ಮನೆ ನಿರ್ಮಾಣಕ್ಕೆ ಅಧಿಕ ಅನುದಾನ
ಕನ್ನಡಪ್ರಭ ವಾರ್ತೆ ಕೋಲಾರ ನ.12
ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ಮೇಲೆ ಬಡವರು ಮನೆ ಕಟ್ಟಿಕೊಳ್ಳಲು ಹಿಂದೆ ನಿಗದಿ ಮಾಡಿದ್ದ ರು. 75 ಸಾವಿರ ಸಹಾಯ ಧನವನ್ನು 1.20 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, 2014ರ ಬಜೆಟ್ನಲ್ಲಿ ವಸತಿ ಇಲಾಖೆಗೆ ಹೆಚ್ಚಿನ ಹಣ ನೀಡಿದಲ್ಲಿ ಸಹಾಯ ಧನದ ಮೊತ್ತವನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿ ವಸತಿ ಸಚಿವ ಡಾ.ಎಂ.ಎಚ್. ಅಂಬರೀಷ್ ಭರವಸೆ ನೀಡಿದರು.
ಮಂಗಳವಾರ ಕೋಲಾರ ಜಿಪಂನಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ವಸತಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಬಡವರ ಹಿತದೃಷ್ಟಿಯಿಂದ ಕೊಂಚ ಮಟ್ಟಿಗೆ ಸಡಲಿಕರಿಸಲಾಗಿದ್ದು ಅಗತ್ಯ ಬಿದ್ದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮುಂದಿನ ವರ್ಷದಲ್ಲಿ ನಿಯಮಗಳಿಗೆ ತಿದ್ದುಪಡಿ ತರಲಾಗುವುದೆಂದು ಹೇಳಿದರು.
ಬಡವರು ಸ್ವಂತ ಮನೆಗಳನ್ನು ಹೊಂದಲು ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು, ಜನಪ್ರತಿನಿಧಿಗಳು ಜನತೆಯಲ್ಲಿ ಅರಿವು ಮೂಡಿಸಿ ವಸತಿ ಯೋಜನೆ ಯಾವುದೇ ಸಮಸ್ಯೆ ಇಲ್ಲದೆ ಅನುಷ್ಠಾನಕ್ಕೆ ತರಲು ವಸತಿ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
2.20 ಲಕ್ಷ ಮನೆಗಳು ರದ್ದು: ರಾಜ್ಯದಲ್ಲಿ ಅನೇಕ ಕಾರಣಗಳಿಂದ 2.20 ಲಕ್ಷ ಮನೆಗಳು ರದ್ದು ಆಗಿವೆ. ಇದಕ್ಕೆ ಸರ್ಕಾರ ಕಾರಣವಲ್ಲ, ನಮ್ಮ ಸರ್ಕಾರ ಬಂದ ಮೇಲೆ ರದ್ದು ಪಡಿಸಲಾಗಿದ್ದ ಮನೆಗಳ ಪೈಕಿ 90 ಸಾವಿರ ಮನೆಗಳನ್ನು ಮರು ಮಂಜೂರು ಮಾಡಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ಮಾತ್ರವಲ್ಲದೆ ಪಟ್ಟಣ ಪ್ರದೇಶದ ಬಡ ಜನರು ಮನೆ ಕಟ್ಟಲು ಯೋಜನೆ ಜಾರಿಗೆ ತರಲಾಗಿದ್ದು ಅರ್ಹ ಫಲಾನುಭವಿಗಳ ಪಟ್ಟಿ ವಸತಿ ಇಲಾಖೆಗೆ ಬರದಿರುವುದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದರು.
ವಸತಿ ಇಲಾಖೆ ಕಳೆದ 5 ತಿಂಗಳಲ್ಲಿ 1.50 ಲಕ್ಷ ಮನೆಗಳನ್ನು ನಿರ್ಮಿಸಿದೆ. ಬಾಕಿ ಇರುವ ಮನೆಗಳಲ್ಲಿ 8 ಲಕ್ಷ ಮನೆಗಳನ್ನು ಐದು ವರ್ಷದಲ್ಲಿ ಮುಗಿಸಲು ಗುರಿ ಹೊಂದಲಾಗಿದೆ ಎಂದರು.
