'ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮುಖ್ಯ'
ಕೋಲಾರ: ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೆ ತಂದಿದ್ದು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಕಾನೂನು ಅರಿವು ಪಡೆಯಿರಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ರೇಣುಕಾಪ್ರಸಾದ್ ಕರೆ ನೀಡಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೋಲಾರ, ವಕೀಲರ ಸಂಘ, ಕೋಲಾರ, ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, ಕೋಲಾರ ಮತ್ತು ಪ್ರಗತಿ ಮಹಿಳಾ ಅಭಿವೃದ್ಧಿ ಸಂಘ (ರಿ) ಅರಹಳ್ಳಿ ಅಶ್ರಯದಲ್ಲಿ ಮಹಿಳಾ ಐಟಿಐ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶರಾದ ಬಿ.ವಿ. ರೇಣುಕಾ ಅವರು ಕಾನೂನು ಸೇವೆಗಳ ಪ್ರಾಧಿಕಾರ ರಚನೆಯಾಗಿರುವುದು ಸಂವಿಧಾನಬದ್ದವಾಗಿ ಸಿಗುವ ಹಕ್ಕುಗಳನ್ನು ಪ್ರತಿಯೊಬ್ಬ ನಾಗರಿಕರು ಪಡೆಯುವಂತಾಗಲು ನ್ಯಾಯಾಂಗದ ಎಲ್ಲಾ ಹಂತಗಳಲ್ಲೂ ಕಾನೂನು ಸೇವೆಗಳ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ನ್ಯಾಯಾಧೀಶರಾದ ಕೆಂಗಬಾಲಯ್ಯ ಅವರು ಕೌಟುಂಬಿ ದೌರ್ಜನ್ಯ ತಡೆ ಕಾಯಿದೆ ಮತ್ತು ಹಿಂದೂ ವಿವಾಹ ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಅರ್ಮುಗಂ ವಹಿಸಿದ್ದರು.
ಯುವ ರೈತ ಮಹಿಳೆಗೆ ಪ್ರಶಸ್ತಿ
ಮುಳಬಾಗಲು: ತಾಲೂಕಿನ ಕೊತ್ತಮಂಗಲ ಗ್ರಾಮದ ಲಕ್ಷ್ಮಮ್ಮ ನಂದೀಶ್ ಗೌಡ ಕೃಷಿ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿ ಪರಿಗಣಿಸಿ ಕೃಷಿ ವಿಶ್ವವಿದ್ಯಾನಿಲಯ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಕೃಷಿ ಮೇಳದಲ್ಲಿ ತಾಲೂಕು ಮಟ್ಟದ ಪ್ರಗತಿ ಶೀಲ ಯುವರೈತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ. ಲಕ್ಷ್ಮಮ್ಮ ಕಳೆದ 15 ವರ್ಷಗಳಿಂದ ಕೃಷಿ ಚಟುವಟೆಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಲಕ್ಷ್ಮಮ್ಮ ಕನ್ನಡ ಪ್ರಭದೊಂದಿಗೆ ಮಾತನಾಡಿ, ಕೃಷಿ ಇಲಾಖೆಯ ಬಿ.ಸಿ. ದೇವೇಗೌಡರ ಸೂಚನೆ ಮೇರೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿ ಉತ್ತಮ ಬೆಳೆ ಬೆಳೆಯುತ್ತಿರುವುದಾಗಿ ತಿಳಿಸಿದರು. ಪ್ರೊ. ಮಹೇಶ್ ಗೌಡ ಲಕ್ಷ್ಮಮ್ಮ ಅವರ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು. ಬೆಂಗಳೂರು ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಕೃಷಿ ಮೇಳದಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಇತರೆ ಸಚಿವರ ಸಮ್ಮುಖದಲ್ಲಿ ಇವರನ್ನು ಸನ್ಮಾನಿಸಿ ಪ್ರಶಸ್ತಿ ನೀಡಲಾಯಿತು.
ಪೂರ್ವಭಾವಿ ಸಭೆ
ಬಂಗಾರಪೇಟೆ: ಕನಕ ಜಯಂತಿಯನ್ನು ರಾಜಕೀಯ ಹಸ್ತಕ್ಷೇಪವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಮೂಲಕ ಮಾದರಿಯಾಗಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ತಾಲೂಕು ಕಚೇರಿ ಆವರಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕರೆದಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು. ಎಲ್. ರಾಮಕೃಷ್ಣ ಮಾತನಾಡಿ, ಶಾಲೆಗಳಲ್ಲಿ ಕನಕದಾಸರ ಪ್ರವಚನ, ಚರ್ಚೆ ನಡೆಯುವಂತೆ ಕ್ಷೇತ್ರಶಿಕ್ಷಣಾಧಿಕಾರಿಗೆ ಉಸ್ತುವಾರಿ ವಹಿಸಬೇಕೆಂದು ಸೂಚಿಸಿದರು. ತಹಸೀಲ್ದಾರ್ ಉಷಾ, ಚಂದ್ರಶೇಖರಗೌಡ, ಅಪ್ಪಾಜಿಗೌಡ, ಅಶ್ವಥ್, ಪಲ್ಲವಿಮಣಿ, ಯುವರಾಜ್ ಇದ್ದರು.
