14 ವರ್ಷದ ಶ್ರಮಕ್ಕೆ ತಕ್ಕ ಫಲ ದೊರೆಯಿತು
-ಟೇಕಲ್ ಲಕ್ಷ್ಮೀಶ್
ಟೇಕಲ್: ಗೋಮಾಳ ರಕ್ಷಣೆಗೆ ಹದಿನಾಲ್ಕು ವರ್ಷ ಹೋರಾಡಿದ ಯಲುವಹಳ್ಳಿಯ ರೈತ ನಾರಾಯಣಸ್ವಾಮಿ ಶ್ರಮಕ್ಕೆ ಲೋಕಾಯುಕ್ತ ಪೊಲೀಸರ ಸೂಚನೆಯಿಂದ ಎಚ್ಚೆತ್ತು ತಾಲೂಕು ದಂಡಾಧಿಕಾರಿ ಡಾ. ಸುಧಾರವರು ಮಂಗಳವಾರ ಜಮೀನು ಸರ್ವೇನಡೆಸಿ ಸರ್ಕಾರಿ ಪ್ರದೇಶವೆಂದು ನಾಮಫಲಕ ನೆಟ್ಟರು.
ತೆರವು ಕಾರ್ಯಾಚರಣೆ: ರೈತ ನಾರಾಯಣಸ್ವಾಮಿ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಡಾ.ಸುಧಾರವರು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಜೆಸಿಬಿ ಯಂತ್ರಗಳಲ್ಲಿ ಬದು ನಿರ್ಮಾಣ ಮಾಡಲಾಯಿತು. ಗೋಮಾಳದ ಜಾಗವನ್ನು, ಗಡಿ ಭಾಗಗಳನ್ನು ಸರ್ವೇ ಮಾಡಿಸಿ ನಂತರ ಅದಕ್ಕೆ ಮುಖ್ಯವಾಗಿ ನಾಮಪಲಕ ಹಾಕಲಾಯಿತು. ಡಾ. ಸುಧಾರವರು ಹೇಳುವಂತೆ 129 ಎಕರೆ 7 ಗುಂಟೆ ಸರ್ಕಾರದ ಗೋಮಾಳವಾಗಿದ್ದು 63 ಎಕರೆ ಮಂಜೂರಾಗಿದೆ. 66 ಎಕರೆ ಪ್ರದೇಶದಲ್ಲಿ ಕೆಲವು ಸುಪರ್ದಿಯಲ್ಲಿದ್ದು ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾತಿನ ಚಕಮಕಿ: ಗೋಮಾಳ ತೆರವು ಕಾರ್ಯಾಚರಣೆ ವೇಳೆ ಹಿಂದೆ ಜಮೀನನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನ ನಡೆಸಿದ್ದ ಕೆಲವರು ತಮ್ಮದೆಂದು ತಗಾದೆ ತೆಗೆದು ಮಾತಿನ ಚಕಮಕಿ ಉಂಟಾಯಿತು. ಈ ಸಂದರ್ಭದಲ್ಲಿ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಗೊಳಿಸಲಾಯಿತು.
ಇಷ್ಟು ದಿನ ಅನಾಥವಾಗಿದ್ದ ಗೋಮಾಳಕ್ಕೆ ಇದೀಗ ತನ್ನದೇ ಆದ ರೂಪ ಬಂದಿದ್ದು ನಾಮಫಲಕ ರಸ್ತೆಗೆ ಸ್ಪಷ್ಟವಾಗಿ ಕಾಣಸುತ್ತಿದೆ. ಯಲುವಹಳ್ಳಿ ಗ್ರಾಮದ ನಾರಾಯಣಸ್ವಾಮಿ ಪರಿಶ್ರಮ ಫಲಪ್ರದವಾಯಿತು. ಈ ಸಂದರ್ಭದಲ್ಲಿ ಕನ್ನಡಪ್ರಭದ ಜೊತೆ ಮಾತನಾಡಿ, ಹದಿನಾಲ್ಕು ವರ್ಷಗಳ ಸತತ ಪ್ರಯತ್ನದಲ್ಲಿ ನನ್ನ ಹಾಗೂ ನನ್ನ ಕುಟುಂಬದ ಮೇಲೆ ಹಲವಾರು ಬಾರಿ ಹಲ್ಲೆ ನಡೆಸಲಾಯಿತು. ಅದನ್ನು ಬಿಡದೇ ಛಲದಿಂದ ಸರ್ಕಾರಿ ಗೋಮಾಳ ಉಳಿಸಲು ಪಟ್ಟ ಶ್ರಮ ಸಾರ್ಥಕವಾಯಿತು. ಈ ಸ್ಥಳ ಸಾರ್ವಜನಿಕವಾಗಿ ಉಪಯೋಗವಾಗಬೇಕೆಂಬುದೇ ನನ್ನ ಆಸೆ ಇದರಿಂದ ನ್ಯಾಯಕ್ಕೆ ಜಯ ಸಿಕ್ಕಂತೆ ಆಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಸ್‌ಐ ಶಿವಕುಮಾರ್, ಮಾಸ್ತಿ ಪಿಎಸ್‌ಐ ಎಚ್.ಆರ್. ಸಿದ್ದಪ್ಪ, ನಾಡಕಚೇರಿ ಉಪತಹಸೀಲ್ದಾರ್ ರವಿಶಂಕರ್, ರೆವಿನ್ಯೂ ಅಧಿಕಾರಿ ಎಸ್.ವಿ. ನಾರಾಯಣಾಚಾರಿ, ಗ್ರಾಮಲೆಕ್ಕಾಧಿಕಾರಿ ನಾಗರಾಜ್, ಶರತ್, ಶ್ರೀನಿವಾಸ್, ಚನ್ನಮಲ್ಲಯ್ಯ, ನಾಡಕಚೇರಿ ರಾಮಚಂದ್ರ ಹಾಗೂ ಪೊಲೀಸ್ ಬಂದೋಬಸ್ತಿನಲ್ಲಿ ತೆರವು ಕಾರ್ಯಾಚರಣೆ ನಡೆಯಿತು.