ಕೋಲಾರ ಜಿಲ್ಲೆಗೆ 41 ಸಾವಿರ ಮನೆಗಳು ಮಂಜೂರಾಗಿದೆ. ಈ ಪೈಕಿ 5 ಮನೆಗಳು ಕಟ್ಟಲಾಗಿದ್ದು 20 ಸಾವಿರ ಮನೆಗಳು ಪ್ರಗತಿಯಲ್ಲಿದೆ, 15 ಸಾವಿರ ಮನೆಗಳು ರದ್ದು ಮಾಡಲಾಗಿದೆ ಎಂದ ಸಚಿವ ಅಂಬರೀಷ್, ಜಿಲ್ಲಾ ಆಡಳಿತ 27 ಎಕರೆ ಭೂಮಿಯನ್ನು ಗುರುತು ಮಾಡಿದ್ದು ನರಸಾಪುರದಲ್ಲಿ ಕೈಗಾರಿಕೆಗಳು ಹೆಚ್ಚಾಗಿ ಬರುತ್ತಿರುವುದರಿಂದ ವಸತಿ ಯೋಜನೆಗೆ ಬೇಕಾದ ಅಗತ್ಯ ಭೂಮಿಯನ್ನು ಒದಗಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಿಗೆ ಶ್ರಮಿಸುವುದು ಅತ್ಯಗತ್ಯವೆಂದು ಹೇಳಿದರು.
ಶಾಸಕರ ಬೇಡಿಕೆ: ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚು ಬಡವರು ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಮಾಲೂರು ಶಾಸಕ ಮಂಜುನಾಥಗೌಡ ಮಾತನಾಡಿ, ಸ್ಲಮ್ಗಳಲ್ಲಿ ಕಟ್ಟುವ ಮನೆಗಳಿಗೆ ಹೆಚ್ಚಿನ ಸಹಾಯಧನ ನೀಡಿ, ನಗರ ಪ್ರದೇಶದಲ್ಲಿ ಬಡವರು ಮನೆ ಕಟ್ಟಲು ನಿವೇಶನ ಸಿಗುತ್ತಿಲ್ಲ, ಮನೆಗಳನ್ನು ಕಟ್ಟಲು ಈಗ ನೀಡುತ್ತಿರುವ ಸಹಾಯ ಧನದ ಮೊತ್ತ ಹೆಚ್ಚಿಸುವಂತೆ ಒತ್ತಾಯಿಸಿದರು.
ಗಡಿ ಭಾಗದ ಗ್ರಾಪಂಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿಗಳನ್ನು ಸಕಾಲಕ್ಕೆ ಆನ್ ಲೈನ್ ಮೂಲಕ ಸಲ್ಲಿಸಲು ಆಗುತ್ತಿಲ್ಲ ಎಂದಾಗ, ಸಚಿವರು, ಸರ್ವರ್ ಸಮಸ್ಯೆ ಎಂಬುವುದು ಕುಂಟು ನೆಪ. ಒಂದು ವೇಳೆ ಸಮಸ್ಯೆ ಇದ್ದಲ್ಲಿ ನೋಡೆಲ್ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದುಎಂದರು.
ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ರವಣರೆಡ್ಡಿ ಮಾತನಾಡಿ, ಎಲ್ಲಾ ಪಿಡಿಒಗಳಿಗೆ ತರಬೇತಿ ನೀಡಿದ್ದೇವೆ. ಜಿಪಿಒ ಮಾಡಲು ಅಧಿಕಾರ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಕೆಜಿಎಫ್ ಶಾಸಕಿ ವೈ. ರಾಮಕ್ಕ, ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಬಡವರು ಹೆಚ್ಚಾಗಿದ್ದು ಪ್ರತಿ ಗ್ರಾಪಂ 20 ಮನೆ ಸಾಕಾಗುವುದಿಲ್ಲವೆಂದರು. ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಅಲುವೇಲಮ್ಮ, ಡಾ.ಜೆ. ರವಿಶಂಕರ್, ಜಿಲ್ಲಾಧಿಕಾರಿ ಡಿ.ಕೆ. ರವಿ, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ಜಗದೀಶ್, ವಿಧಾನಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ, ಎಂ.ಎಸ್. ಆನಂದ್, ನಾಗರಾಜ್, ಸಿಮೋಲ್ ಮೋಹನ್ ಇದ್ದರು.