ಸಭೆಗೆ ಸಾವಿರಾರು ಕಾರ್ಯಕರ್ತರು
ಚಿಂತಾಮಣಿ: ನರೇಂದ್ರಮೋದಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬಿಜೆಪಿ ಜಿಲ್ಲಾ ಯುವಮೋರ್ಚಾ ಪದಾಧಿಕಾರಿಗಳು ತಿಳಿಸಿದರು. ಬಿಜೆಪಿ ಯುವಮೋರ್ಚ ಪದಾಧಿಕಾರಿಗಳಾದ ಪ್ರದೀಪ್, ಕುರುಟಹಳ್ಳಿ ಮಂಜುನಾಥ್, ಉಮೇಶ್ ಹಾಗೂ ಮಿಟ್ಟಹಳ್ಳಿ ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 17 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಆಗಮಿಸುತ್ತಿರುವ ಹನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯಲ್ಲಿ 10 ಸಾವಿರ ಪ್ರವೇಶ ಟಿಕೆಟ್ ಮಾರಾಟವಾಗಿವೆ. ತಾಲೂಕಿನಿಂದ ಬೆಂಗಳೂರಿಗೆ ಹೊರಡಲು 15 ಬಸ್ಸುಗಳು ತೆರಳುತ್ತಿರುವುದಾಗಿ ಹೇಳಿದರು.
ಕರಾಟೆಯಲ್ಲಿ ಬಹುಮಾನ
ಶಿಡ್ಲಘಟ್ಟ: ಇತ್ತೀಚೆಗೆ ಮುಂಬೈ ನಗರದಲ್ಲಿ ನಡೆದ ಅಕ್ಷಯ ಕುಮಾರ್ ಇಂಟರ್ನ್ಯಾಷನಲ್ ಕುಡೋ ಕರಾಟೆ ಚಾಂಪಿಯನ್ ಶಿಫ್ಗೆ ಶಿಡ್ಲಘಟ್ಟ ದಿವ್ಯ ಭಾರತ ಕರಾಟೆ ಡೋ ಅಸೋಷಿಯನ್ ಆಯ್ಕೆಯಾಗಿತ್ತು. ದಿವ್ಯ ಭಾರತ ಕರಾಟೆ ಡೋ ಅಸೋಷಿಯನ್ನಿಂದ ಆಯ್ಕೆಯಾದ 6 ಕರಾಟೆ ಪಟುಗಳು ಮುಂಬೈನಗರದಲ್ಲಿ ನಡೆದ ಅಕ್ಷಯ ಕುಮಾರ್ ಇಂಟರ್ನ್ಯಾಷನಲ್ ಕುಡೋ ಕರಾಟೆ ಚಾಂಪಿಯನ್ ಶಿಫ್ನಲ್ಲಿ ಭಾಗವಹಿಸಿ ವಿಜೇತರಾದರು. 9 ವರ್ಷ ಮೇಲ್ಪಟ್ಟ ಹುಡುಗರ ಕಟ ಪೂಲ್ ಕ್ರೀಡೆಯಲ್ಲಿ ಜಯಸಿಂಹ (ಎ) ಪ್ರಥಮಸ್ಥಾನ, ಜಗದೀಶ್ (ಎಫ್) ದ್ವಿತೀಯ ಹಾಗೂ 11 ವರ್ಷ ಮೇಲ್ಪಟ್ಟ ಹುಡುಗರ ಕಮಿತೆ ಕ್ರೀಡೆಯಲ್ಲಿ ಹರ್ಷ ತೃತೀಯ ಸ್ಥಾನ ಪಡೆದರೆ ಟಿ.ಎನ್. ಹೇಮಂತ್, ಚನ್ನಕೇಶವ ಮತ್ತು ಪುನೀತ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಶಿಡ್ಲಘಟ್ಟ ದಿವ್ಯ ಭಾರತ ಕರಾಟೆ ಡೋ ಅಸೋಷಿಯನ್ ಕರಾಟೆ ಮಾಸ್ಟರ್ ಅರುಣಕುಮಾರ್ ಮುಂಬೈ ನಗರದಲ್ಲಿ ನಡೆದ ಅಕ್ಷಯ ಕುಮಾರ್ ಇಂಟರ್ನ್ಯಾಷನಲ್ ಕುಡೋ ಕರಾಟೆ ಚಾಂಪಿಯನ್ಶಿಫ್ನಲ್ಲಿ ಸ್ಫರ್ಧಿಸುವ ಯೋಗ ದೊರೆತಿದೆ.
ಎನ್ಟಿಎಸ್ಸಿ ಪರೀಕ್ಷೆಗಳು ಇಂದು
ಕೋಲಾರ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆಗಳು ನ.17ರ ಭಾನುವಾರ ಬೆಳಗ್ಗೆ 9.30ಕ್ಕೆ ನಡೆಯಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಗದೀಶ್ ತಿಳಿಸಿದ್ದಾರೆ. ವಿದ್ಯಾರ್ಥಿವೇತನ ಪರೀಕ್ಷೆಗಳು (ಎನ್ಟಿಎಸ್ಸಿ) ನಗರದ ಸರ್ಕಾರಿ ನೂತನ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದೆ. ಹಾಗೆಯೇ ರಾಷ್ಟ್ರೀಯ ಪ್ರತಿಭಾನ್ವೇಷಣೆ (ಎನ್ಎಂಎಂಎಸ್) ಪರೀಕ್ಷೆಗಳು ನಗರದ ಸರ್ಕಾರಿ ಬಾಲಕರ, ಬಾಲಕಿಯರ ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಪರೀಕ್ಷೆ 10 ಗಂಟೆಗೆ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಬೆಳಗ್ಗೆ 9.30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಲು ಪರೀಕ್ಷಾ ನೋಡೆಲ್ ಅಧಿಕಾರಿ ತಿಳಿಸಿದ್ದಾರೆ.