ರಸ್ತೆ ದುರಸ್ತಿಗೆ ಆಗ್ರಹಿಸಿ ನಾಡಕಚೇರಿ ಮುಂದೆ ಧರಣಿ
ಕ.ಪ್ರ.ವಾರ್ತೆ ಕೆಜಿಎಫ್ ನ. 11
ತೀರಾ ಹದಗೆಟ್ಟಿರುವ ನಗರದ ಪ್ರಮುಖ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಿಂಹ ಸೇನೆಯ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್ ನೇತೃತ್ವದಲ್ಲಿ ನಾಡಕಚೇರಿ ಮುಂದೆ ಧರಣಿ ನಡೆಸಲಾಯಿತು.
ನಗರದ ಪ್ರಮುಖ ರಸ್ತೆಗಳಾದ ಅಶೋಕ್‌ನಗರ, ಉರಿಗಾಂಪೇಟೆ, ಗೀತಾ ರಸ್ತೆ, ಉರಿಗಾಂ ರೈಲ್ವೆ ರಸ್ತೆ ಸೇರಿದಂತೆ ಇತರೆ ಮುಖ್ಯ ರಸ್ತೆಗಳು ತೀರಾ ಹದಗೆಟ್ಟಿದ್ದು ಹಳ್ಳಕೊಳ್ಳಗಳಿಂದ ಕೂಡಿದೆ. ಅಲ್ಲದೆ ಮಳೆ ಬಂದಾಗ ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆಯಲ್ಲಾ ಕೆಸರುಗದ್ದೆಯಾಗಿ ಕೆರೆಯಂತಾಗಿರುವ ರಸ್ತೆಗಳಲ್ಲಿ ಶಾಲಾ ಮಕ್ಕಳು, ಕಾಲೇಜಿನ ವಿದ್ಯಾರ್ಥಿಗಳು, ಮಹಿಳೆಯರು, ಆಟೋ, ದ್ವಿಚಕ್ರ ವಾಹನಗಳು ಸೇರಿದಂತೆ ಇತರೆ ವಾಹನಗಳ ಸಂಚಾರಕ್ಕೆ ತೀರಾ ತೊಂದರೆ ಉಂಟಾಗಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಕ್ಷೇತ್ರದ ಪ್ರತಿನಿಧಿಗಳು ರಸ್ತೆಗಳ ದುರಸ್ತಿಗೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೆ ಇಂತಹ ರಸ್ತೆಗಳಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರು ಓಡಾಡಲು ಸಾಧ್ಯವಾಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 6 ತಿಂಗಳಿಂದ ನಿಗರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಕನ್ನಡಪರ ಸಂಘಟನೆಗಳು ಹದೆಗೆಟ್ಟಿರುವ ರಸ್ತೆಗಳ ದುರಸ್ತಿಗೊಳಿಸಲು ನಿರಂತರವಾಗಿ ಹೋರಾಟಗಳನ್ನು ಪ್ರತಿಭಟನೆ ನಡೆಸುತ್ತಿದ್ದರೂ ಈವರೆಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿಕುಳಿತಿದ್ದು ಕ್ಷೇತ್ರದ ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂಧಿಸುತ್ತಿಲ್ಲ ಎಂದು ಆರೋಪಿಸಿ ಸರ್ಕಾರದ ವಿರುದ್ಧ, ಜನಪ್ರತಿನಿಧಿಗಳ ವಿರುದ್ಧ ಮತ್ತು ಅಧಿಕಾರಿಗಳ ವಿರುದ್ಧಘೋಷಣೆ ಕೂಗಿ ಪ್ರತಿಭಟಿಸಿದರು.
ಈ ಕೂಡಲೇ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಮುಂದಾಗದೆ ಹೋದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಗರಾಧ್ಯಕ್ಷ ಕುಮಾರನ್, ತಾಲ್ಲೂಕು ಅಧ್ಯಕ್ಷ ಹುಣಸನಹಳ್ಳಿ ರಮೇಶ್, ಮಂಜುಳ, ಗಣೇಶ್, ರಾಧಮ್ಮ, ಮುನಿರತ್ನ, ಕಮಲ್, ಮುನಿಸ್ವಾಮಿ ಮತ್ತಿತರರು ಹಾಜರಿದ್ದರು.
ಮಾಜಿ ಶಾಸಕರ ಬಣಕ್ಕೆ ಸೇರ್ಪಡೆ
ಚಿಂತಾಮಣಿ: ಕಸಬಾ ಹೋಬಳಿಯ ಜೆಡಿಎಸ್ ಮುಖಂಡೆ, ಕುರುಬೂರು ರೇಷ್ಮೆ ಬೆಳೆಗಾರರ ಸಂಘದ ಮಾಜಿ ನಿರ್ದೇಶಕಿ ಆನೂರು ಮುನಿರತ್ನಮ್ಮ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ. ಪಟ್ಟಣದ ಮಾಳಪ್ಪಲ್ಲಿ ಅಂಜನಿ ನಿವಾಸದಲ್ಲಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಸಮ್ಮುಖದಲ್ಲಿ ಡಾ.ಎಂ.ಸಿ.ಸುಧಾಕರ್ ಬಣಕ್ಕೆ ಸೇರ್ಪಡೆಯಾದರು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ವಿ.ಸುಬ್ಬಾರೆಡ್ಡಿ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಗೌರಮ್ಮನಾಗೇಶ್, ಅನೂರು ಶಿವಣ್ಣ, ಮಂಜುನಾಥ್, ನಾಗಭೂಷಣ್, ಶ್ರೀನಿವಾಸ್, ಆಂಜಪ್ಪ, ನಲ್ಲಪ್ಪ, ತಿಮ್ಮಯ್ಯ,ಅಂಬರೀಷ್, ಕಾಚಹಳ್ಳಿ ಗ್ರಾಪಂ ಸದಸ್ಯ ಶಿವಶಂಕರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.