'ಸ್ಲಂಗಳಲ್ಲಿ ಮನೆ ನಿರ್ಮಿಸಲು ಸಹಕರಿಸಿ'
ಕೋಲಾರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸ್ವಂತ ಮನೆ ಕಟ್ಟಲು ಬಡವರಿಗಾಗಿ ಕೈಗೆಟಕುವ ವಸತಿ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ವಸತಿ ಸಚಿವ ಡಾ.ಎಂ.ಎಚ್. ಅಂಬರೀಷ್ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿವಿಧ ವಸತಿ ಯೋಜನೆಗಳಡಿ ಕೊಳಚೆ ಪ್ರದೇಶಗಳು ಸೇರಿದಂತೆ ಭೂಮಿ ಲಭ್ಯವಿರುವ ಕಡೆ 15 ಲಕ್ಷ ಮನೆಗಳನ್ನು ನಿರ್ಮಿಸಲು ನಿರ್ಧರಿಸಿದ್ದು ಮುಂದಿನ ಐದು ವರ್ಷಗಳಲ್ಲಿ ಗುರಿ ಸಾಧನೆ ಮಾಡುವುದಾಗಿ ಹೇಳಿದರು.
ರಾಜ್ಯದ ಅನೇಕ ಕೊಳಚೆ ಪ್ರದೇಶಗಳಲ್ಲಿ ವಾಸಕ್ಕೆ ಯೋಗ್ಯವಾಗ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಬದ್ಧವಾಗಿದೆ. ಆದರೆ, ಅಲ್ಲಿ ವಾಸ ಮಾಡುತ್ತಿರುವ ಜನರಿಗೆ ನಂಬಿಕೆ ಇಲ್ಲದಂತಾಗಿದೆ. ಈ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಆದಾಗ ಮಾತ್ರ ಸರ್ಕಾರದ ಉದ್ದೇಶ ಈಡೇರುತ್ತದೆ ಎಂದರು.
ಕೊಳಚೆ ಪ್ರದೇಶದಲ್ಲಿ ಮನೆಗಳನ್ನು ಕಟ್ಟಕೊಡಬೇಕಾದರೆ ಅಲ್ಲಿನ ಗುಡಿಸಲುಗಳನ್ನು ತೆರವು ಮಾಡಿಸಬೇಕು. ಕನಿಷ್ಠ 6 ತಿಂಗಳು ಜನರಿಗೆ ಸಮಸ್ಯೆ ಆಗುತ್ತದೆ. ಉತ್ತಮವಾದ ಮನೆ ಬೇಕು ಎಂಬ ಆಸೆಯಿದ್ದಲ್ಲಿ ಜನತೆ ಸರ್ಕಾರದ ಯೋಜನೆಗೆ ಸಹಕಾರ ನೀಡಬೇಕು. ಇಲ್ಲದಿದ್ದರೆ ಕೊಳಚೆ ಪ್ರದೇಶಗಳ ಅಭಿವೃದ್ಧಿ ಆಗುವುದೇ ಇಲ್ಲವೆಂದು ಪ್ರತಿಪಾದಿಸಿದರು. ಕೊಳಚೆ ಪ್ರದೇಶದ ಜನರನ್ನು ವಕ್ಕಲೆಬ್ಬಿಸಿ ವಂಚಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ನನ್ನ ಮನೆಗಿಂತ ಸುಂದರವಾದ, ಭವ್ಯವಾದ ಮನೆಗಳನ್ನು ಬಡವರು ಕಟ್ಟಿಕೊಂಡು ಸಂತೋಷದಿಂದ ಇರಬೇಕೆಂಬ ಆಸೆ ನನ್ನದು. ಅವರು ಈಗ ವಾಸವಾಗಿರುವ ಜಾಗದಲ್ಲೇ ಗುಣಮಟ್ಟದ ಮನೆಗಳನ್ನು ಕಟ್ಟಿಕೊಡುತ್ತೇವೆ. ಇದಕ್ಕೆ ಜನತೆ ಹಾಗೂ ಜನಪ್ರತಿನಿಧಿಗಳ ಸಹಾಯ ಅತ್ಯಗತ್ಯವೆಂದು ತಿಳಿಸಿದರು.
