ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನೇತ್ರಾಳ ಪೋಷಕರಿಗೆ ಕಾಡುತ್ತಿದೆ ಪ್ರಾಣ ಭೀತಿ

Srinivasa Murthy VN
Updated On : 15 Nov 2013, 12:57 pm

-ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ:
ಆತ್ಮಹತ್ಯೆಗೆ ಯಾವುದೇ ಕಾರಣಗಳಿಲ್ಲದಿದ್ದರೂ ತಮ್ಮ ಮಗಳು ನಿಗೂಢವಾಗಿ ಸಾವನ್ನಪ್ಪಿರುವುದರಿಂದ ಜರ್ಜರಿತರಾಗಿರುವ ನೇತ್ರಾಳ ಪೋಷಕರು ಭಯದ ಮಧ್ಯೆಯೂ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ. ತಮ್ಮ ಮಗಳ ಸಾವಿನ ಬಗ್ಗೆ ಅವರಿಗೆ ಅನೇಕ ಅನುಮಾನಗಳು ಕಾಡುತ್ತಿದ್ದು, ನಾವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ ತೊಂದರೆಯಾಗುವ ಆತಂಕ ಅವರನ್ನು ಕಾಡುತ್ತಿದೆ.
ಗೌರಿಬಿದನೂರು ಪಟ್ಟಣದ ಕರೇಕಲ್ಲಹಳ್ಳಿ ಸ್ವಾಗತ ಲೇಔಟ್‌ನ ನಾರಾಯಣಪ್ಪ ಮತ್ತು ನಾಗಮ್ಮ ದಂಪತಿಯ ಪುತ್ರಿ ನೇತ್ರಾ ಸಾವು ಕೊಲೆಯೋ, ಆತ್ಮಹತ್ಯೆಯೋ ಎನ್ನುವ ಸತ್ಯಾಂಶ ಬಯಲಿಗೆಳೆಯಲು ಉನ್ನತ ಮಟ್ಟದ ತನಿಖೆಯಾಗಬೇಕೆಂದು ನಾನಾ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಮಗೆ ನ್ಯಾಯ ಸಿಗಬೇಕೆಂದು ನೇತ್ರಾಳ ಪೋಷಕರೂ ಧ್ವನಿ ಎತ್ತಿದ್ದಾರೆ.
ಅ.22 ರಂದು ವಿಶೇಷ ತರಗತಿ ಇದೆ ಕಾಲೇಜಿಗೆ ಬೇಗ ಹೋಗಬೇಕಿರುವುದರಿಂದ ತನ್ನನ್ನು ಬಿಟ್ಟು ಬರುವಂತೆ ನೇತ್ರಾ ತಮ್ಮ ತಂದೆ ನಾರಾಯಣಪ್ಪನನ್ನು ಕೇಳಿಕೊಂಡಿದ್ದಳು. ತಾಯಿ ನಾಗಮ್ಮ ಬೇಗನೇ ಅಡುಗೆ ಮಾಡಿದ್ದರು. ನಂತರ ಮನೆಯಿಂದ ನೇತ್ರಾ ತಮ್ಮ ತಂದೆಯೊಂದಿಗೆ ಕಾಲೇಜಿಗೆ ಹೊರಟು ಬೆಳಿಗ್ಗೆ 9.30 ರಿಂದ 10.30 ರವರೆಗೂ ನಡೆದ ವಿಶೇಷ ತರಗತಿಗೆ ಹಾಜರಾಗಿದ್ದಳು. ಆದರೆ, ನಂತರ ಆಕೆ ಮನೆಗೆ ಹೋಗಲೇ ಇಲ್ಲ. ಸಂಜೆಯಾಗುತ್ತಿದ್ದಂತೆ ಆತಂಕಗೊಂಡ ಪೋಷಕರು ಎಲ್ಲಾ ಕಡೆ ಹುಡುಕಾಡಿದರೂ ಸಹ ನೇತ್ರಾ ಪತ್ತೆಯಾಗಿಲ್ಲ. ಈ ನಡುವೆ ಅ.29 ರಂದು ಅನಾಮಧೇಯ ವ್ಯಕ್ತಿ ದೂರವಾಣಿ ಕರೆ ಮಾಡಿ ನೇತ್ರಾಳ ನಾಪತ್ತೆಯ ಬಗ್ಗೆ ವಿಚಾರಿಸಿದ್ದಾನೆ. ಅದೇ ರೀತಿ ನ.1 ರಂದು ಅನಾಮಧೇಯ ವ್ಯಕ್ತಿಯೇ ನೇತ್ರಾ ಚಿಕ್ಕಬಳ್ಳಾಪುರ ತಾಲೂಕಿನ ವೀರದಿಮ್ಮಮ್ಮನ ಕಣಿವೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾನೆ. ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿಕೊಂಡಿದ್ದಾರೆ. ಆದರೆ, ವಿದ್ಯಾರ್ಥಿ ಸಂಘಟನೆಗಳು ಮಾತ್ರ ಇದು ಕೊಲೆ ಎಂದು ಪ್ರತಿಪಾದಿಸುತ್ತ ನಿಷ್ಪಕ್ಷಪಾತ ತನಿಖೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ.
