ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿದ್ಯಾರ್ಥಿನಿ ನೇತ್ರಾ ಸಾವು; ಆರೋಪಿ ಸೆರೆ

Srinivasa Murthy VN
Updated On : 17 Nov 2013, 12:13 pm

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಗೌರಿಬಿದನೂರು ಕಾಲೇಜಿನ ವಿದ್ಯಾರ್ಥಿನಿ ನೇತ್ರಾಳ ಸಾವಿಗೆ ಕಾರಣನಾದ ಆರೋಪದ ಮೇಲೆ ಆಕೆಯ ಪಕ್ಕದ ಮನೆಯ ಹುಡುಗನನ್ನು (ಪ್ರಿಯಕರ) ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ನೇತ್ರಾ ನಾಪತ್ತೆಯಾದಾಗಿನಿಂದ ನಾಟಕವಾಡಿಕೊಂಡು, ಇಲ್ಲಿನ ವೀರದಿಮ್ಮಮ್ಮನ ಕಣಿವೆ ಬಳಿ ನೇತ್ರಾಳ ಶವ ಪತ್ತೆಯಾಗಿದೆ ಎಂದು ಯಾರೋ ನನಗೆ ದೂರವಾಣಿ ಕರೆ ಮಾಡಿ ತಿಳಿಸಿದರು ಎಂಬ ಮಾಹಿತಿ ನೀಡಿದ್ದ ರಘನಾಥನೇ ಇಲ್ಲಿ ಆರೋಪಿಯಾಗಿರುವುದು ವಿಶೇಷ. ಇದೇ ಸಂದರ್ಭದಲ್ಲಿ ನೇತ್ರಾ ಮತ್ತು ರಘುನಾಥ ಪರಸ್ಪರ ಪ್ರೀತಿಸುತ್ತಿದ್ದರು ಎನ್ನುವುದು ಬಹಿರಂಗವಾಗಿದೆ.
ನಾಟಕವಾಡಿದ ಆರೋಪಿ: ಗೌರಿಬಿದನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೇತ್ರಾ (17) ಅ.22 ರಂದು ವಿಶೇಷ ತರಗತಿ ಎಂದು ಹೋಗಿ ನಂತರ ನಾಪತ್ತೆಯಾಗಿದ್ದಳು. ಮನೆಯವರು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಈ ನಡುವೆ ಚಿಕ್ಕಬಳ್ಳಾಪುರದ ಕಾಯಿನ್ ಬಾಕ್ಸ್‌ನಿಂದ ಅನಾಮಧೇಯ ವ್ಯಕ್ತಿಯ ರೀತಿಯಲ್ಲಿ ರಘುನಾಥ್ ನೇತ್ರಾಳ ನಾಪತ್ತೆ ಬಗ್ಗೆ ಆಕೆಯ ಪೋಷಕರೊಂದಿಗೆ ವಿಚಾರಿಸಿದ್ದ. ಅಲ್ಲದೇ ನೇತ್ರಾಳ ತಂದೆ ತಾಯಿ ಮತ್ತು ಆಕೆಯ ನೆಂಟರ ಜತೆಗೆ ನೇತ್ರಾಳನ್ನು ಹುಡುಕುವ ನಾಟಕವನ್ನಾಡಿದ್ದು, ನ.1 ರಂದು ವೀರದಿಮ್ಮಮ್ಮನ ಕಣಿವೆಯಲ್ಲಿ ಅತ್ಮಹತ್ಯೆ ಮಾಡಿಕೊಂಡಿರುವ ನೇತ್ರಾಳ ಶವ ಸಿಕ್ಕಿದೆ ಎಂದು ನನಗೆ ದೂರವಾಣಿ ಕರೆ ಬಂದಿರುವುದಾಗಿ ಆರೋಪಿ ರಘುನಾಥ್ ಹೇಳಿದ್ದ.
ಪ್ರತಿಭಟನೆಗಳು: ಅದೇ ರೀತಿ ಆಕೆಯ ತಂದೆ, ಅಣ್ಣನ ಜತೆ ವೀರದಿಮ್ಮಮ್ಮನ ಕಣಿವೆಗೆ ಬಂದು ಶವದ ಹುಡುಕಾಟ ನಡೆಸಿದ್ದ. ತಮ್ಮ ಮಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ನೇತ್ರಾಳ ತಂದೆ ನಾರಾಯಣಪ್ಪ ದಿಕ್ಕು ತೋಚದೇ ನಮ್ಮ ಮಗಳು ಹೊಟ್ಟೆನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಇಲ್ಲಿಗೆ ಮುಗಿಯಿತು ಎಂಬ ಭಾವನೆಯಲ್ಲಿ ಸುಮ್ಮನಾಗಿದ್ದ. ಆದರೆ, ಎಬಿವಿಪಿ, ಎಸ್‌ಎಫ್‌ಐ, ಡಿವೈಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದ್ದರು. ಇದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿ ರಘುನಾಥನನ್ನು ಬಂಧಿಸಿದ್ದಾರೆ.
ಸಾವಿನಲ್ಲಿ ಕೈ ಬಿಟ್ಟ; ಆರೋಪಿ ರಘುನಾಥ್ ಮತ್ತು ನೇತ್ರಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಇವರಿಬ್ಬರ ಜಾತಿ ಬೇರೆಯಾದ ಹಿನ್ನೆಲೆಯಲ್ಲಿ ಪೋಷಕರು ಒಪ್ಪುವುದಿಲ್ಲ ಇಬ್ಬರೂ ಸಾಯುವುದೇ ಮೇಲು ಎಂದು ನೇತ್ರಾಳ ತಲೆ ಕೆಡಿಸಿದ ಆರೋಪಿ ಅ.22 ರಂದು ವಿಶೇಷ ತರಗತಿಗೆ ಹೋಗಿ ಬಂದ ಮೃತಳನ್ನು ತಾಲೂಕಿನ ವೀರದಿಮ್ಮಮ್ಮನ ಕಣಿವೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಇದಕ್ಕಾಗಿ ಎರಡು ವಿಷದ ಬಾಟಲಿಗಳನ್ನು ತೆಗೆದುಕೊಂಡು ಬರಲಾಗಿತ್ತು. ಮೊದಲು ನೇತ್ರಾಳಿಗೆ ವಿಷ ಕುಡಿಯುವಂತೆ ಪುಸಲಾಯಿಸಿದ್ದು ವಿಷ ಸೇವಿಸುತ್ತಿದ್ದಂತೆ ನೇತ್ರಾ ಅಲ್ಲಿಯೇ ಸಾವನ್ನಪ್ಪಿದ್ದರೆ, ಆರೋಪಿ ಗೊಂದಲಕ್ಕೆ ಸಿಲುಕಿ ನ.1 ರಂದು ತನಗೆ ನೇತ್ರಾಳ ಶವ ಪತ್ತೆಯಾಗಿರುವ ಯಾರೋ ತಿಳಿಸಿದರು ಎಂಬ ಮಾಹಿತಿ ತಿಳಿಸಿ ಅನುಮಾನಾಸ್ಪದವಾಗಿ ನಡೆದುಕೊಂಡು ಆರೋಪಿ ಸಿಕ್ಕಿ ಬಿದ್ದಿದ್ದಾನೆ.
ವಿಷದ ಬಾಟಲ್‌ನಿಂದ ಅನುಮಾನ: ನೇತ್ರಾ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿದ್ದರೆ ಗೌರಿಬಿದನೂರಿನಲ್ಲಿ ಸಾಯಬೇಕಾಗಿತ್ತಾದರೂ ಸಹ ಚಿಕ್ಕಬಳ್ಳಾಪುರಕ್ಕೆ ಏಕೆ ಹೋದಳು ಎಂಬ ಅನುಮಾನದ ಜತೆಗೆ ಆಕೆಯ ಶವದ ಬಳಿ ಎರಡು ವಿಷದ ಬಾಟಲಿಗಳು ಪತ್ತೆಯಾಗಿದ್ದು ಗೊಂದಲ ಮೂಡಿಸಿತ್ತು. ಆಕೆ ಒಂದು ಬಾಟಲಿ ಬದಲಿಗೆ ಎರಡು ಬಾಟಲಿ ವಿಷ ತೆಗೆದುಕೊಂಡು ಹೋಗಬೇಕಾದ ಅವಶ್ಯಕತೆಯಿಲ್ಲ ಎನ್ನುವುದೇ ನೇತ್ರಾಳ ಸಾವಿನ ಹಿಂದಿನ ರಹಸ್ಯವನ್ನು ತಿಳಿಯುವಂತಾಗಲು ಕ್ಲೂ ಕೊಟ್ಟಿತ್ತು. ವಿಷದ ಬಾಟಲಿ ವಶಕ್ಕೆ ತೆಗೆದುಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಲ್ಲದೇ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ರಘನಾಥ್ ಮೊಬೈಲ್ ಸ್ವೀಕೃತ ಮತ್ತು ಹೊರ ಹೋಗುವ ಕರೆಗಳ ಪಟ್ಟಿಯನ್ನು ತೆಗೆದುಕೊಂಡು ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ನಂದಿ ಬೆಟ್ಟಕ್ಕೆ: ಅ.22 ರಂದು ವಿಶೇಷ ತರಗತಿ ಮುಗಿಯುತ್ತಿದ್ದಂತೆ ಆರೋಪಿ ರಘುನಾಥನಿಗೆ ಕಾಯಿನ್ ಬಾಕ್ಸಿನಿಂದ ಕರೆ ಮಾಡಿ ಕರೆಸಿಕೊಂಡ ನೇತ್ರಾ ಚಿಕ್ಕಬಳ್ಳಾಪುರಕ್ಕೆ ರಘುನಾಥನ ಜತೆ ಬಂದಿದ್ದು, ಇಬ್ಬರು ನಂದಿ ಬೆಟ್ಟಕ್ಕೆ ಹೋಗಿ ಸಾಯಲು ನಿರ್ಧರಿಸಿದ್ದರು ಎನ್ನಲಾಗಿದೆ. ಆದರೆ, ಟಿಪ್ಪು ಡ್ರಾಪಿನಿಂದ ಕೆಳಗೆ ಬಿದ್ದರೂ ಸಾಯದೇ ಇರಬಹುದು ಎಂದು ವೀರದಿಮ್ಮಮ್ಮನ ಕಣಿವೆಗೆ ಇಬ್ಬರು ಹೋಗಿದ್ದು ನೇತ್ರಾಳೇ ವಿಷದ ಬಾಟಲಿಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಬಂದಿದ್ದಳು. ಮೊದಲು ಧೈರ್ಯ ಮಾಡಿ ವಿಷ ಕುಡಿದಿದ್ದು ಈ ಮಧ್ಯೆ ರಘುನಾಥ ಸಮಾಧಾನಪಡಿಸಿ ವಾಪಸ್ ಕರೆದುಕೊಂಡು ಹೋಗಲು ಯತ್ನಿಸಿದ್ದಾನೆ. ಕೊನೆಗೆ ತಾನು ಸಾಯುವ ವಿಚಾರದಲ್ಲಿ ಗಟ್ಟಿ ನಿರ್ಧಾರ ಮಾಡಲು ಒದ್ದಾಡಿದ್ದು ಕೊನೆಗೆ ಭಯಗೊಂಡು ಆಕೆಯನ್ನು ಬಿಟ್ಟು ಬಂದಾತ ನಾನು ಸತ್ತು ಹೋದರೆ ಇಲ್ಲವೇ ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ಬೆಂಗಳೂರಿನಲ್ಲಿ ಮುಂದೆ ನಡೆಯಲಿರುವ ತನ್ನ ಅಣ್ಣನ ಮದುವೆ ನಿಂತು ಹೋಗುತ್ತದೆ ಎಂಬ ಭಾವನೆಯಲ್ಲಿ ಸತ್ತು ಹೋದ ಆಕೆಯನ್ನು ಬಿಟ್ಟು ಬಂದನೆನ್ನಲಾಗಿದೆ.

ಪ್ರಿಯಕರ ಬಂಧನ
ಗೌರಿಬಿದನೂರು: ಪಟ್ಟಣದಲ್ಲಿ ಇತ್ತೀಚೆಗೆ ನಿಗೂಢವಾಗಿ ಕೊಲೆಯಾಗಿದ್ದ ವಿದ್ಯಾರ್ಥಿನಿ ನೇತ್ರಾವತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪ್ರಿಯಕರ ಎನ್ನಲಾದ ರಘುನಾಥನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಡಿವೈಎಸ್‌ಪಿ ದೇವಯ್ಯ ಅವರ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಎಬಿವಿಪಿ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೆ ಸಿಕ್ಕ ಜಯವಾಗಿದೆ.

ನೇತ್ರಾ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮೃತಳ ನೆರೆಮನೆಯ ಆರೋಪಿ ರಘುನಾಥನನ್ನು ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತನಿಖೆ ಕೈಗೊಳ್ಳಲಾಗುತ್ತಿದೆ.
-ಎನ್. ಶಿವಪ್ರಸಾದ್, ಜಿಲ್ಲಾ ರಕ್ಷಣಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement