ಶೇ.22.75 ಅನುದಾನ ಖರ್ಚು ಮಾಡದಿದ್ದರೆ ಜೈಲು
ಕೋಲಾರ, ನ.16
ಜಿಲ್ಲೆಯ ಎರಡು ನಗರಸಭೆ ಮತ್ತು ನಾಲ್ಕು ಪುರಸಭೆಗಳಲ್ಲಿ ಉಳಿಕೆಯಾಗಿರುವ ಶೇ.22.75ರ ಅನುದಾನ ಡಿಸೆಂಬರ್ ಅಂತ್ಯದೊಳಗೆ ಬಳಕೆ ಮಾಡದಿದ್ದರೆ ಅಟ್ರಾಸಿಟಿ ಪ್ರಕರಣ ದಾಖಲು ಮಾಡಿ ಜೈಲಿಗೆ ಕಳುಹಿಸುತ್ತೇನೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಶನಿವಾರ ಅವರು ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಲಾರ, ಕೆಜಿಎಫ್ ನಗರಸಭೆ ಹಾಗೂ ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಪುರಸಭೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟು ರು. 503.64 ಲಕ್ಷ ಶೇ.22.75 ಅನುದಾನ ನೀಡಿದ್ದು, ಈ ಪೈಕಿ ಕೇವಲ ರು. 111.97 ಲಕ್ಷ ಖರ್ಚು ಮಾಡಿ ರು. 391.67 ಲಕ್ಷ ಉಳಿಸಿಕೊಂಡಿದ್ದು ಈ ಅನುದಾನ ಡಿಸೆಂಬರ್ ಅಂತ್ಯದೊಳಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿವಿಧ ಬಾಬ್ತುಗಳಿಗೆ ಖರ್ಚು ಮಾಡಿ 2014ರ ಜನವರಿ 15 ರೊಳಗೆ ವರದಿ ನೀಡದಿದ್ದರೆ ಕ್ರಮ ಕೈಗೊಳ್ಳುವುದು ಖಚಿತವೆಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪ.ಪಂಗಡಕ್ಕೆ ಮೀಸಲಾಗಿರುವ ಶೇ.22.75ರ ಅನುದಾನವನ್ನು ಸಕಾಲಕ್ಕೆ ಖರ್ಚು ಮಾಡದಿರುವುದು ಅಧಿಕಾರಗಳ ಲೋಪ ಮತ್ತು ಕರ್ತವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಎಸ್.ಸಿ. ಅನುದಾನ ಬಳಕೆ ಮಾಡದಿರುವುದರಿಂದ ಅಧಿಕಾರಿಗಳ ಮೇಲೆ ಆಟ್ರಾಸಿಟಿ ಕೇಸು ದಾಖಲಿಸಿ ಜೈಲಿಗೆ ಕಳುಹಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪ.ಪಂಗಡದವರು ಯಾರಾದರೂ ನಗರಸಭೆ ಮತ್ತು ಪುರಸಭೆಗಳಿಗೆ ಕಂದಾಯ ಬಾಕಿ ಉಳಿಸಿಕೊಂಡಿದಲ್ಲಿ ಶೇ.22.75ರ ಅನುದಾನದಲ್ಲಿ ಬಾಕಿ ಮನ್ನಾ ಮಾಡಿ ಲೆಕ್ಕವನ್ನು ಇತ್ಯರ್ಥಗೊಳಿಸಿ. ಹಾಗೆಯೇ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಹಾಕಿಕೊಂಡಿದಲ್ಲಿ ಇದೇ ಹಣದಲ್ಲಿ ವಿದ್ಯುತ್ ಸಂಕರ್ಪ ಕಲ್ಪಿಸಿಕೊಡಿ, ನೀರು, ಶೌಚಾಲಯ, ಒಳ ಚರಂಡಿ, ಅಡುಗೆ ಅನಿಲ ಸೌಲಭ್ಯಕ್ಕೂ ಹಣ ಬಳಕೆ ಮಾಡಬಹುದು ಜೊತೆಗೆ ಆರೋಗ್ಯ ಸೇವೆಯಡಿ ಶಸ್ತ್ರ ಚಿಕಿತ್ಸೆಗೆ ಒಳಪಡುವವರಿಗೂ ಹಣ ಬಿಡುಗಡೆ ಮಾಡಿ ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಶೇ.22.75 ಅನುದಾನ ಸರಿಯಾಗಿ ಬಳಕೆ ಮಾಡುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅನುದಾನ ಖಾಲಿ ಮಾಡಬೇಕು. ತಾವು ನೀಡಿರುವ ಸೂಚನೆ ಉಲ್ಲಂಘಿಸಿದರೆ ಅಟ್ರಾಸಿಟಿ ಕೇಸು ಬುಕ್ ಮಾಡುತ್ತೇನೆ. ಏನೇ ಕೆಲಸದ ಒತ್ತಡಗಳು ಇದ್ದರೂ ಡಿಸೆಂಬರ್ ಅಂತ್ಯಕ್ಕೆ ಉದ್ದೇಶಿತ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ ಜನವರಿ 15ರೊಳಗೆ ವರದಿ ನೀಡದಿದ್ದರೆ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
2014 ಜನವರಿ 27 ರಂದು ಅಟ್ರಾಸಿಟಿ ಸಭೆ ಇರುವುದರಿಂದ ಅಲ್ಲಿ ತಾವು ಮಾಹಿತಿ ನೀಡಬೇಕಾಗುತ್ತದೆ. ಅಧಿಕಾರಿಗಳು ಯಾವುದೇ ಕುಂಟು ನೆಪ ಹೇಳದೆ ನಗರಸಭೆ ಮತ್ತು ಪುರಸಭೆಗಳಲ್ಲಿ ಲಭ್ಯವಿರುವ ಶೇ.22.75 ಅನುದಾನವನ್ನು ವಿಲೇವಾರಿ ಮಾಡಲು ಸೂಕ್ರ ಕ್ರಮ ಕೈಗೊಳ್ಳಬೇಕೆಂದರು.