ಕೋಲಾರ ನಗರದಲ್ಲಿ 9 ಸ್ಲಮ್ಗಳಿದ್ದು ಈ ಪೈಕಿ ನಾಲ್ಕು ಸ್ಲಮ್ಗಳಲ್ಲಿ 800 ಮನೆಗಳನ್ನು ಕಟ್ಟಲು ಉದ್ದೇಶಿಸಿ 44 ಕೋಟಿ ರುಪಾಯಿಗಳ ಯೋಜನೆ ಸಿದ್ಧಪಡಿಸಲಾಗಿದೆ. ಇದೇ ರೀತಿ ಮಂಡ್ಯ ಇನ್ನಿತರ ಕಡೆಯೂ ಸ್ಲಮ್ಗಳಲ್ಲಿ ವಸತಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನಿಸಿದ್ದು ಅಲ್ಲಿನ ಜನತೆ ಮನೆಗಳನ್ನು ಕಟ್ಟಲು ಜಾಗ ನೀಡಿದಲ್ಲಿ 6 ತಿಂಗಳಲ್ಲಿ ಜನತೆಯ ಆಸೆ ಈಡೇರಿಸುವುದಾಗಿ ಅವರು ಹೇಳಿದರು.
ನಿಮ್ಮ ಎಂಎಲ್ಎಗೇ ಅರ್ಜಿ ಕೊಡು
ಕೋಲಾರ: ನಿನಗೆ ಎಲ್.ಎಲ್.ಎ ಖೋಟಾದಲ್ಲಿ ನಿವೇಶನ ಮಂಜೂರು ಆಗಿರುವುದರಿಂದ ಮನೆ ಕಟ್ಟಿಕೊಡುವಂತೆ ಅದೇ ಎಂಎಲ್ಎಗೆ ಅರ್ಜಿ ಕೊಡುವುದು ಒಳ್ಳೆಯದು ಎಂದು ವಸತಿ ಸಚಿವ ಅಂಬರೀಷ್ ಅವರು ತಾಲೂಕಿನ ಅಂಗವಿಕಲರೊಬ್ಬರು ನೀಡಿದ ಅರ್ಜಿಯನ್ನು ವಾಪಸ್ ಮಾಡಿದ ಪ್ರಸಂಗ ನಡೆಯಿತು.
ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ವಸತಿ ಇಲಾಖೆಯ ಪ್ರಗತಿ ಪರಿಶೀಲನೆ ಮುಗಿಸಿ ಹೊರಡುತ್ತಿದ್ದಾಗ ಸಚಿವ ಅಂಬರೀಷ್ ಅವರನ್ನು ಭೇಟಿಯಾದ ಕೋಲಾರ ತಾಲೂಕಿನ ವೇಮಗಲ್ ಹೋಬಳಿಗೆ ಸೇರಿದ ಕುರುಗಲ್ ಗ್ರಾಪಂನ ಹಾರ್ಜೇನಹಳ್ಳಿಯ ಅಂಗವಿಕಲ ಚನ್ನಕೃಷ್ಣಪ್ಪ ಎಂಬುವರು 2007ರಿಂದ ಕೋಲಾರ ತಾಲೂಕು ಪಂಚಾಯಿತಿಗೆ ಐದಾರು ಬಾರಿ ತಾಪಂ ಅಧಿಕಾರಿಗಳಿಗೆ ಅರ್ಜಿ ನೀಡಿ ಮನೆ ಕಟ್ಟಿಕೊಡಲು ಮನವಿ ಮಾಡಿದ್ದರೂ ಸ್ವಂತ ಮನೆ ಹೊಂದಲು ಆಗಲಿಲ್ಲವೆಂದು ಅಳಲು ತೋಡಿಕೊಂಡರು.
ನಾನೊಬ್ಬ ಅಂಗವಿಕಲ, ಜೊತೆಗೆ ಮೂತ್ರ ಪಿಂಡ ಕಾಯಿಲೆಯಿಂದ ಬಳಲುತ್ತಿದ್ದೇನೆ. ಹಾರ್ಜೇನಹಳ್ಳಿ ಗೇಟ್ ಬಳಿ ನನಗೆ ಶಾಸಕರ ಖೋಟಾದಲ್ಲಿ ನಿವೇಶನ ಮಂಜೂರು ಆಗಿದೆ. ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಸಿಗುವ ಭರವಸೆಯಿಂದ ಪಾಯ ಹಾಕಿ ಬೇಸ್ ಮಟ್ಟದಲ್ಲಿ ಕಲ್ಲು ಹಾಕಿದ್ದರೂ ಹಣ ಬಿಡುಗಡೆಯಾಗದ ಕಾರಣ ಮನೆ ನಿರ್ಮಾಣ ಸ್ಥಗಿತಗೊಂಡಿದೆ ಎಂದು ತಿಳಿಸಿದರು.
