ಹೊರಗುಳಿದ ಮಕ್ಕಳ ಸಮೀಕ್ಷೆಗೆ ಪೋಷಕರು ಸಹಕರಿಸಿ'
ಕೆಜಿಎಫ್: ಬೇತಮಂಗಲ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಲೆಯಿಂದ ಹೊರಗುಳಿದ 6 ರಿಂದ 16 ವರ್ಷದ ಮಕ್ಕಳ ಕುಟುಂಬ ಸಮೀಕ್ಷೆಗೆ ಪೋಷಕರು ಸಹಕರಿಸಿ ನಿಖರ ಮಾಹಿತಿ ನೀಡಿ ಶಾಲೆಗೆ ಕಳುಹಿಸಬೇಕು ಎಂದು ಮಾಜಿ ಶಾಸಕ ವೈ. ಸಂಪಂಗಿ ಮನವಿ ಮಾಡಿದರು. ಬುಧವಾರ ಬೇತಮಂಗಲದಲ್ಲಿ ಹಮ್ಮಿಕೊಂಡಿದ್ದ ಕುಟುಂಬ ಸಮೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅದೇ ರೀತಿ ಶಾಲೆಯಿಂದ ಹೊರಗುಳಿದ ಮಕ್ಕಳು ಸಾಮಾನ್ಯವಾಗಿ ಬಡತನದಿಂದ ಇಂತಹ ಕುಟುಂಬಗಳು ಹಲವು ಸಮಸ್ಯೆಗಳಿಂದ ಕೂಡಿದ್ದು ಮಕ್ಕಳು ಶಾಲೆಗಳಿಗೆ ಪದೇ ಪದೆ ಗೈರು ಹಾಜರಾಗಿ ಶಾಲೆಯಿಂದ ಹೋರಗುಳಿದಿರುತ್ತಾರೆ. ಪೋಷಕರು ಶಿಕ್ಷಣದ ಮಹತ್ವ ಮತ್ತು ಇಲಾಖೆಯ ಪ್ರೋತ್ಸಾಹಗಳನ್ನು ಮನವರಿಕೆ ಮಾಡಿಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದರು. ಅದೇ ರೀತಿ ಶಿಕ್ಷಕರು ಇಂತಹ ಬಡಕುಟುಂಬಗಳಿಗೆ ಭೇಟಿ ನೀಡಿ ಪ್ರಾಮಾಣಿಕ ಮತ್ತು ನೈಜ ಮಾಹಿತಿಯೊಂದಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಯಲ್ಲಿ ಸೇರಿಸಬೇಕು ಎಂದರು. ಈ ಸಮಿಕ್ಷೆ ಕಾರ್ಯವು ಇದೇ ತಿಂಗಳ 13 ರಿಂದ 17ರವರೆಗೆ ನಡೆಯಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಎಸ್ಎಸ್ಎನ್ ಅಧ್ಯಕ್ಷ ಮುನಿಸ್ವಾಮಿರೆಡ್ಡಿ, ಬಿ.ಕೆ. ಶ್ರೀನಿವಾಸ್, ಡಾ. ಕೃಷ್ಣಮೂರ್ತಿ, ಅಫ್ಜಲ್, ಕೃಷ್ಣ, ವೆಂಕಟರೆಡ್ಡಿ, ಬಿ.ಆರ್.ಪಿ. ಶ್ರೀನಿವಾಸ್, ಸಿಆರ್ಪಿ ಸೀನಪ್ಪ, ಮೇಲ್ವಿಚಾರಕ ಎನ್. ಆನಂದ್. ಮು.ಶಿ.ನಾರಾಯಣಪ್ಪ, ಶಿಕ್ಷಕಿ ಪ್ರೇಮಕುಮಾರಿ, ಅಂಗನವಾಡಿ ಕಾರ್ಯಕರ್ತೆ ಶೋಭಾರಾಣಿ ಉಪಸ್ಥಿತರಿದ್ದರು.
ಸುಸ್ಥಿತಿಯತ್ತ ಡಿಸಿಸಿ ಬ್ಯಾಂಕ್: ಅಧ್ಯಕ್ಷ ಪಿ.ಎನ್. ಕೃಷ್ಣಾರೆಡ್ಡಿ ಸಂತಸ
ಕೋಲಾರ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಈಗ ಚೇತರಿಕೆ ಕಂಡಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರೆಯುವಂತೆ ಮಾಡುವ ಹೊಣೆ ಜಿಲ್ಲೆಯ ಸಹಕಾರಿಗಳದ್ದಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪಿ.ಎನ್. ಕೃಷ್ಣಾರೆಡ್ಡಿ ತಿಳಿಸಿದರು. ಜಿಲ್ಲಾ ಸಹಕಾರಿ ಯೂನಿಯನ್ ಮುಂದೆ ಸಹಕಾರಿ ಸಪ್ತಾಹದ ಧ್ವಜಾರೋಹಣ ನೆರವೇರಿಸಿ ನಂತರ ಯೂನಿಯನ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಪ್ತಾಯದ ಆರಂಭದ ಈ ದಿನವನ್ನು ಸಹಕಾರಿ ಆಡಳಿತ, ನಾಯಕತ್ವ ಮತ್ತು ಸುಧಾರಣೆಗಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಕೆಲವು ತಪ್ಪುಗಳಿಂದಾಗಿ ಜಿಲ್ಲೆಯ ರೈತರಿಗೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳು ಸಿಗದಂತಾಗಿದೆ ಎಂದು ವಿಷಾದಿಸಿದ ಅವರು, ಮತ್ತೊಮ್ಮೆ ಇಂತಹ ದುಸ್ಥಿತಿ ಎದುರಾಗದಂತೆ ಸಹಕಾರಿ ಸಂಸ್ಥೆಗಳನ್ನು ರಾಜಕೀಯದಿಂದ ಮತ್ತು ಭ್ರಷ್ಟತೆಯಿಂದ ಹೊರತಾಗಿ ಬಲಗೊಳಿಸುವ ಯತ್ನ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಯೂನಿಯನ್ ನಿರ್ದೇಶಕ ಹೊಳಲಿ ಪ್ರಕಾಶ್, ಸಹಕಾರಿ ರಂಗದಲ್ಲಿ ಸಣ್ಣಪುಟ್ಟ ಲೋಪದೋಷಗಳು ಎದುರಾಗುವುದು ಸಹಜ, ಆದರೆ ಇದನ್ನೇ ದೊಡ್ಡದು ಮಾಡಿ ಇಡೀ ವ್ಯವಸ್ಥೆಯನ್ನೇ ಕ್ಷೀಣಿಸುವಂತೆ ಮಾಡುವುದು ಸರಿಯಲ್ಲ ಎಂದರು. ಯೂನಿಯನ್ ಉಪಾಧ್ಯಕ್ಷ ವೆಂಕಟರೆಡ್ಡಿ, ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ, ಸಹಕಾರ ಸಂಘಗಳ ಉಪನಿಬಂಧಕ ಪ್ರಸಾದ್ ರೆಡ್ಡಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶಪ್ಪ, ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ಶ್ರೀರಂಗಪ್ಪ, ಹಿರಿಯ ನಿರೀಕ್ಷಕ ಜಗದೀಶ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಹುಸೇನ್ ದೊಡ್ಡಮನಿ, ಚೌಡಪ್ಪ ಇದ್ದರು.