಯುವತಿಯರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿತ್ತು.

ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಮಹಿಳೆಯರನ್ನು ಕರೆದುಕೊಂಡು ಹೋಗಿ ಮಾರಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ವಿಶೇಷ ತಂಡವನ್ನು ರಚಿಸಲಾಗುವುದು. ದಂಧೆಯ ಹಿಂದೆ ಇರುವ ಜಾಲವನ್ನು ಭೇದಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಾಗುವುದು.
-ಎನ್.ಶಿವಪ್ರಸಾದ್, ಜಿಲ್ಲಾ ರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement