ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೆಮೆಲ್ ರೈಲ್ ಕೋಚ್ ಗುತ್ತಿಗೆ ನೌಕರರ ಧರಣಿ
ಕೆಜಿಎಫ್: ಬೆಮೆಲ್ ರೈಲ್ ಕೋಚ್ ಗುತ್ತಿಗೆ ನೌಕರರಿಗೆ ವೇತನ ಸೇರಿದಂತೆ ಇತರೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಗುತ್ತಿಗೆ ನಿರ್ವಾಹಕರು ಮತ್ತು ನೌಕರರು ನಗರದ ಉರಿಗಾಂ ರೈಲ್ವೆ ನಿಲ್ದಾಣದ ಸಮೀಪವಿರುವ ಮೈದಾನದಲ್ಲಿ ಧರಣಿ ಸತ್ಯಾಗ್ರಹವನ್ನು ನಡೆಸಿದರು. ನಗರದ ಕೆನಡೀಸ್ ಸಮೀಪವಿರುವ ಬೆಮೆಲ್ ರೈಲ್ ಕೋಚ್ ಘಟಕದಲ್ಲಿ 630 ಮಂದಿ ಕೆಲಸವನ್ನು ನಿರ್ವಹಿಸುತ್ತಿದ್ದು ಅದರಲ್ಲಿ ಕೇವಲ 110 ಮಂದಿಯನ್ನು ಮಾತ್ರ ಕೆಲಸಕ್ಕೆ ಕಾಯಂಗೊಳಿಸಲಾಗಿದ್ದು ಉಳಿದ ಇತರರಿಗೆ ಕೆಲಸವನ್ನು ಕಾಯಂಗೊಳಿಸದೆ ಬೆಮೆಲ್ ಆಡಳಿತ ಮಂಡಳಿ ವಿಳಂಬ ಮಾಡುತ್ತಿದೆ. ಅಲ್ಲದೆ 2004ರಲ್ಲಿ ಬೆಮೆಲ್ನ ರೈಲ್ ಕೋಚ್ ಘಟಕ ಪ್ರಾರಂಭವಾದಾಗ ಅಂದಿನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್. ನಟರಾಜನ್ ಹಾಗೂ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಬಿಜಿಎಂಎಲ್ ಚಿನ್ನದ ಗಣಿ ಕಾರ್ಮಿಕ ಕುಟುಂಬ ವರ್ಗಕ್ಕೆ ರೈಲ್ ಕೋಚ್ನಲ್ಲಿ ಕೆಲಸ ನೀಡಲು ಪ್ರಮುಖ ಆದ್ಯತೆ ನೀಡಲಾಗಿತ್ತು ಎಲ್ಲರನ್ನು ಕೆಲಸದಲ್ಲಿ ಕಾಯಂಗೊಳಿಸುವುದಾಗಿ ಹೇಳಿದ್ದರು. ಆದರೆ ಈವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಗುತ್ತಿಗೆ ನೌಕರರು ಬೆಮೆಲ್ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.
ಅದೇ ರೀತಿ ರೈಲ್ ಕೇಚ್ನಲ್ಲಿ ನೌಕರರಿಗೆ ಮಾಸಿಕ ವೇತನ 12 ಸಾವಿರ ಹೆಚ್ಚಿಸಬೇಕು, ಆಸ್ಪತ್ರೆಯ ಎಲ್ಲಾ ಸೌಲಭ್ಯಗಳನ್ನು ನೀಡಬೇಕು, ನೌಕರರ ಮಕ್ಕಳು ಶಾಲೆಗೆ ಹೋಗಲು ಬೆಮೆಲ್ ಬಸ್ಗಳಲ್ಲಿ ಅನುಮತಿಯನ್ನು ನೀಡಬೇಕು, ಬೋನಸ್ ಹಣವನ್ನು ನೀಡಬೇಕು ಹಾಗೂ ಬೆಮೆಲ್ ರೈಲ್ ಕೋಚ್ನಲ್ಲಿ ನೌಕರರಿಗೆ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಿಐಟಿಯು ಸಂಘಟನೆಯ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ ಬೆಮೆಲ್ ಆಡಳಿತ ಮಂಡಳಿ ಗುತ್ತಿಗೆ ನೌಕರರನ್ನು ಅತಿ ಹೀನಾಯವಾಗಿ ನಡೆದುಕೊಳ್ಳುತ್ತಿದೆ ಕೇರಳ ರಾಜ್ಯದಲ್ಲಿ ಬೆಮೆಲ್ ರೈಲ್ ಕೋಚ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಮಾಸಿಕ ವೇತನ 12 ಸಾವಿರವನ್ನು ನಿಗದಿ ಮಾಡಲಾಗಿದೆ ಅಲ್ಲದೆ ನೌಕರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಮತ್ತು ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ. ಆದರೆ ದೇಶಕ್ಕೆ ಚಿನ್ನವನ್ನು ಕೊಟ್ಟು ಬಿಜಿಎಂಎಲ್ ಗಣಿಯಲ್ಲಿ ಪ್ರಾಣವನ್ನು ತ್ಯಾಗ ಮಾಡಿದ ಬಿಜಿಎಂಎಲ್ ಕಾರ್ಮಿಕರ ಕುಟುಂಬ ವರ್ಗದವರಿಗೆ ಕೆಲಸಕ್ಕೆ ಕಾಯಂಗೊಳಿಸದೆ ಅವರಿಗೆ ದಿನಕ್ಕೆ ಕೇವಲ 258 ರು.ಗಳ ವೇತನವನ್ನು ಮಾತ್ರ ನೀಡುತ್ತಿದ್ದು ಅವರಿಗೆ ಯಾವುದೇ ಸೌಲಭ್ಯವನ್ನು ಒದಗಿಸದೆ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಜಯಶೀಲನ್, ಬಾಲಸುಬ್ರಮಣಿ, ಬಾಲಾಜಿ, ಕುಮರನ್, ಶ್ರೀಕುಮಾರ್, ಸುಗುಮಾರನ್, ಜೀವರಾಜ್, ಪ್ರಸಾದ್, ಸುಗುಮಾರನ್, ಮುಕುಂದನ್ ಸೇರಿದಂತೆ ಸಿಐಟಿಯು ಮುಖಂಡರಾದ ಅರ್ಜುನನ್, ತಂಗರಾಜ್, ಕುಮಾರ್ ಹಾಗೂ ನೂರಾರು ಗುತ್ತಿಗೆ ನೌಕರರು ಹಾಜರಿದ್ದರು.