ಡಿಸೆಂಬರ್ನಲ್ಲಿ ಕಂದಾಯ ಅದಾಲತ್: ಡಿಸಿ
ಕ.ಪ್ರ.ವಾರ್ತೆ ಕೋಲಾರ ನ.14
ಕಂದಾಯ ಇಲಾಖೆಯನ್ನು ಜನ ಸ್ನೇಹಿ ಇಲಾಖೆಯನ್ನಾಗಿಸುವ ಉದ್ದೇಶದಿಂದ ಜನರ ಬಳಿಗೆ ಇಲಾಖೆಯ ಅಧಿಕಾರಿಗಳನ್ನು ಕರೆದೊಯ್ದು ಜಮೀನುಗಳ ತಕಾರರು, ಖಾತೆ ಬದಲಾವಣೆ, ತಿದ್ದುಪಡಿ, ಸೇರಿದಂತೆ ಭೂಮಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಸ್ಥಳದಲ್ಲೇ ನಿವಾರಿಸಲು ಡಿಸೆಂಬರ್ ಮೊದಲ ವಾರದಲ್ಲಿ ಕಂದಾಯ ಅದಾಲತ್ ನಡೆಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಪ್ರಕಟಿಸಿದರು.
ಅವರು ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಂದಾಯ ಅದಾಲತ್ ನಡೆಸಲು ಪ್ರಾಯೋಗಿಕವಾಗಿ ಕೋಲಾರ ತಾಲೂಕುನ್ನು ಆಯ್ಕೆಮಾಡಿಕೊಂಡಿದ್ದು, ನಂತರ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ವಿಸ್ತರಣೆ ಮಾಡುವುದಾಗಿ ತಿಳಿಸಿದರು. ಡಿಸೆಂಬರ್ ಮೊದಲ ವಾರದಲ್ಲಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳು ತಲಾ ಎರಡು ಹೋಬಳಿಗಳಲ್ಲಿ ಕಂದಾಯ ಅದಾಲತ್ ನಡೆಸಲಿದ್ದು ಅದೇ ರೀತಿಯಲ್ಲಿ ತಹಸೀಲ್ದಾರ್ 1 ಹೋಬಳಿಗೆ ತೆರಳಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅಹವಾಲು ಸ್ವೀಕರಿಸಿ ಸ್ಥಳದಲ್ಲೇ ಸಮಸ್ಯೆಗೆ ಪರಿಹಾರ ನೀಡಲಿರುವುದಾಗಿ ವಿವರಿಸಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ಕೋಲಾರ ಜಿಲ್ಲೆಯಲ್ಲಿ ಇಂತಹದಂದು ಪ್ರಯತ್ನ ನಡೆಯುತ್ತಿರುಬಹುದು ಎಂದ ಜಿಲ್ಲಾಧಿಕಾರಿಗಳು, ಈಗಾಗಲೇ ಎಲ್ಲಾ ಪಂಚಾಯಿತಿಗಳಲ್ಲಿ ಡಂಗುರ ಮೂಲಕ ವಿಷಯವನ್ನು ಜನರಿಗೆ ತಿಳಿಸುವಂತೆ ಮತ್ತು ಅರ್ಜಿಗಳನ್ನು ಪಡೆಯುವಂತೆ ಗ್ರಾಪಂ ಕಾರ್ಯದರ್ಶಿಗಳಿಗೆ ಮತ್ತು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕಂದಾಯ ಇಲಾಖೆ ತಮ್ಮ ಮನೆ ಬಾಗಿಲಿಗೆ ಬರುತ್ತಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದರು.
