ಬಾಲಕಿ ಮೇಲೆ ಅತ್ಯಾಚಾರ; ಪೋಷಕರಿಂದ ಪ್ರತಿಭಟನೆ
ಚಿಂತಾಮಣಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಪೋಷಕರು ಪೊಲೀಸ್ ಠಾಣೆ ಮುಂಭಾಗದಲ್ಲಿ ಧರಣಿ ಕುಳಿತಿದ್ದಾರೆ.
ಘಟನೆ ವಿವರ: ತಾಲೂಕಿನ ಭಕ್ತರಹಳ್ಳಿ ಗ್ರಾಮದ ಆಂಜಪ್ಪ ಎಂಬವರ ಮಗಳಾದ 17 ವರ್ಷದ ರೂಪ (ಹೆಸರು ಬದಲಿಸಲಾಗಿದೆ) ಎಂಬ ಬಾಲಕಿ ಕಳೆದ ನ.10 ರಂದು ಸಂಜೆ ತೋಟದಿಂದ ಮನೆಗೆ ಒಬ್ಬಂಟಿಯಾಗಿ ಬರುತ್ತಿರುವಾಗ ಅದೇ ಗ್ರಾಮದ ನವೀನ್ ಅಲಿಯಾಸ್ ಡೇವಿಡ್ ಹಾಗೂ ಮುನೇಂದ್ರ ಎಂಬಿಬ್ಬರು ಸೇರಿ ಆಕೆಯನ್ನು ಎತ್ತುಕೊಂಡು ಹೋಗಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಬಾಲಕಿ ಪೊಲೀಸರ ಮುಂದೆ ನಡೆದ ಘಟನೆ ವಿವರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಸಾರ್ವಜನಿಕರ ಸಹಕಾರದಿಂದ ಸಮಾಜದಲ್ಲಿ ಶಾಂತಿ
ಬಾಗೇಪಲ್ಲಿ: ಸಾರ್ವಜನಿಕರು ಇಲಾಖೆಯೊಂದಿಗೆ ಕೈಜೋಡಿಸಿದಾಗ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸುಲಭವಾಗುತ್ತದೆ ಎಂದು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ಆರಕ್ಷಕ ಉಪ ನಿರೀಕ್ಷ ಜೆ.ಎನ್. ಆನಂದ್ ಕುಮಾರ್ ತಿಳಿಸಿದರು.
ತಾಲೂಕಿನ ಗೂಳೂರು ಹೋಬಳಿ ಜಿ. ಮದ್ದೇಪಲ್ಲಿ ಕ್ರಾಸ್ನಲ್ಲಿ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ವತಿಯಿಂದ ಏರ್ಪಡಿಸಿದ್ದ ಸಾಮಾಜಿಕ ಅರಿವು ಮತ್ತು ಜನ ಸಂಪರ್ಕ ಸಭೆಯಲ್ಲಿ ಮಾತನಾಡಿ, ಭಟ್ಟಿ ಸಾರಾಯಿ, ಸೇಂದಿ ತಯಾರಿಸುವ ಕೆಲಸದಲ್ಲಿ ನಿರತರಾದವರು ಹಣದ ಆಸೆಗಾಗಿ ಕಾನೂನು ಬಾಹಿರವಾಗಿ ತಯಾರಿಸಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಾರೆ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಪ್ರಾಣವನ್ನೇ ಬಲಿ ತೆಗೆದುಕೊಳ್ಳತ್ತದೆ ಎಂದರು. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರತರಾಗಿರುವವರ ಬಗ್ಗೆ ಮಾಹಿತಿ ನೀಡಿದರೆ ದುಷ್ಕರ್ಮಿಗಳ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು. ಅಬಕಾರಿ ಜಾರಿ ಮತ್ತು ಲಾಟರಿ ನಿಷೇದ ದಳದ ಸಿಬ್ಬಂದಿ ಮುರಳಿ, ನಾಗೇಶ್, ನಾರಾಯಣ, ಹನುಮಂತು, ನರಸಿಂಹಪ್ಪ ಇದ್ದರು.