ಕೋಲಾರ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ನಿಧನ
ಕೋಲಾರ: ಕಳೆದ ಎರಡು ತಿಂಗಳ ಹಿಂದೆ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಕುಮಾರ್(49) ಅಕಾಲಿಕ ಸಾವನ್ನಪ್ಪಿದ್ದಾರೆ.
ದಕ್ಷತೆಯಿಂದ ಕೆಲಸ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ವಿಜಯಕುಮಾರ್ ಸೋಮವಾರ ಬೆಳಿಗ್ಗೆ 7.30ರ ಸಮಯದಲ್ಲಿ ವಿಪರೀತ ಜ್ವರದಿಂದ ಬಳಲಿ ಕುಸಿದು ಬಿದ್ದ ಪ್ರಜ್ಞೆ ತಪ್ಪಿದ್ದರು. ಅಪರ ಜಿಲ್ಲಾಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದಾಗ, ರೋಗಿಯ ಪರಿಸ್ಥಿತಿ ಚಿಂತಾಜನಿಕವಾಗಿರುವುದನ್ನು ಗಮನಿಸಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ವಿಜಯಕುಮಾರ್ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರಾದರೂ ಮಧ್ಯಾಹ್ನ 3.30ರ ವೇಳೆಗೆ ಮೃತಪಟ್ಟಿದ್ದಾರೆ. ಅವರಿಗೆ ಜ್ವರದ ಜೊತೆಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಪ್ರಜ್ಞೆ ತಪ್ಪಿತ್ತು. ಇದರಿಂದಾಗಿ ಜೀವ ಉಳಿಸಲು ಸಾಧ್ಯವಾಗಿಲ್ಲವೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕಳೆದ ಆರು ತಿಂಗಳಲ್ಲಿ ಆರು ಮಂದಿ ಹೆಚ್ಚುವರಿ ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಸಿಬ್ಬಂದಿಯ ಕೊರೆತೆಯಿಂದಾಗಿ ಅಧಿಕಾರಿಗಳಿಗೆ ಕೆಲಸ ಭಾರ ಹೆಚ್ಚಿತ್ತು ಎನ್ನಲಾಗಿದೆ. ತಮ್ಮ ಕೆಲಸಗಳಲ್ಲಿ ಸಹಾಯ ಮಾಡುವ ಮೂಲಕ ಜಿಲ್ಲಾ ಆಡಳಿತಕ್ಕೆ ಸ್ಪಂದಿಸುತ್ತಿದ್ದ ವಿಜಯಕುಮಾರ್ ನಿಧನದಿಂದ ವೈಯುಕ್ತಿವಾಗಿ ನಷ್ಟ ಉಂಟಾಗಿದೆ. ದಕ್ಷ ಸಹೊದ್ಯೋಗಿಯೊಬ್ಬರನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಜಯಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದಾರೆಂದು ಗೊತ್ತಾದ ತಕ್ಷಣ ಆಸ್ಪತ್ರೆಗೆ ಸೇರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿ ತಕ್ಷಣ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಬಳಿ ರೋಗಿಯ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ರೋಗಿಯ ಮನೆಯನ್ನು ಕರೆಸಿಕೊಂಡು ಸಮಾಧಾನ ಹೇಳಿದಲ್ಲದೆ, ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರೋಗಿಯನ್ನು ಸ್ಥಳಾಂತರ ಮಾಡುವವರೆಗೆ ಆಸ್ಪತ್ರೆಯಲ್ಲಿ ಇದ್ದು ಎಲ್ಲ ವ್ಯವಸ್ಥೆ ನೋಡಿಕೊಂಡರು.
'ಉಚಿತ ತರಬೇತಿಗಳನ್ನು ಉಪಯೋಗಿಸಿಕೊಳ್ಳಿ'
ಗೌರಿಬಿದನೂರು: ಸರ್ಕಾರದ ಉಚಿತ ತರಬೇತಿಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಜಿಲ್ಲಾ ನಗರಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ಶೆಟ್ಟಿ ಕರೆ ನೀಡಿದರು. ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಚಿಕ್ಕಬಳ್ಳಾಪುರ, ಪುರಸಭೆ ಗೌರಿಬಿದನೂರು ಹಾಗೂ ಅಭ್ಯುದಯ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸ್ವರ್ಣ ಜಯಂತಿ ಶಹರಿ ಯೋಜಗಾರ್ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ, ನಗರ ಸಭೆ ಹಾಗೂ ಪುರ ಸಭೆ ವ್ಯಾಪ್ತಿಯಲ್ಲಿ ವಾಸಿಸುವ ಬಡ ನಿರುದ್ಯೊಗಿ ಯುವಕ ಯುವತಿಯವರಿಗೆ ಉಚಿತವಾಗಿ ತರಬೇತಿ ನೀಡುವ ಕೌಶಲ್ಯ ವೃತ್ತಿಗಳಾದ ಟೈಲರಿಂಗ್, ಬ್ಯೂಟೀಷಿಯನ್ ಮತ್ತಿತರ ತರಬೇತಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಪ್ರಬಲರಾಗಿ ಎಂದರು. ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ ಮಂಜುನಾಥ್ ಮಾತನಾಡಿ, ಫಲಾನುಭವಿಗಳು ತರಬೇತಿಗೆ ನಿರ್ಧಿಷ್ಠ ವೇಳೆಗೆ ಹಾಜರಾಗಬೇಕೆಂದರು. ಆರೋಗ್ಯ ನಿರೀಕ್ಷಕ ಶಿವಣ್ಣ, ತಿಮ್ಮರಾಜು, ಸರಳ, ತ್ಯಾಗರಾಜು ಇದ್ದರು.