ಕ್ಷಿಪ್ರ ಕಾರ್ಯಾಚರಣೆ; ನಕಲಿ ನೋಟು ದಂಧೆಕೋರರ ಸೆರೆ
ಬಾಗೇಪಲ್ಲಿ: ಸ್ಥಳೀಯ ಪೊಲೀಸರು ಕ್ಷಿಪ್ರಕಾರ್ಯಾಚರಣೆಯಲ್ಲಿ ನಕಲಿ ನೋಟು ಚಲಾವಣೆ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ತಂಡವನ್ನು ಬಂಧಿಸಿದ್ದು, ಅವರಿಂದ ಸುಮಾರು 30 ಲಕ್ಷರು.ಗಳ ನಕಲಿ ನೋಟಿನ ಕಂತೆ ಮತ್ತು 3 ಲಕ್ಷ ರು. ಮೌಲ್ಯದ ಚಿನ್ನದ ಬಿಸ್ಕೆಟ್ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಗೂಳೂರು ಮಾರ್ಗವಾಗಿ ಬಾಗೇಪಲ್ಲಿ ಪಟ್ಟಣಕ್ಕೆ ಟಾಟಾ ಇಂಡಿಕಾ ಕಾರಿನಲ್ಲಿ ನಕಲಿ ನೋಟು ಸಾಗಾಣಿಕೆ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳ ಕಾರನ್ನು ಬೆನ್ನಟ್ಟಿದ್ದಾರೆ. ಆಗ ಪೊಲೀಸರನ್ನು ಕಂಡು ಆರೋಪಿಗಳು ತಪ್ಪಿಸಿಕೊಳ್ಳುವ ಯತ್ನ ನಡೆಸಿದರೂ ಪಟ್ಟಣದ ಗೂಳೂರು ರಸ್ತೆಯಲ್ಲಿ ಆರೋಪಿಗಳು ಮಾಲು ಸಮೇತ ಸಿಕ್ಕಿ ಬಿದ್ದಿದ್ದಾರೆ. ನಂತರ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಪಟ್ಟಣಕ್ಕೆ ಸಮೀಪದ ನಾರೇಪಲ್ಲಿ ಗ್ರಾಮದ ವೆಂಕಟೇಶ್ (ಕೋಟಾ ವೆಂಕಟೇಶ್), ಆಂಧ್ರ ಪ್ರದೇಶದ ಪೂರ್ವಗೋದಾವರಿ ಜಿಲ್ಲಾ ಬಟ್ಲಾಪುರಂ ಗ್ರಾಮದ ಸತ್ಯನಾರಾಯಣಶೆಟ್ಟಿ, ಸೂರ್ಯನಾರಾಯಣ, ಪದ್ಮ ಎಂಬವರನ್ನು ಬಂಧಿಸಿದ್ದಾರೆ. ಕಾರು ಚಾಲಕ ಮುಬಾರಕ್ ಬಾಗೇಪಲ್ಲಿ ಪಟ್ಟಣದ ನಿವಾಸಿಯಾಗಿದ್ದು ಬಂಧಿತರಿಂದ ಒಂದು ಸಾವಿರ ಬೆಲೆಬಾಳುವ ನಕಲಿ ನೋಟುಗಳ ಹೋಲಿಕೆಯ 30 ಕಂತೆಗಳನ್ನು ಮತ್ತು 3 ಲಕ್ಷ ರು. ಮೌಲ್ಯದ ಚಿನ್ನದ ಬಿಸ್ಕೆಟ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮಹಿಳೆ ಚಿನ್ನದ ಬಿಸ್ಕೆಟ್ನ್ನು ತನ್ನ ಒಳ ಉಡುಪಿನಲ್ಲಿ ಇಟ್ಟುಕೊಂಡಿದ್ದಳು. ಇವರು ನಕಲಿ ನೋಟುಗಳನ್ನು ತೋರಿಸಿ ಅಸಲಿಯಂತೆ ನಂಬಿಸಿ ಮೋಸ ಮಾಡವ ದಂಧೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ.
ಕ್ರೀಡೆಗಳು ಆತ್ಮವಿಶ್ವಾಸ ಮೂಡಿಸುತ್ತವೆ: ಸುಬ್ರ್ಮಣ್ಯ ಸೇಠ್
ಚಿಂತಾಮಣಿ: ಕ್ರೀಡೆಗಳು ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತವೆ ಎಂದು ತಾಲೂಕು ಹಿರಿಯ ನಾಗರಿಕರ ವೇದಿಕೆ ಗೌರವಾಧ್ಯಕ್ಷ ಸುಬ್ರ್ಮಣ್ಯಂ ಸೇಠ್ ಅಭಿಪ್ರಾಯ ಪಟ್ಟರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನಿವೃತ್ತ ಸರ್ಕಾರಿ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿ, ಆಟೋಟಗಳಲ್ಲಿ ಸೋಲು ಗೆಲವುಗಳು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವೆಂದರು. ನಿವೃತ್ತ ಉಪನ್ಯಾಸಕ ಶ್ರೀರಾಮಮೂರ್ತಿ, ಸತ್ಸಂಗದಿಂದಾಗುವ ಸತ್ಪಯೋಜನಗಳ ಬಗ್ಗೆ ವಿತರಿಸಿದರು. ನಿವೃತ್ತ ಶಿಕ್ಷಕ ರೆಡ್ಡೆಪ್ಪಚಾರ್ ಕನ್ನಡ ಭಾಷೆಯ ಸ್ಥಿತಿ-ಗತಿಗಳ ಬಗ್ಗೆ ಬೆಳಕು ಚೆಲ್ಲಿದರು. ಡಾ.ಎಲ್.ಆರ್. ವರದರಾಜನ್ ವೃದ್ಧಾಪ್ಯದಲ್ಲಿ ಬರುವ ಖಾಯಿಲೆಗಳು ಹಾಗೂ ಮುಂಜಾಗೃತ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಸಂಘದ ಉಪಾಧ್ಯಕ್ಷ ಸತ್ಯಕೀರ್ತಿ ಹಾಗೂ ಕಾರ್ಯದರ್ಶಿ ವೆಂಕಟರವಣ ಮಾತನಾಡಿದರು.