ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು
ಕೋಲಾರ: ಜಿಲ್ಲಾ ಕೇಂದ್ರ ಗ್ರಂಥಾಲಯದ ಆಶ್ರಯದಲ್ಲಿ 2013 ನೇ ಸಾಲಿನ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಈ ವ್ಯಾಪ್ತಿಯ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಗಣೇಶ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಗ್ರಂಥಾಲಯದ ಆವರಣದಲ್ಲೇ ಸಪ್ತಾಹದ ಅಂಗವಾಗಿ ಕೋಲಾರದ ವ್ಯಾಪ್ತಿಯಲ್ಲಿ ಬರುವ ಶಾಲಾ ಮಕ್ಕಳಿಗೆ ಈ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ನ.15 ರಂದು ಬೆಳಗ್ಗೆ 10.30 ಗಂಟೆಗೆ 5ರಿಂದ 10 ವರ್ಷದೊಳಗಿನ ಶಾಲಾ ಮಕ್ಕಳಿಗೆ ಚಿತ್ರಕಲೆ, 10 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಭಾವಗೀತೆ, 12 ರಿಂದ 14 ವರ್ಷದೊಳಗಿನ ಮಕ್ಕಳಿಗಾಗಿ ಜನಪದ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹಾಗೆಯೇ ನ.16 ರಂದು ಬೆಳಗ್ಗೆ 10.30 ಗಂಟೆಗೆ 14 ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ಆಶುಭಾಷಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಸಿದೆ. ಈ ಎಲ್ಲಾ ಸ್ಪರ್ಧೆಗಳ ಜತೆಗೆ ಪ್ರಬಂಧ ಸ್ಪರ್ಧೆಯನ್ನು ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದು, 18 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವರು ವಿವರಗಳಿಗೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿಯನ್ನು ಭೇಟಿಯಾಗಿ ಮಾಹಿತಿ ಪಡೆಯಬಹುದಾಗಿದೆ. ಮಾಹಿತಿಗಾಗಿ ಕಚೇರಿಯ ದೂ-08152-222821, ಮೊ-9731219109 ಮತ್ತು 9060332488 ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.
ದೇವಾಲಯದಲ್ಲಿ ಕಳವು
ಮುಳಬಾಗಲು: ತಾಲೂಕಿನ ಕೆ.ಜಿ. ಲಕ್ಷಿಸಾಗರ ಗ್ರಾಮದ ನೂತನ ಆಂಜನೇಯಸ್ವಾಮಿ ದೇವಾಲಯದ ಹುಂಡಿ ಹೊಡೆದು ಎರಡು ಲಕ್ಷ ರುಪಾಯಿ ಹಣ ಕಳವು ಮಾಡಿದ ಘಟನೆ ಭಾನುವಾರ ವರದಿಯಾಗಿದೆ. ಅರ್ಚಕರು ಬೆಳಿಗ್ಗೆ ಪೂಜೆ ಸಲ್ಲಿಸಲು ಹೋದಾಗ ಕಳವು ಆಗಿರುವುದು ಬೆಳಕಿಗೆ ಬಂದಿದೆ. ದೇವಾಲಯದ ಮುಂದೆ ಸಮುದಾಯ ಭವನ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸಿಡಲಾಗಿತ್ತು ಎಂದು ಗ್ರಾಮಸ್ಧರುಗಳು ತಿಳಿಸಿದ್ದಾರೆ.