ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಹಾಸ್ಯಾಸ್ಪದ: ಅಶೋಕ
ಚಿಕ್ಕಬಳ್ಳಾಪುರ: ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂಬ ಮಾತಿನ ಹಿನ್ನೆಲೆಯಲ್ಲಿ ಚಾಮರಾಜನಗರಕ್ಕೆ ಹೋಗುವ ಮುನ್ನಾ ಹೋಮ ಹವನಗಳನ್ನು ಮಾಡಿಸುವ ಕಾಂಗ್ರೆಸ್ ಪಕ್ಷದವರೇ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಮಾಜಿ ಗೃಹ ಸಚಿವ ಆರ್. ಆಶೋಕ್ ವ್ಯಂಗ್ಯವಾಡಿದರು.
ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಇದಕ್ಕೆ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಿರುವುದೇ ನಿದರ್ಶನ. ಸರ್ಕಾರ ಯಾವುದೇ ಯೋಜನೆ ಒಂದು ಜಾತಿ, ವರ್ಗವನ್ನು ನೋಡಿಕೊಂಡು ಅನುಷ್ಠಾನಗೊಳಿಸುವುದು ಸರಿಯಲ್ಲ. ಇದರಿಂದ ಸಮಾಜದಲ್ಲಿ ಒಡಕು ಉಂಟಾಗುತ್ತಿದೆ. ಈಗಾಗಲೇ ಈ ಯೋಜನೆ ಜಾರಿ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಎಲ್ಲಾ ವರ್ಗಗಳಲ್ಲೂ ಬಡವರಿದ್ದಾರೆ. ಅವರಿಗೂ ಈ ಯೋಜನೆಯ ಉಪಯೋಗ ಸಿಗುವಂತೆ ಮಾಡಲು ಶಾದಿಭಾಗ್ಯ ಯೋಜನೆಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಒಂದು ಕಡೆ ಮೂಢನಂಬಿಕೆ ಪ್ರತಿಬಂಧಕ ಕರಡನ್ನು ಜಾರಿಗೆ ತರುವುದಿಲ್ಲ. ಈ ಬಗ್ಗೆ ಕೇವಲ ಚರ್ಚೆ ನಡೆಸಲಾಗುತ್ತಿದೆ ಎನ್ನುತ್ತಿದ್ದಾರೆ. ಮತ್ತೊಂದೆಡೆ ಕಾನೂನು ಸಚಿವ ಜಯಚಂದ್ರರವರು ಬೆಳಗಾವಿ ಅಧಿವೇಶನದಲ್ಲಿ ಕರಡನ್ನು ಮಂಡಿಸುವುದು ಶತ ಸಿದ್ಧ ಎಂದು ಹೇಳುತ್ತಿದ್ದಾರೆ. ಈ ಮೂಲಕ ದ್ವಂದ್ವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಯುಪಿಎ ಸರ್ಕಾರದ ಆಡಳಿತದಾವಧಿಯಲ್ಲಿ ಭ್ರಷ್ಟಾಚಾರ, ಹಗರಣಗಳಲ್ಲಿ ಕೋಟ್ಯಂತರ ರು.ಗಳನ್ನು ಲೂಟಿ ಮಾಡಲಾಗಿದೆ. ಅಲ್ಲದೇ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಬರೆ ಎಳೆಯಲಾಗಿದೆ. ಇದರಿಂದ ಜನರು ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ಜುಗುಪ್ಸೆಗೊಂಡಿದ್ದಾರೆ ಎಂದರು. ದೇಶದೆಲ್ಲೆಡೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪರ ಅಲೆ ಹರಿದಾಡುತ್ತಿದೆ. ಜನರು ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿಯನ್ನಾಗಿಸಲು ಬಯಸಿದ್ದಾರೆ. ಈಗಾಗಲೇ ಗುಜರಾತ್ ಅಭಿವೃದ್ಧಿಯಲ್ಲಿ ಹೆಸರು ಮಾಡಿದ್ದು ಅದೇ ರೀತಿ ದೇಶ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಮೋದಿಯವರ ಕೈ ಬಲಪಡಿಸಬೇಕಾಗಿದೆ ಎಂದು ತಿಳಿಸಿದರು.
ಬೇರೆ ಕಡೆ ಸೋಲನ್ನಪ್ಪಿದ್ದ ವೀರಪ್ಪ ಮೊಯ್ಲಿರವರನ್ನು ಈ ಭಾಗದ ಜನರು ಗೆಲ್ಲಿಸಿದರು. ಆದರೆ, ಮೊಯ್ಲಿ ಅವರು ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ. ಅಲ್ಲದೇ ಕಾಂಗ್ರೆಸ್ನಲ್ಲಿ ಮೊಯ್ಲಿ ವಿಚಾರವಾಗಿ ಭಿನ್ನಾಭಿಪ್ರಾಯವಿದ್ದು ನಾವು ಸೋಲಿಸುವುದಕ್ಕಿಂತ ಕಾಂಗ್ರೆಸ್ನವರೇ ಅವರನ್ನು ಸೋಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ, ಪ್ರೇಮಲೀಲಾ ವೆಂಕಟೇಶ್, ಹನುಮಂತರಾಯಪ್ಪ ಇದ್ದರು.