ಇ-ಗ್ರಂಥಾಲಯ ವಿಭಾಗ ತೆರೆಯಲು ಸಹಕಾರ
ಕ.ಪ್ರ.ವಾರ್ತೆ ಕೋಲಾರ ನ.14
ನಗರದ ಡಿ.ವಿ. ಗುಂಡಪ್ಪ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಇ-ಗ್ರಂಥಾಲಯ ವಿಭಾಗವನ್ನು ತೆರೆಯಲು ಸಂಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ವತಿಯಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ಜಗತ್ತಿನಾದ್ಯಂತ ಆನ್ಲೈನ್ನಲ್ಲಿ ಉಚಿತ ಪುಸ್ತಕಗಳು ಲಭ್ಯವಿದೆ. ಇದನ್ನು ಆಸಕ್ತ ಓದುಗರಿಗೆ ಲಭ್ಯವಾಗಿಸಲು ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಇ-ಗ್ರಂಥಾಲಯ ಪುಸ್ತಕ ವಿಭಾಗವನ್ನು ತೆರೆಯೋಣ. ಇದಕ್ಕಾಗಿ ಅನುದಾನ ಲಭ್ಯವಿದ್ದಲ್ಲಿ ಪ್ರತ್ಯೇಕವಾಗಿಯೇ ಕೊಠಡಿ ನಿರ್ಮಿಸಿ ಕನಿಷ್ಠ 10 ಕಂಪ್ಯೂಟರ್ಗಳನ್ನು ಒದಗಿಸುವ ಬಗ್ಗೆ ಯೋಜನೆ ಸಿದ್ಧಪಡಿಸಿ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿಗೆ ಸೂಚಿಸಿದರು.
ಇ-ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯವಿದ್ದಲ್ಲಿ ನಿಗದಿತ ಶುಲ್ಕ ಪಡೆದು ಪ್ರತಿಗಳನ್ನು ಮುದ್ರಿಸಿ ನೀಡಬಹುದು. ಆದರೆ, ಇಂಟರೆನೆಟ್ ದುರ್ಬಳಕೆಯಾಗದಂತೆ ಅದನ್ನು ತಡೆಯಲು ಇಲಾಖೆ ಅಧಿಕಾರಿ, ಸಿಬ್ಬಂದಿ ಎಚ್ಚರಿಕೆ ವಹಿಸಬೇಕು ಎಂದರು.
ದೃಶ್ಯ ಮಾಧ್ಯಮದ ಪ್ರಭಾವ, ಹೊಸ ಹೊಸ ವಿಚಾರಗಳನ್ನು ಎಷ್ಟೇ ನೀಡಿದರೂ ಪತ್ರಿಕೆ, ಪುಸ್ತಕದಷ್ಟು ಪ್ರಭಾವ ಬೀರಲು ಸಾಧ್ಯವಿಲ್ಲ. ಕೆಲ ನಿಮಿಷಗಳಲ್ಲಿ ವಿಚಾರದ ಸಂಪೂರ್ಣ ಮಾಹಿತಿ ಸಿಗಲಾರದು. ವಿಜ್ಞಾನ, ತಂತ್ರಜ್ಞಾನ, ಚರಿತ್ರೆ,ಸಾಮಾಜಿಕ ಆಗು ಹೋಗುಗಳು ಪುಸ್ತಕಗಳ ಮೂಲಕ ದೊರಕುವಷ್ಟು ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ ಎಂದರು.
ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಬಿ. ಸುರೇಶ್ ಮಾತನಾಡಿ, ಟಿವಿ, ದಣಶ್ಯ ಮಾಧ್ಯಮಗಳ ಪ್ರಭಾವ ಹೆಚ್ಚಾಗಿ ಜನರಲ್ಲಿ ಪುಸ್ತಕ ಓದುವ ಮನಸ್ಥಿತಿ ಕಡಿಮೆಯಾಗುತ್ತಿದೆ. ಗ್ರಾಮ ಮಟ್ಟದಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಕಾಳಜಿ ವಹಿಸಿ ಓದುಗರನ್ನು ಗ್ರಂಥಾಲಯಕ್ಕೆ ಬರುವಂತೆ ಮಾಡಬೇಕು ಎಂದರು.
ಗ್ರಂಥಾಲಯಕ್ಕೆ ಸದಸ್ಯತ್ವವನ್ನು ಹೆಚ್ಚಿಸಿದವರಿಗೆ ಬಹುಮಾನ ನೀಡುವುದಾಗಿ ಕಳೆದ ವರ್ಷದ ಗ್ರಂಥಾಲಯ ಸಪ್ತಾಹದಲ್ಲೇ ಘೋಷಿಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಪ್ರಾಧಿಕಾರಕ್ಕೆ ಬಂದಿಲ್ಲ. ಸದಸ್ಯತ್ವ ಶುಲ್ಕ 10 ರು. ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಸದಸ್ಯರನ್ನಾಗಿ ಮಾಡಿ ಎಂದು ಗ್ರಂಥಾಲಯ ಮೇಲ್ವಿಚಾರಕರನ್ನು ಕೋರಿದರು.
ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಸಿ. ಗಣೇಶ್ ಮಾತನಾಡಿ, ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರವನ್ನು ತೆರೆಯಲು ಈ ಹಿಂದೆಯೇ ನಿರ್ಧರಿಸಲಾಗಿದೆ. ಇದರ ಜೊತೆಗೆ ಇ-ಗ್ರಂಥಾಲಯ ವಿಭಾಗವನ್ನೂ ಒಂದು ಕಡೆ ತೆರೆಯಬಹುದು ಎಂದು ನುಡಿದರು.
ಜಿಲ್ಲಾ ಗ್ರಂಥಾಲಯ ಸಪ್ತಾಹದ ಅಂಗವಾಗಿ ಶಾಲೆಗಳಲ್ಲಿ ಮಕ್ಕಳಿಗೆ ಜಾನಪದ ಗೀತೆ, ಪ್ರಬಂಧ ಸ್ಪರ್ಧೆ ಮತ್ತಿತರೆ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನ. 19ರಂದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಗ್ರಂಥಾಲಯ ಮೇಲ್ವಿಚಾರಕದ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಪ್ರಾಧಿಕಾರದ ಸದಸ್ಯರು, ಗ್ರಂಥಾಲಯದ ಸಿಬ್ಬಂದಿ ವರ್ಗ, ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಪುಸ್ತಕಗಳಿದ್ದು, ನೂರಾರು ಪ್ರಮುಖ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಜಿಲ್ಲಾಧಿಕಾರಿಗಳು ಪುಸ್ತಕ ಪ್ರದರ್ಶನವನ್ನು ವೀಕ್ಷಿಸಿದರು.