ದೇಶದ ಅಭದ್ರತೆಗೆ ಅಸಮರ್ಥ ನಾಯಕತ್ವ ಕಾರಣ
ಕ.ಪ್ರ.ವಾರ್ತೆ ಕೋಲಾರ ನ.11
ದೇಶದಲ್ಲಿ ಅಭದ್ರತೆ ಹೆಚ್ಚಲು ಅಸಮರ್ಥ ನಾಯಕತ್ವ ಕಾರಣವೆಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಮೇಶ್ ಗೌಡ ಟೀಕಿಸಿದರು. ಚೀನಾ ಭಾರತದ ಗಡಿಯಲ್ಲಿ 22 ಕಿಮೀ ಪ್ರದೇಶವನ್ನು ಅಕ್ರಮಿಸಿಕೊಂಡಿದೆ, ಪಾಕಿಸ್ತಾನದ ಸೈನಿಕರು ಭಾರತೀಯ ಯೋಧರ ಶಿರಚ್ಚೇಧ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನಾಯಕರಿಗೆ ಈ ಎರಡೂ ರಾಷ್ಟ್ರಗಳ ಅಟ್ಟಹಾಸ ಪ್ರಶ್ನಿಸುವ ಶಕ್ತಿ ಇಲ್ಲವಾಗಿದೆ ಎಂದು ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶ ಉಳಿಯಬೇಕಾದರೆ ನರೇಂದ್ರ ಮೋದಿಯಂತಹ ಸಮರ್ಥ ನಾಯಕರ ಅವಶ್ಯಕತೆಯಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹೆಚ್ಚು ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಇದನ್ನೇ ನಂಬಿ ಕೂರದೆ ಪಕ್ಷವನ್ನು ಪ್ರಬಲವಾಗಿ ಸಂಘಟಿಸುವ ಮೂಲಕ ನರೇಂದ್ರ ಮೋದಿಯವರಿಗೆ ಪ್ರಧಾನಿ ಪಟ್ಟ ಕಟ್ಟುತ್ತೇವೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಹಗರಣಗಳನ್ನು ಮನೆ ಮನೆಗೆ ಮುಟ್ಟಿಸಿ ಜನತೆಯಲ್ಲಿ ಅರಿವು ಮೂಡಿಸುವುದಾಗಿ ಹೇಳಿದರು.
ಈ ಬಾರಿ 12 ಕೋಟಿ ಹೊಸ ಯುವ ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶಗಳಿದ್ದು ಇವರನ್ನು ಮತದಾರರ ಪಟ್ಟಿಗೆ ಸೇರಿಸಲು ಪಕ್ಷದಿಂದ ಕಾರ್ಯಕ್ರಮ ರೂಪಿಸಲಾಗಿದೆ ಎಂದು ರಮೇಶ್ ಗೌಡ ತಿಳಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದಿಂದ 6 ಬಾರಿ ಗೆದ್ದಿರುವ ಕೆ.ಎಚ್. ಮುನಿಯಪ್ಪ ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಿಲ್ಲ, ರೈಲು ಬಿಟ್ಟಿರುವುದನ್ನೇ ದೊಡ್ಡ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಪಕ್ಷ ಸಂಘಟನೆ ಮತ್ತು ನ.17ರಂದು ನಡೆಯುವ ನರೇಂದ್ರ ಮೋದಿಯವರ ರ್ಯಾಲಿಯನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ನ.13 ರಂದು ಕೋಲಾರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದೆ. ಯುವ ಮೋರ್ಚಾ ರಾಜ್ಯಾಧ್ಯಕ್ಷ ಮುನಿರಾಜು ಅವರನ್ನು ಅದ್ಧೂರಿಯಾಗಿ ಸ್ವಾಗತಿಸುತ್ತೇವೆ. ಇದೇ ಸಂದರ್ಭದಲ್ಲಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಕಾರ್ಯದರ್ಶಿ ಓಂಶಕ್ತಿ ಚಲಪತಿ ತಿಳಿಸಿದರು.
ಮೋದಿ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಯುವಕರು ಕೂಪನ್ ಖರೀದಿ ಮಾಡಿದ್ದಾರೆ. ಜಿಲ್ಲೆಯಿಂದ ಸುಮಾರು 5 ಸಾವಿರ ಯುವಕರು ಬೆಂಗಳೂರಿಗೆ ಬರಲಿದ್ದಾರೆ. ಆನ್ ಲೈನ್ ಮೂಲಕವೇ ಹೆಚ್ಚು ಯುವಕರು ನೊಂದಣಿ ಮಾಡಿಕೊಂಡಿರುವುದು ಮೋದಿ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ನೀಡುವಂತೆ ಪಕ್ಷದ ವರಿಷ್ಟರಲ್ಲಿ ಕೋರಲಾಗಿದೆ, ಪ್ರಾಮಾಣಿಕರಿಗೆ ರಾಜಕೀಯ ಸ್ವಚ್ಚಾರಿತ್ರ್ಯವಿರುವವರಿಗೆ ಅವಕಾಶ ಸಿಗುವ ಭರವಸೆಯಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್, ಪದಾಧಿಕಾರಿಗಳಾದ ನರೇಶ್, ಶ್ರೀನಾಥ್, ಪ್ರದೀಪ್, ಪುನೀತ್ ಇದ್ದರು.