ಹೊಟ್ಟೆ ನೋವಿಲ್ಲ: ನೇತ್ರಾಳ ಮನೆಯಲ್ಲಿ ಇದೀಗ ನೀರವ ಮೌನ ಆವರಿಸಿದೆ. ಪೋಷಕರು ತಮ್ಮ ಮಗಳು ಇನ್ನಿಲ್ಲ ಎನ್ನುವುದನ್ನು ಜೀರ್ಣಿಸಿಕೊಳ್ಳಲಾಗದೇ ಜರ್ಜಿತರಾಗಿದ್ದಾರೆ.
ಕಾಲೇಜಿಗೆ ಹೋಗ್ತೀನಿ ಅಂತಾ ಹೋದವಳು ಕೊಳೆತ ಸ್ಥಿತಿಯಲ್ಲಿ  ಶವವಾಗಿ ಪತ್ತೆಯಾಗುತ್ತಾಳೆ ಅಂತಾ ನಾವು  ಊಹಿಸಿಯೇ ಇರಲಿಲ್ಲ. ನಮ್ಮ ಮಗಳಿಗೆ ಹೊಟ್ಟೆ ನೋವು ಸಮಸ್ಯೆ ಇರಲಿಲ್ಲ. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವಂತವಳೂ ಅಲ್ಲ. ಅಕಸ್ಮಾತ್ ಏನಾದರೂ ಇದ್ದರೆ ನಮ್ಮೊಂದಿಗೆ ಹೇಳಿಕೊಳ್ಳುತ್ತಿದ್ದಳು. ಆದರೆ, ದೂರ ಹೋಗಿ ವೀರದಿಮ್ಮಮ್ಮನ ಕಣಿವೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದೇಳಿದರೆ ನಮಗೆ ನಂಬೋದಿಕ್ಕೆ ಆಗುತ್ತಿಲ್ಲ. ಇನ್ನೂ ಯಾರನ್ನೋ ಪ್ರೀತಿ ಮಾಡಿದ್ದಳು ಎನ್ನುವ ವಿಷಯ ನಮ್ಮ ಗಮನಕ್ಕೆ ಬಂದಿಲ್ಲ ಎಂದು ನೇತ್ರಾಳ ತಂದೆ ನಾರಾಯಣಪ್ಪ ಬರುತ್ತಿದ್ದ ಕಣ್ಣೀರನ್ನು ತಡೆಯಲಾಗದೇ ಮೌನವಾದರು.
