ಗ್ರಂಥಾಲಯಗಳು ಜ್ಞಾನ ಕೇಂದ್ರಗಳಿದ್ದಂತೆ: ಕಾಂಬ್ಳೆ
ಗುಡಿಬಂಡೆ: ಗತಕಾಲದ ಹಾಗೂ ಪ್ರಚಲಿತ ವಿಷಯಗಳನ್ನು ಅರಿತು ಜ್ಞಾನ ವೃದ್ಧಿಸಿಕೊಳ್ಳುವ ಕೇಂದ್ರಗಳೇ ಗ್ರಂಥಾಲಯಗಳೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಟಿ. ಕಾಂಬ್ಳೆ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಂಥಾಲಯಗಳು ಸಮಯ ಕಳೆಯುವ ಕೇಂದ್ರಗಳಾಗುತ್ತಿರುವುದು ವಿಷಾದನೀಯ. ಹಣದಿಂದ ಜ್ಞಾನ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದರು.
ಪತ್ರಕರ್ತ ರಾಮಮೂರ್ತಿ ಮಾತನಾಡಿ, ಮನುಷ್ಯನಿಗೆ ಜ್ಞಾನದ ಹಸಿವನ್ನು ನೀಗಿಸುವ ಶಕ್ತಿ ಗ್ರಂಥಾಲಯಗಳಿಗಿದೆ. ಹಿಂದಿನ ಕಾಲದಲ್ಲಿ ವಿದ್ವಾಂಸರು ಬರೆದ ತಾಳೆಗೆರೆ ಪುಸ್ತಕಗಳನ್ನು ಶೇಖರಿಸಿ ಓದಲು ಅವಕಾಶ ನೀಡುತ್ತಿದ್ದರು. ಅದೇ ರೀತಿ ಈಗ ಸರ್ಕಾರಗಳು ಗ್ರಂಥಾಲಯಗಳನ್ನು ತೆರೆದು ಜ್ಞಾನಾರ್ಜನೆಗೆ ನೆರವಾಗುತ್ತಿದೆ ಎಂದರು. ಗ್ರಂಥಪಾಲಕ ಕೃಷ್ಣೇಗೌಡ ಮಾತನಾಡಿ, ಪಟ್ಟಣದ ಗ್ರಂಥಾಲಯಕ್ಕೆ ಕಟ್ಟಡದ ಕೊರತೆಯಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸ್ಥಳ ನಿರ್ಧಾರವಾದರೆ ಹಣ ಬಿಡುಗಡೆಯಾಗುತ್ತದೆ. ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದರು. ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಮ.ಗ. ಹೆಗಡೆ, ಪಪಂ ಸದಸ್ಯೆ ಲಕ್ಷ್ಮೀಕಾಂತಮ್ಮ, ಶಿಕ್ಷಕ ರಾಘವೇಂದ್ರ, ರಮೇಶ್, ನಾಗರಾಜ್, ಗ್ರಂಥಾಲಯದ ಸಿಬ್ಬಂದಿ ಅಲ್ತಾಫ್ ಇದ್ದರು.