'ಬಡವರಿಗೆ ನಿವೇಶನ: ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ'
ಕ.ಪ್ರ.ವಾರ್ತೆ ಗೌರಿಬಿದನೂರು ನ. 12
ಬಡವರಿಗೆ ನಿವೇಶನ ನೀಡಲು ತಹಸೀಲ್ದಾರ್, ತಾಪಂ ಇಒ ಮತ್ತು ಸಿಬ್ಬಂದಿ ಸಭೆಸೇರಿ ಗ್ರಾಪಂ ಮಟ್ಟದಲ್ಲಿ ಬಡವರಿಗೆ ನಿವೇಶನ ನೀಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದ ತಾಪಂ ಸಾಮರ್ಥ್ಯಸೌಧದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ಷಾನುಗಟ್ಟಲೆ ಕಡತಗಳು ಕೊಳೆಯುತ್ತಿರುವುದನ್ನು ನಿವಾರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಲು ಸೂಚಿಸಿದರು. ನಿವೇಶನ ಹಂಚುವಾಗ ಲಾಟರಿ ಮೂಲಕ ಆಯ್ಕೆಮಾಡಬೇಕೆಂಬುದು ಅವೈಜ್ಞಾನಿಕ ಪದ್ಧತಿ ಇಂದರಿಂದ ಬಡವರಿಗೆ ನಿವೇಶನ ನೀಡಲು ಸಾಧ್ಯವಿಲ್ಲ. ಬಡವರಿಗೆ ತಲುಪುವಂತೆ ಬದಲಿ ವ್ಯವಸ್ಥೆ ಮೂಲಕ ನಿವೇಶನ ಹಂಚಲು ವ್ಯವಸ್ಥೆ ಮಾಡಿ ಎಂದರು.
ಗ್ರಾಮೀಣ ಪ್ರದೇಶಗಳಲಿ ರಸ್ತೆ, ಬೀದಿ ದೀಪ, ಕುಡಿಯುವ ನೀರು, ಕೆರೆಗಳ ಪನಃಶ್ಚೇತನ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ರು. 5 ಕೋಟಿ ಬಿಡುಗಡೆಯಾಗಿದ್ದು ಶೌಚಾಲಯ ನಿರ್ಮಾಣ, ಕೆರೆಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಡಿಸೆಂಬರ್ ಅಂತ್ಯಕ್ಕೆ ತಾಲೂಕಿನ ಇಲಾಖಾ ಕಾಮಗಾರಿಗಳು ಮುಗಿಸಬೇಕೆಂದು ಸೂಚನೆ ನೀಡಿದರು. ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಹೋಬಳಿ ಮಟ್ಟದಲ್ಲಿ ಉಪ ಪೊಲೀಸ್ ಠಾಣೆ ಸ್ಥಾಪಿಸಲು ವೃತ್ತ ನಿರೀಕ್ಷಕ ನಾಗರಾಜುರವರಿಗೆ ಮಾರ್ಗದರ್ಶನ ನೀಡಿದರು.
ಪಶು ವೈದ್ಯಾಧಿಕಾರಿಗಳ ಬಗ್ಗೆ ಮಾಹಿತಿ ಕೇಳಿದಾಗ ವಿವರಣೆ ನೀಡಿದ ವೈದ್ಯಾಧಿಕಾರಿ, ತಾಲೂಕಿನಾದ್ಯಂತ ಕಾಲು ಬಾಯಿ ಜ್ವರಕ್ಕೆ ಈಗಾಗಲೇ 32 ಹಸುಗಳು ಬಲಿಯಾಗಿದ್ದು ಐದು ಸುತ್ತು ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದೀಗ ರೋಗ ಹತೋಟಿಗೆ ಬಂದಿದೆ ಎಂದರು. ಪಟ್ಟಣದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಸಮಸ್ಯೆ ಹೆಚ್ಚಿದ್ದು ಇದನ್ನು ನಿವಾರಿಸಲು ಪರಸಭೆ ಸೂಕ್ತ ಜಾಗ ನೀಡಬೇಕೆಂದು ಮುಖ್ಯಾಧಿಕಾರಿಗೆ ತಿಳಿಸಿದರು. ಶಾಲಾ ಆವರಣದಲ್ಲಿ ಗಿಡಮರಗಳು ಬೆಳಸುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕುಂದು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕಬಳ್ಳಾಪು ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ತೋಟಗಾರಿಕೆ, ರೇಷ್ಮೆ ಇಲಾಖೆಯಿಂದ ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಡೆದಿಲ್ಲ, ಇದಕ್ಕೆ ಕಾರಣ ರೈತರಿಗೆ ಸರ್ಕಾರದಿಂದ ಬರುವ ಯೋಜನೆಗಳ ಅರಿವು ಮೂಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂದು ಹೇಳಿದರು. ಇಒ ರೆಡ್ಡಪ್ಪ, ವೃತ್ತ ನಿರೀಕ್ಷಕ ಕೆ.ನಾಗರಾಜು, ಕೃಷಿ ಅಧಿಕಾರಿ ಅನುರೂಪ, ವಿವಿಧ ಇಲಾಖೆಗಳ ಅಧಿಕಾರಿಗಳು, ತಾಪಂ ಅಧ್ಯಕ್ಷ, ಉಪಾಧ್ಯಕ್ಷರು ಇದ್ದರು.