ದುಡ್ಡು ತಗೊಂಡಿಲ್ಲ: ತಮ್ಮ ಮಗಳ ಸಾವನ್ನಪ್ಪಿದರೂ ಪೋಷಕರು ದೂರು ಕೊಡದೆ ದುಡ್ಡು ಪಡೆದು ಸುಮ್ಮನಾಗಿದ್ದಾರೆ ಎನ್ನುವ ಮಾತು ಸುಳ್ಳು. ನಮಗೆ ನಮ್ಮ ಮಗಳ ಸಾವಿನ ಬಗ್ಗೆ ಅನುಮಾನವಿದೆ. ಆಕೆಯ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕೆನ್ನುವುದೇ ನಮ್ಮ ಒತ್ತಾಯ. ಆದರೆ, ಪೊಲೀಸ್ ಠಾಣೆಗೆ ದೂರು ಕೊಡಲು ಭಯವಾಗುತ್ತಿದೆ. ಇರುವ ಒಬ್ಬ ಮಗನನ್ನು ಏನು ಮಾಡುತ್ತಾರೋ ಎಂಬ ಭಯ ಕಾಡುತ್ತಿದ್ದು, ದುಃಖದ ಜತೆ ಭಯ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸುವ ನೇತ್ರಾಳ ತಾಯಿ ನಾಗಮ್ಮ, ನಮ್ಮ ಮಗಳು ಒಬ್ಬಳೇ ಅಷ್ಟು ದೂರ ಹೋಗಿಲ್ಲ. ಯಾರೋ ಕರೆದುಕೊಂಡು ಹೋಗಿದ್ದು ತಪ್ಪಿತಸ್ಥರಿಗೆ ಶಿಕ್ಷೆಯಾದರೇನೇ ನಮಗೆ ನೆಮ್ಮದಿ ಎಂದು ಹೇಳಿದ್ದಾರೆ. ನೇತ್ರಾಳ ಅಣ್ಣ ಮಂಜುನಾಥ್ ತನ್ನ ತಂಗಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾನೆ.
ಕಾಲೇಜಿನಲ್ಲೂ ಒತ್ತಾಯ: ತಮ್ಮ ಕಾಲೇಜಿನ ವಿದ್ಯಾರ್ಥಿನಿ ನೇತ್ರಾಳ ಸಾವಿಗೆ ಕೊಲೆ ಇಲ್ಲವೇ ಆತ್ಮಹತ್ಯೆ ಕಾರಣವೇ ಎನ್ನುವುದನ್ನು ತನಿಖೆ ಮಾಡಬೇಕೆಂದು ನೇತ್ರಾ ಓದುತ್ತಿದ್ದ ಗೌರಿಬಿದನೂರಿನ ಎಸ್‌ಎಸ್‌ಇಎ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಸಾದ್ದುಲ್ಲಾ ಖಾನ್ ಒತ್ತಾಯಿಸಿದ್ದಾರೆ. ಅದೇ ರೀತಿ ನೇತ್ರಾಳ ಸ್ನೇಹಿತರು, ಶಿಕ್ಷಕರು ಮುಂದೆ ಇಂತಹ ಘಟನೆಗಳು ಸಂಭವಿಸದಿರಲು ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನೇತ್ರಾ ನಾಪತ್ತೆಯಾದ ಮತ್ತು ಕೊಲೆಯಾದ ಬಗ್ಗೆ ತಿಳಿಸಿದ ಅನಾಮಧೇಯ ವ್ಯಕ್ತಿ ಯಾರು, ಗೌರಿಬಿದನೂರು ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು, ಶವದ ಬಳಿ ಎರಡು ವಿಷದ ಬಾಟಲಿ ಪತ್ತೆಯಾಗಲು ಕಾರಣವೇನು, ಶವ ಪತ್ತೆಯಾದ ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸದೆ, ಮೃತಳ ಬ್ಯಾಗನ್ನು ಹುಡುಕಾಡಿ ಅದರಲ್ಲಿನ ಪುಸ್ತಕದಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪೋಷಕರಿಗೆ ತಿಳಿಸಿದರ ಅರ್ಥವೇನು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಅವರು ವಿದ್ಯಾರ್ಥಿನಿ ಸಾವಿನ ಬಗ್ಗೆ ಇರುವ ಅನುಮಾನಗಳನ್ನು ಬಗೆಹರಿಸಲು ಸೂಕ್ತ ತನಿಖೆಗೆ ಆದೇಶಿಸಬೇಕೆಂದು ಎಬಿವಿಪಿ, ಎಸ್‌ಎಫ್‌ಐ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ನೇತ್ರಾಳ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಬಿವಿಪಿ ಸಂಘಟನೆಯ ನವೀನ್, ಹರೀಶ್, ಎಸ್ ಎಫ್‌ಐನ ಕುಂದಲಗುರ್ಕಿ ಮುನೀಂದ್ರ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement