ದೇಗುಲ ವಿಮಾನ ಗೋಪುರ ಜೀರ್ಣೋದ್ಧಾರ
ಕೆಜಿಎಫ್: ಇತಿಹಾಸ ಪ್ರಸಿದ್ಧ ಪಡೆದ ಬೇತಮಂಗಲ ಗ್ರಾಮದ ಶ್ರೀ ವಿಜಯೇಂದ್ರ ಸ್ವಾಮಿ ದೇವಾಲಯದ ವಿಮಾನ ಗೋಪುರ ಜೀರ್ಣೋದ್ಧಾರ ಪ್ರಯುಕ್ತ ಕಳೆದ ಸೋಮವಾರದಿಂದ ಬುಧವಾರದವರೆಗೆ ಮೂರು ದಿನಗಳ ಕಾಲ ದೇವಾಲಯದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಹಾಭಾರತ ಯುದ್ಧದಲ್ಲಿ ಜಗಳಿಸಿದ ವಿಜಯೋತ್ಸವವನ್ನು ಆಚರಿಸಿದ ಪ್ರಯುಕ್ತ ಅರ್ಜುನ ಬೇತಮಂಗಲ ಗ್ರಾಮದಲ್ಲಿ ಶ್ರೀ ವಿಜಯೇಂದ್ರಸ್ವಾಮಿ ವಿಗ್ರಹವನ್ನು ಪ್ರತಿಷ್ಠಾಪಿಸಿದ ದೇವಸ್ಥಾನವನ್ನು ಚೋಳರಾಜರು ನಿರ್ಮಿಸಿರುವುದಾಗಿ ಹೇಳಲಾಗಿದೆ. ಹಲವಾರು ಗಣ್ಯರು ಮತ್ತು ಮುಖಂಡರು ಒಗ್ಗೂಡಿ ದೇವಸ್ಥಾನದ ಅಭಿವೃದ್ಧಿಗೆ ಕೈಜೋಡಿಸಿದ್ದು ಇದೀಗ ದೇವಸ್ಥಾನ ಜೀರ್ಣೋದ್ಧಾರ ಕಳಶಸ್ಥಾಪನೆ ನೆರವೇರಿಸಲಾಯಿತು.
ಮೂರು ದಿನಗಳಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತೋತ್ಸವ, ದೇವರಿಗೆ ವಿಶೇಷ ಪೂಜಾಲಂಕಾರ ಮತ್ತಿತರರ ಕಾರ್ಯಕ್ರಮಗಳನ್ನು ನಡೆಸಲಾಯಿತು. ವಿಮಾನ ಗೋಪುರ ಸ್ಥಾಪನೆ ಮತ್ತು ಜೀರ್ಣೋದ್ಧಾರ ಕಳಶ ಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಯುಕ್ತ ಕರ್ನಾಟಕ ಲೋಕ ಟ್ರಸ್ಟ್ನ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಶಾಸಕ ವೈ. ಸಂಪಂಗಿ, ಜಿ.ಪಂ. ಸದಸ್ಯ ಆ.ಮು. ಲಕ್ಷ್ಮೀನಾರಾಯಣ ಅವರಿಂದ ವಿಶೇಷ ಪೂಜೆಯನ್ನು ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಶ್ರೀ ವಿಜಯೇಂದ್ರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಉಚ್ಚನ್ಯಾಯಾಲಯದ ವಕೀಲರಾದ ರಘುನಾಥ್, ಜಿ.ಪಂ. ಉಪನಿರ್ದೇಶಕ ಪದ್ಮನಾಭ್, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಶಂಕರ್, ಡಾ. ಕೃಷ್ಣಮೂರ್ತಿ, ವಿಎಸ್ಎಸ್ಎನ್ ಅಧ್ಯಕ್ಷ ಮುನಿಸ್ವಾಮಿರೆಡ್ಡಿ, ದೇವಾಲಯದ ಸಮಿತಿಯ ಸಂಚಾಲಕ ಶ್ರೀಹರಿ, ಜೆ.ಜಿ.ಶ್ರೀನಿವಾಸಮೂರ್ತಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ದಿನ
ಮಾಲೂರು: ಹಿಂದುಳಿದಿರುವ ರಾಜ್ಯದ ಉತ್ತರ ಕರ್ನಾಟಕದಲ್ಲಿ ಕೆಎಲ್ಇ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಕ್ರಾಂತಿ ಮಾಡಿದ್ದು, ಸಂಸ್ಥೆಯನ್ನು ಮಾದರಿಯಾಗಿ ಪಡೆದು ಶಿಕ್ಷಣ ಸಂಸ್ಥೆಗಳು ಸ್ಥಾಪಿಸಬೇಕು ಎಂದು ಉಪಾನ್ಯಾಸಕ ನಾಗರಾಜಯ್ಯ ಹೇಳಿದರು. ಪಟ್ಟಣದ ಕೆಎಲ್ಇ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂಸ್ಥೆಯ 98 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಸಂಸ್ಥೆ ಸ್ಥಾಪಿಸಿರುವುದು ಈ ಭಾಗದ ಮಕ್ಕಳ ಭಾಗ್ಯವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯಬೇಕೆಂದರು. ಸಂಸ್ಥೆಯ ಮುಖ್ಯ ಶಿಕ್ಷಕ ಬಸವರಾಜ್ ಹಿರೇಮಠ್, ಎಚ್.ಜೆ. ಪ್ರಭು, ಶರಣಪ್ಪ ತುಪ್ಪದ್, ಬೆಳಗಾವಿ ಮಾತನಾಡಿದರು. ದಾನಿ ಶಿವುಕುಮಾರ್ ರಂಜನ್, ಕೆಂಪಣ್ಣ,ಪ್ರಾಂಶುಪಾಲ ರಮಣಿ ರಾಮನ್ ಇದ್ದರು.