ಉದ್ಯೋಗ ಮೇಳಕ್ಕೆ ಸಿದ್ಧತೆ: ಜಿಲ್ಲಾಡಳಿತ, ಜಿಪಂ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಇಲಾಖೆ ಹಾಗೂ ಭಾರತ ಸರ್ಕಾರದ ಸಹಯೋಗದಿಂದ ನ.23 ಮತ್ತು 24 ರಂದು ಕೋಲಾರ ನಗರದಲ್ಲಿ ಹಮ್ಮಿಕೊಂಡಿರುವ ಬಣಹತ್ ಉದ್ಯೋಗ ಮೇಳಕ್ಕೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಕೋಲಾರ ನಗರದ ಸರ್ಕಾರಿ ಬಾಲಕರ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳ ನಡೆಯಲಿದ್ದು ಸುಮಾರು 5 ಸಾವಿರ ಮಂದಿಗೆ ಕೆಲಸ ಕೊಡಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಈಗಾಗಲೇ ಆನ್ಲೈನ್ ಮೂಲಕ ಸುಮಾರು 2,500 ಮಂದಿ ಉದ್ಯೋಗಕ್ಕಾಗಿ ತಮ್ಮ ಹೆಸರು ನೊಂದಾಣಿ ಮಾಡಿಕೊಂಡಿದ್ದಾರೆಂದರು.
ಉದ್ಯೋಗ ಮೇಳದಲ್ಲಿ ದೊಡ್ಡ ಕಂಪನಿಗಳು ಭಾಗವಹಿಸಲಿದ್ದು, ಮತ್ತಷ್ಟು ಕಂಪನಿಗಳು ಪಾಲ್ಗೊಳ್ಳುವಿಕೆಯ ಬಗ್ಗೆ ಚರ್ಚೆ ನಡೆಸಲು ಎಂಎಸ್ಎಂಇ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಕೈಗಾರಿಕೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿದ್ಯಾಶಂಕರ್ ಅವರು ನ.16 ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆಂದು ಹೇಳಿದರು.
ಸುಮಾರು 140 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. ಸುಮಾರು 7 ರಿಂದ 8 ಸಾವಿರ ಯುವಕರು ಉದ್ಯೋಗಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಕನಿಷ್ಠ 5 ಸಾವಿರ ಮಂದಿಗೆ ಈ ಬೃಹತ್ ಮೇಳದಿಂದ ಉಪಯೋಗವಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ಹೇಳಿದರು.
ಕೌಶಲ್ಯ ಅಭಿವೃದ್ಧಿ ತರಬೇತಿ
ಶಿಡ್ಲಘಟ್ಟ: ಬಡತನ ನಿರ್ಮೂಲನೆಗಾಗಿ ಸ್ವರ್ಣ ಜಯಂತಿ ರೋಜ್ಗಾರ್ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿ ವಿವಿಧ ತರಬೇತಿ ನೀಡುತ್ತಿದ್ದು ಸದುಪಯೋಗಪಡಿಸಿಕೊಳ್ಳಬೇಕೆಂದು ಯೋಜನಾ ನಿರ್ದೇಶಕ ನಾಗರಾಜ ಶೆಟ್ಟಿ ತಿಳಿಸಿದರು.
ಪಟ್ಟಣದ ಅಶೋಕ ಡ್ರೈವಿಂಗ್ ಸ್ಕೂಲ್ ಬಳಿ ಲಘು ವಾಹನ ತರಬೇತಿಗೆ ಚಾಲನೆ ನೀಡಿ ಮಾತನಾಡಿ, ಸ್ವರ್ಣ ಜಯಂತಿ ರೋಜಗಾರ್ ಯೋಜನೆಯಡಿ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಸಮುದಾಯ ಅಭಿವೃದ್ಧಿ ತಜ್ಞ ವೆಂಕಟಾಚಲಪತಿ ಮಾತನಾಡಿ, ತರಬೇತಿ ನಂತರ ಉದ್ಯೋಗ ಅವಕಾಶ ಕಲ್ಪಿಸಲು ಅವಕಾಶವಿದ್ದು, ಆಸಕ್ತಿ ಇಲ್ಲದವರು ಬ್ಯಾಂಕ್ನಿಂದ ಸಾಲ ಪಡೆದು ಸ್ವಂತ ಉದ್ಯೋಗ ಪ್ರಾರಂಭ ಮಾಡಬಹುದೆಂದು ತಿಳಿಸಿದರು. ಪುರಸಭೆ ಮುಖ್ಯಾದಿಕಾರಿ ಚೆನ್ನರಾಯಪ್ಪ ಮಾತನಾಡಿದರು. ಸುದಾ, ಜಯರಾಂ ಇದ್ದರು.