ಕೋಲಾರ ನಗರಸಭೆಗೆ ಶೇ.22.75ರ ಅನುದಾನದಲ್ಲಿ ರು. 54.69 ಲಕ್ಷ ನೀಡಲಾಗಿದ್ದು ಕೇವಲ ರು. 0.48 ಲಕ್ಷ ಮಾತ್ರ ಖರ್ಚು ಆಗಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೆಜಿಎಫ್ ನಗರಸಭೆಗೆ ನೀಡಿರುವ ರು. 83.85 ಲಕ್ಷದಲ್ಲಿ ರು. 35.80 ಲಕ್ಷ, ಬಂಗಾರಪೇಟೆ ಪುರಸಭೆಗೆ ರು. 44.91 ಲಕ್ಷದಲ್ಲಿ ರು. 29.08, ಮಾಲೂರಿಗೆ ರು. 15.02 ಲಕ್ಷದಲ್ಲಿ ರು. 8 ಲಕ್ಷ, ಮುಳಬಾಗಿಲು ಪುರಸಭೆಗೆ ರು. 136.24 ಲಕ್ಷದಲ್ಲಿ ರು. 36.11 ಲಕ್ಷ ಹಾಗೂ ಶ್ರೀನಿವಾಸಪುರ ಪುರಸಭೆಗೆ ರು. 56.96 ಲಕ್ಷ ನೀಡಿದ್ದು ಕೇವಲ ರು. 1.50 ಲಕ್ಷ ಮಾತ್ರ ಖರ್ಚು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಹಾಸ್ಟೆಲ್, ಶಾಲಾ-ಕಾಲೇಜಿಗೆ ನೀರು ಕೊಡಿ: ಕೋಲಾರ ನಗರದಲ್ಲಿ ಎಲ್ಲಾ ಹಾಸ್ಟೆಲ್ಗಳಿಗೆ ನೀರಿನ ಸಮಸ್ಯೆ ಮಾಡಿ, ಅದೇ ರೀತಿ ಶಾಲಾ-ಕಾಲೇಜುಗಳಿಗೂ ನೀರಿನ ಸರಬರಾಜು ಮಾಡಬೇಕು, ಕೋಲಾರ ಸರ್ಕಾರಿ ಬಾಲಕ-ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಂಪು ನಿರ್ಮಿಸಿ ಪ್ರತಿ ದಿನ ಕನಿಷ್ಠ 5 ಸಾವಿರ ಲೀಟರ್ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಿ ಮಕ್ಕಳಿಗೆ ಮತ್ತು ಭೋದಕ-ಭೋದಕೇತರ ಸಿಬ್ಬಂದಿಗೆ ಅನುಕೂಲ ಮಾಡಿಕೊಡುವಂತೆ ಆದೇಶಿಸಿದರು.
