19ರಂದು ಅಂಗನವಾಡಿ ನೌಕರರ ವಿಧಾನಸೌಧ ಚಲೋ
ಕೋಲಾರ: ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ನಿಗಧಿಪಡಿಸರುವ ಕೆಲಸದ ಅವಧಿಯ ವಿಸ್ತರಣೆ ಅವೈಜ್ಞಾನಿಕ ಆದೇಶ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ನ.19ರಂದು ವಿಧಾಸೌದ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ನಿಯಮವಾಳಿ ಪ್ರಕಾರ ಅಂಗನವಾಡಿ ಕೇಂದ್ರ ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ಗಂಟೆ ತನಕ ನಿರ್ವಹಿಸಿ ನಂತರ ವಿವಿಧ ದಾಖಾತಿಗಳ ಬರವಣಿಗೆ ಹಾಗೂ ಮನೆಗಳಿಗೆ ಭೇಟಿ ಸೇರಿದಂತೆ ಒಟ್ಟಾರೆ ಆರು ಗಂಟೆಗಳ ಕೆಲಸದ ಅವಧಿಯನ್ನು ನಿಗದಿ ಪಡಿಸಲಾಗಿದೆ. ಆದರೆ ರಾಜ್ಯದಲ್ಲಿ ಯಾವುದೇ ಆಧ್ಯಯನ ಹಾಗೂ ಚರ್ಚೆ ಮಾಡದೆ ಕಳೆದ ಎರಡು ವರ್ಷಗಳ ಹಿಂದೆ ಹತ್ತು ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಅವೈಜ್ಞಾನಿಕವಾದ ಅದೇಶ ಹೊರಡಿಸಿದ್ದು ಇದರಿಂದ ಅಂಗನವಾಡಿ ಕಾರ್ಯಕರ್ತರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಸುಮಾರು ಇಪ್ಪತ್ತು ಲಕ್ಷ ಮಕ್ಕಳಿಗೆ ಸರಿಯಾದ ಸೌಲಭ್ಯ ಸಿಗದೆ ಶೋಷಣೆಯಾಗಿ ಮಾನವ ಹಕ್ಕುಗಳ ಉಲ್ಲಂಘನೆ ಯಾಗಿದೆ. ಮಕ್ಕಳ ಕಡೆ ಹೆಚ್ಚು ಗಮನ ನೀಡಬೇಕಾದ ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ಇತರೇ ಕೆಲಸಗಳಿಗೆ ನಿಯೋಜನೆ ಮಾಡಿಕೊಂಡು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.
ಕೆಲಸದ ಒತ್ತಡವನ್ನು ಕಡಿಮೆಗೊಳಿಸಬೇಕು, ಅಂಗನವಾಡಿ ಮಕ್ಕಳಿಗೆ ಸಮರ್ಪಕವಾದ ವಸತಿ, ಪೌಷ್ಠಿಕಾಂಶದ ಆಹಾರ ಒದಗಿಸಬೇಕು, ಮೂಲ ಸೌಲಭ್ಯಗಳಾದ ನೀರು ಶೌಚಾಲಯ ಒದಗಿಸುವುದಲ್ಲದೆ ಮಕ್ಕಳನ್ನು ಆರು ಗಂಟೆಗಳ ಕಾಲ ಕೂಡಿಹಾಕುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿ ಇದೇ ತಿಂಗಳ 19ರಂದು ಬೆಳಗ್ಗೆ 10ಗಂಟೆಗೆ ಬೆಂಗಳೂರಿನ ರೇಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ನೀಡಲಾಗುತ್ತದೆ ಎಂದರು. ಗೋಷ್ಠಿಯಲ್ಲಿ ಅಂಗನವಾಡಿ ಕಾರ್ಯಕರ್ತರ ಸಂಘಟನೆಯ ಮೀನಾಕ್ಷಿ, ಎಸ್.ಆರ್. ಲಕ್ಷಮ್ಮ, ನಾಗವೇಣಿ, ನಿರ್ಮಲಬಾಯಿ, ಗೀತಾ, ಚೌಡಮ್ಮ, ಸೀತಮ್ಮ, ಎಸ್. ನಾರಾಯಣಸ್ವಾಮಿ ಇದ್ದರು.
ಮಾಲೂರಲ್ಲಿ ತುಳಸಿ ಹಬ್ಬ
ಮಾಲೂರು: ತುಳಸಿದೇವಿ ಮದುವೆಯ ಹಬ್ಬವಾದ ಕಿರುದೀಪಾವಳಿಯನ್ನು ಗುರುವಾರ ಪಟ್ಟಣದಲ್ಲಿ ಸಂಭ್ರಮ ಸಡಗರದಲ್ಲಿ ಆಚರಿಸಲಾಯಿತು. ಮನೆ ಮುಂಭಾಗದಲ್ಲಿ ತುಳಸಿ ಕಟ್ಟೆಯಲ್ಲಿ ದಮೋದರನ ಸಂಕೇತಿಕವಾಗಿ ನಲ್ಲಿ ಗಿಡವನ್ನು ನೆಟ್ಟು ಮಂಗಳ ದ್ರವ್ಯ ಗಳನಿಟ್ಟು ಮದುವೆ ಶಾಸ್ತ್ರ ಮಾಡಿದ ಭಕ್ತರು ದಾಮೋದರನಿಗೆ ಪ್ರಿಯವಾದ ಮೊಸರವಲಕ್ಕಿಯನ್ನು ನೈವೇದ್ಯಕ್ಕೆ ಇಟ್ಟು ಧಾರ್ಮಿಕ ಕಾರ್ಯ ನಡೆಸಿದರು. ಗೋಧೋಳಿ ಸಮಯದಲ್ಲಿ ನಡೆದ ತುಳಸಿ ಪೂಜೆಯಲ್ಲಿ ಚಿಣ್ಣರಯಾದಿ ಮನೆ ಮಂದಿಯಲ್ಲ ಪಟಾಕಿ ಸಿಡಿಸಿ ಕಿರುದೀಪಾವಳಿ ಆಚರಿಸಿದರು.ಸಮುದ್ರ ಮಂಥನದ ವೇಳೆಯಲ್ಲಿ ಬಂದ ತುಳಸಿ ದೇವಿಯನ್ನು ಕೃಷ್ಣ ದೇವರಿಗೆ ನೀಡಿ ಮದುವೆ ಮಾಡುವ ಸಂಪ್ರಾದಾಯವನ್ನು ಕಾರ್ತಿಕ ಮಾಸದ 12 ನೇ ದಿನವಾದ ದ್ವಾದಶಿಯಲ್ಲಿ ನಡೆಸಲಾಗುತ್ತದೆ.