ವಸತಿ ಸೌಲಭ್ಯ ಪ್ರಗತಿ ಕುರಿತು ಮಹತ್ವದ ಸಭೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬಡ ಜನರಿಗೆ ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಾಧಿಸಿರುವ ಪ್ರಗತಿ ಕುರಿತು ಚರ್ಚಿಸಲು ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಹಾಜರಿದ್ದ ವಸತಿ ಸಚಿವ ಅಂಬರೀಷ್ ಮುಂದೆ ಜಿಲ್ಲೆಯ ಐವರು ಶಾಸಕರು ತಮ್ಮ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಜಿಲ್ಲಾಧಿಕಾರಿ ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಯೋಜನೆಗಳ ಅನುಷ್ಠಾನದ ವೈಖರಿ ವಿವರಿಸಿದರು. ಜಿಲ್ಲಾಡಳಿತ ಭವನದಲ್ಲಿ ವಸತಿ ಸಚಿವ ಅಂಬರೀಷ್ ನೇತೃತ್ವದಲ್ಲಿ ಬಸವ, ವಾಜಪೇಯಿ, ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದು, ಕ್ರಿಯಾ ಯೋಜನೆ,ಅಗತ್ಯವಿರುವ ಅನುದಾನದ ಬಗ್ಗೆ ಚರ್ಚೆ ನಡೆಸಲಾಯಿತು.
ಸುಂದರವಾಗಿಸಬೇಕು: ಶಾಸಕ ಕೆ. ಸುಧಾಕರ್ ಮಾತನಾಡಿ, ಇತ್ತೀಚೆಗೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಚಿಕ್ಕಬಳ್ಳಾಪುರ ನಗರವನ್ನು ಮಾದರಿ ಉಪ ನಗರವನ್ನಾಗಿ ರೂಪಿಸಲು ಮುಂದಾಗುವುದಾಗಿ ಭರವಸೆ ನೀಡಿದ್ದಾರೆ. ಸಮರ್ಪಕ ಸೌಲಭ್ಯ ಒದಗಿಸಿದರೆ ಚಿಕ್ಕಬಳ್ಳಾಪುರ ಬೆಂಗಳೂರು ನಗರಕ್ಕೆ ಮಾದರಿಯಾಗಿ ಬೆಳೆಯುತ್ತದೆ. ಇದರಿಂದ ಮಾದರಿ ನಗರದಲ್ಲಿ ಉತ್ತಮ ವಸತಿ ಸೌಲಭ್ಯ ಕಲ್ಪಿಸುವ ವಿಶೇಷ ಯೋಜನೆ ಕಾರ್ಯ ರೂಪಕ್ಕೆ ತಂದರೆ ಇದಕ್ಕೆ ಪೂರಕವಾಗಿರುತ್ತದೆ ಎಂದ ಅವರು, ವಸತಿ ಹೀನರಿಗೆ ಮನೆಗಳನ್ನು ವಿವಿಧ ಯೋಜನೆಗಳಲ್ಲಿ ಕಟ್ಟಿಸಿಕೊಡಲಾಗುತ್ತಿದೆ ಎಂದೇಳುತ್ತಿದ್ದರೂ ಕೊಳಚೆ ಪ್ರದೇಶಗಳಲ್ಲಿ ಜೀವನವನ್ನು ನಡೆಸುತ್ತಿದ್ದಾರೆ. ಇವರನ್ನು ಸರಿಯಾಗಿ ಗುರುತಿಸಿ ಮನೆಗಳನ್ನು ಕಟ್ಟಿಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದಷ್ಟು ಹೆಚ್ಚಿಗೆ ಮಹಡಿಗಳನ್ನು ಕಟ್ಟುವುದಕ್ಕೆ ಆದ್ಯತೆ ಕೊಟ್ಟರೆ ವಸತಿ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದರು.
ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮಾತನಾಡಿ, ಸರ್ಕಾರದ ಸೌಲಭ್ಯವನ್ನು ನಂಬಿಕೊಂಡು ಮನೆಗಳನ್ನು ಕಟ್ಟಿರುವ ತಾಲೂಕಿನಲ್ಲಿ 1,000 ಕ್ಕೂ ಹೆಚ್ಚು ಜನ ಪಾಯಗಳನ್ನು ನಿರ್ಮಿಸಿಕೊಂಡಿದ್ದರೂ ಹಣ ಬಿಡುಗಡೆಯಾಗಿಲ್ಲ. ಹೀಗೆ ಅರ್ಧಕ್ಕೆ ಅನೇಕ ಮನೆಗಳು ನಿಂತು ಹೋಗಿದ್ದು ನೋಡೆಲ್ ಅಫೀಸರುಗಳ ನಿರ್ಲಕ್ಷ್ಯದಿಂದ ಈ ಯಡವಟ್ಟಾಗಿದೆ ಎಂದರು. ಶಿಡ್ಲಘಟ್ಟ ಶಾಸಕ ಎಂ. ರಾಜಣ್ಣ ಮತ್ತು ಚಿಂತಾಮಣಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಅವಸರವಾಗಿ ಪಟ್ಟಿ ತಯಾರಿಸಿದ್ದು ಹಿಂದೆ ಕೊಟ್ಟಿರುವವರಿಗೆ ಮನೆ ಮತ್ತೆ ಕಟ್ಟಿಕೊಡಲು ಮುಂದಾಗಿರುವಂತಹ ಪ್ರಕರಣಗಳು ಹೆಚ್ಚಿಗೆ ನಡೆದಿರುವುದರಿಂದ ನಿಜವಾದ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಲ್ಲದೇ ದೋಷಗಳನ್ನು ಸರಿಪಡಿಸಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವುದಕ್ಕೆ ಕಾಲಾವಕಾಶ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಸುಂದರ ಲೇಜೌಟ್: ಬೆಂಗಳೂರಿಗೆ ಸಮೀಪವಿದ್ದರೂಜಿಲ್ಲಾ ಕೇಂದ್ರದಲ್ಲಿ ಒಂದು ಸುಂದರವಾದ ಲೇಟ್ ಔಟ್ ಇಲ್ಲದಿರುವುದು ದುರದೃಷ್ಟಕರ. 200 ಎಕರೆ ಭೂಮಿ ತೆಗೆದುಕೊಂಡು ಮಾದರಿಯಾಗಿ ಲೇ ಔಟ್‌ಗಳನ್ನು ನಿರ್ಮಿಸಲು ಮುಂದಾಗುವ ಮೂಲಕ ಅಂದವನ್ನು ತರಬೇಕು ಎಂದರು.
ಸಮೀಕ್ಷಾ ವರದಿ: ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ವಸತಿ ಸೌಲಭ್ಯವನ್ನು ಹೊಂದಿರದ ಬಡಜನರನ್ನು ಗುರುತಿಸಿ ಜಿಲ್ಲಾಡಳಿತ ಸಮೀಕ್ಷಾ ವರದಿ ಕೊಟ್ಟರೆ ಆದಷ್ಟು ಬೇಗ ಮನೆಗಳನ್ನು ಕಟ್ಟಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ವಸತಿ ಸಚಿವ ಎಂ.ಎಚ್. ಅಂಬರೀಷ್ ಭರವಸೆ ನೀಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 6 ತಿಂಗಳಾದರೂ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲಾಗಿದೆ. ಈಗಲೂ ಅವಸರವಾಗಿ ಭರವಸೆಗಳನ್ನು ಕೊಡುತ್ತಿದ್ದರೂ ಕೊಟ್ಟ ಮಾತಿನಂತೆಯೇ ಸರ್ಕಾರ ನಡೆದುಕೊಳ್ಳುತ್ತದೆ ಎಂದ ಅವರು, ನಿವೇಶನ ರಹಿತರಿಗೆ ನಿವೇಶನ ಕೊಡಿಸುವುದು ಸರ್ಕಾರದ ಜವಾಬ್ದಾರಿ. ವಸತಿ ಹೀನರಿಗಾಗಿ ರಾಜ್ಯದಲ್ಲಿ 13 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿದ್ದು. ಈಗಾಗಲೇ 2 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ.ಚಿಕ್ಕಬಳ್ಳಾಪುರ ಬೆಂಗಳೂರು ನಗರಕ್ಕೆ ಬಹಳ ಹತ್ತಿರವಾಗಿದ್ದು, ಇದನ್ನು ಉಪನಗರವನ್ನಾಗಿ ಪರಿವರ್ತಿಸುವುದಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.