ಗ್ರಾಮ ಸಭೆಯಲ್ಲೂ ಅರ್ಜಿ ನೀಡಿದ್ದೇನೆ, ಬಾಡಿಗೆ ಕಟ್ಟಲು ಕಷ್ಟವಾಗುತ್ತದೆ, ಆದಷ್ಟು ಬೇಗನೆ ಮನೆ ಕಟ್ಟಲು ಸಹಾಯ ಮಾಡಿ ಎಂದು ಕೋರಿದರು.
ಅರ್ಜಿದಾರ ಚನ್ನಕೃಷ್ಣನ ಮಾತು ಅಲಿಸಿದ ಸಚಿವ ಅಂಬರೀಷ್, ನಿಮ್ಮ ಶಾಸಕ ಯಾರು ಎಂದು ಕೇಳಿದರು.
ನಮ್ಮ ಶಾಸಕ ವರ್ತೂರ್ ಪ್ರಕಾಶ್ ಎಂದು ಹೇಳುತ್ತಿದ್ದಂತೆ ಸಚಿವ ಅಂಬರೀಷ್ ಅವರು, ಹಾಗಾದರೆ ಈ ಅರ್ಜಿಯನ್ನು ಅವರಿಗೇ ಕೊಟ್ಟು ಮನೆ ಕಟ್ಟಿಸಿಕೊಡುವಂತೆ ಕೇಳು ಎಂದು ಸ್ವೀಕರಿಸಿದ್ದ ಅರ್ಜಿಯನ್ನು ವಾಪಸ್ ಮಾಡಿ ನಿರ್ಗಮಿಸಿದರು.
ಚನ್ನಕೃಷ್ಣಪ್ಪ ಬೇಸರ: ಇದರಿಂದ ಬೇಸತ್ತ ಚನ್ನಕೃಷ್ಣಪ್ಪ, ಕೊಟ್ಟ ಅರ್ಜಿಯನ್ನು ಸಚಿವರು ವಾಪಸ್ ಮಾಡಿದ್ದು ಸರಿಯಲ್ಲ, ಐದಾರು ಬಾರಿ ಕೋಲಾರ ತಾಪಂಗೆ ಅರ್ಜಿ ನೀಡಿದ್ದೇನೆ.
ಇದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವೆ ಎಂದು ಹೇಳಿದ್ದರೆ ಮನೆ ಕಟ್ಟಿಸಿಕೊಟ್ಟಷ್ಟೆ ತೃಪ್ತಿ ಆಗುತ್ತಿತ್ತು, ನನಗೆ ಅಂಬಿ ಅಣ್ಣನ ಬಗ್ಗೆ ಪ್ರೀತಿ, ಗೌವರ ಇದೆ. ಅದಕ್ಕಾಗಿ ಹಳ್ಳಿಯಿಂದ ತ್ರಿಚಕ್ರ ವಾಹನದಲ್ಲಿ ಬಂದೆ ಎಂದು ನೊಂದು ನುಡಿದರು.
ಕೋಲಾರ ಜಿಲ್ಲೆಗೆ 41 ಸಾವಿರ ಮನೆಗಳು ಮಂಜೂರಾಗಿದೆ. ಈ ಪೈಕಿ 5 ಮನೆಗಳು ಕಟ್ಟಲಾಗಿದ್ದು 20 ಸಾವಿರ ಮನೆಗಳು ಪ್ರಗತಿಯಲ್ಲಿದೆ, 15 ಸಾವಿರ ಮನೆಗಳು ರದ್ದು ಮಾಡಲಾಗಿದೆ ಜಿಲ್ಲಾ ಆಡಳಿತ 27 ಎಕರೆ ಭೂಮಿಯನ್ನು ಗುರುತು ಮಾಡಿದ್ದು ನರಸಾಪುರದಲ್ಲಿ ಕೈಗಾರಿಕೆಗಳು ಹೆಚ್ಚಾಗಿ ಬರುತ್ತಿರುವುದರಿಂದ ವಸತಿ ಯೋಜನೆಗೆ ಬೇಕಾದ ಅಗತ್ಯ ಭೂಮಿಯನ್ನು ಒದಗಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಟ್ಟಿಗೆ ಶ್ರಮಿಸುವುದು ಅತ್ಯಗತ್ಯ
-ಅಂಬರೀಷ್, ವಸತಿ ಸಚಿವ