ಆಶ್ರಯ ಮನೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿರುವ ನಗರಸಭೆ ಮತ್ತು ಪುರಸಭೆ ಅಧಿಕಾರಿಗಳು ಸಂಬಂಧಪಟ್ಟ ಶಾಸಕರಿಂದ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಪಡೆದು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕು. ಮೂರು ತಿಂಗಳಾದರೂ ಪಟ್ಟಿಗೆ ಶಾಸಕರಿಂದ ಅನುಮೋದನೆ ಪಡೆಯದಿರುವುದು ಸರಿಯಲ್ಲ. ಅಧಿಕಾರಿಗಳು ಕೂಡಲೇ ಶಾಸಕರ ಬಳಿ ಹೋಗಿ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡದಿದ್ದಲ್ಲಿ ಆಶ್ರಯ ಮನೆಗಳಿಗೆ ಬಿಡುಗಡೆ ಆಗಿರುವ ಅನುದಾನ ಸರ್ಕಾರಕ್ಕೆ ವಾಪಸ್ ಹೋಗುತ್ತದೆ ಎಂದು ಮನವರಿಕೆ ಮಾಡಿಕೊಡಿ, ಒಂದು ವೇಳೆ ಶಾಸಕರಿಂದ ಅನುಮೋದನೆ ಪಡೆಯಲಾಗದಿದ್ದರೆ ನನ್ನಿಂದ ಪಟ್ಟಿಗೆ ಅನುಮೋದನೆ ಪಡೆದು ಕೂಡಲೇ ಬಡವರಿಗೆ ನಿವೇಶನಗಳನ್ನು ವಿತರಣೆ ಮಾಡುವಂತೆ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಕೋಲಾರ ನಗರಸಭೆ ಆಯುಕ್ತ ಜಗದೀಶ್, ಕೆಜಿಎಫ್ ಬಾಲಚಂದ್ರ, ಬಂಗಾರಪೇಟೆ ಪುರಸಭೆಯ ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್, ಮಾಲೂರಿನ ರೇಣುಕಾ, ಮುಳಬಾಗಲಿನ ಅಶೋಕ್ ಕುಮಾರ್, ಶ್ರೀನಿವಾಸಪುರ ಪುರಸಭೆಯ ಮುಖ್ಯಾಧಿಕಾರಿ ರೇಣುಕಾ ಹಾಗೂ ಕೋಲಾರ ಜಿಲ್ಲಾ ಯೋಜನಾ ಕೋಶದ ನಿರ್ದೇಶಕಿ ಮರ್ಚೆಂಟ್ ಸರ್ವರ್ ಇದ್ದರು.
ತ್ಯಾಜ್ಯ ವಿಲೇವಾರಿಗೆ ಜಾಗ
ಘನತ್ಯಾಜ್ಯ ವಿಲೇವಾರಿಗೆ ಕಾಂಗ್ರೆಸ್ ಮುಖಂಡ ಹೊಳಲಿ ಪ್ರಕಾಶ್ ಸೂಕ್ತವಾಗ ಜಾಗ ಹುಡುಕಿಕೊಡುವುದಾಗಿ ತಿಳಿಸಿದ್ದು ಅವರೊಂದಿಗೆ ಈ ತಿಂಗಳ 20ರೊಳಗೆ ಚರ್ಚೆ ನಡೆಸಿ ಜಾಗ ಎಲ್ಲಿದೆ, ಅದರ ಬೆಲೆ ಏನು ಎಂಬುದನ್ನು ತಿಳಿದುಕೊಂಡು ಪ್ರಸ್ತಾಪನೆ ಕಳುಹಿಸಿಕೊಟ್ಟಲ್ಲಿ ಸರ್ಕಾರಕ್ಕೆ ಕಳುಹಿಸಿ ಭೂಮಿಗೆ ಹಣ ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಾಗ ಸಿಕ್ಕಲ್ಲಿ ಗಟ್ಟಿಕಸದಿಂದ ವಿದ್ಯುತ್ ಇಲ್ಲವೇ ಗ್ಯಾಸ್ ತಯಾರಿಕೆ ಮಾಡಿ ಮಾರಾಟ ಮಾಡಬಹುದಾಗಿದೆ. ಭೂಮಿ ನೀಡಲು ಮುಂದೆ ಬರುವವರಿಂದ ಸರಿಯಾದ ರೀತಿಯಲ್ಲಿ ಕ್ರಯಪತ್ರ ಬರೆಸಿಕೊಂಡು ಯೋಜನೆ ಜಾರಿಗೆ ತಂದಲ್ಲಿ ಊರಿನ ಸಮಸ್ಯೆ ಸಾಕಷ್ಟು ನಿವಾರಣೆ ಆಗುತ್ತದೆ ಎಂದರು.
ಕೋಲಾರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಒಳಚರಂಡಿ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ಕೋಲಾರದಲ್ಲಿ ಪ್ರತಿನಿತ್ಯ ಜನತೆ ದೂರು ನೀಡುತ್ತಿದ್ದಾರೆ, ಕೂಡಲೇ ಸಮಸ್ಯೆ ನಿವಾರಣೆ ಮಾಡಿ, ನಗರಸಭೆಯವರಿಂದ ಒಳಚರಂಡಿ ನಿರ್ವಹಣೆ ಮಾಡಲು ಸಿಬ್ಬಂದಿ ಕೊರತೆ ಇರುವುದರಿಂದ ತಮಗೆ ಕಡೆಯಿಂದ ನಿರ್ವಹಣೆ ಮಾಡಿಸಿ ಶುಲ್ಕ ಪಡೆಯಿರಿ ಎಂದು ಸಲಹೆ ನೀಡಿದರು.