ನಗರ-ಪಟ್ಟಣ ಪ್ರದೇಶದವರಿಗೂ ಯಶಸ್ವಿನಿ ಭಾಗ್ಯ
ಕ.ಪ್ರ.ವಾರ್ತೆ ಕೋಲಾರ ನ.18
ಎಸ್.ಎಂ. ಕೃಷ್ಣರವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಯಶಸ್ವಿನಿ ರೈತ ಆರೋಗ್ಯ ಯೋಜನೆ ವಿಶ್ವ ಸಂಸ್ಥೆಯಿಂದ ಪ್ರಶಂಸೆಗೆ ಒಳಗಾಗಿದ್ದು ಈ ಯೋಜನೆಯನ್ನು ಬರುವ ವರ್ಷ ಜೂನ್ ಇಲ್ಲವೇ ಜುಲೈ ತಿಂಗಳಲ್ಲಿ ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶದ ಸಹಕಾರಿಗಳಿಗೂ ವಿಸ್ತರಣೆ ಮಾಡಲು ಸರ್ಕಾರ ಉದ್ದೇಶಿಸಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ತಿಳಿಸಿದರು.
ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಸೋಮವಾರ ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಯೂನಿಯನ್, ಕೋಚಿಮುಲ್, ರಾಜ್ಯ ಸಹಕಾರ ಮಹಾ ಮಂಡಳ, ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 60ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಲಕ್ಷಾಂತರ ರೈತರು ಯಶಸ್ವಿನಿ ಯೋಜನೆಯ ಮೂಲಕ ಪ್ರಯೋಜನ ಪಡೆದಿದ್ದಾರೆ, ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇತರೆ ವಲಯಗಳಿಗೂ ವಿಸ್ತರಣೆ ಮಾಡುವ ಸಲುವಾಗಿ ಮುಖ್ಯಮಂತ್ರಿಗಳು 2014ರ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಒದಗಿಸುವ ಬಗ್ಗೆ ಭರವಸೆ ನೀಡಿರುವುದರಿಂದ ನಗರ ಮತ್ತು ಪಟ್ಟಣ ಪ್ರದೇಶದ ಬಡವರಿಗೂ ಯಶಸ್ವಿನಿ ಭಾಗ್ಯ ದೊರೆಯಲಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡವರು ಸಹಕಾರಿ ಸಂಸ್ಥೆಗಳಲ್ಲಿ ಹೆಚ್ಚಿನ ಸದಸ್ಯತ್ವ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರವೇ ಷೇರು ಹಣವನ್ನು ಪಾವತಿಸಲು ಯೋಜನೆ ರೂಪಿಸಿದೆ. ಸದಸ್ಯರಾಗುವವರಿಗೆ ಯಶಸ್ವಿನಿ ಯೋಜನೆಯ ಲಾಭ ಪಡೆಯಲು ಅತ್ಯಂತ ಕಡಿಮೆ ಶುಲ್ಕವನ್ನು ಪಡೆಯಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಕೇವಲ 10 ರು. ಪಾವತಿಸಿದಲ್ಲಿ ಸರ್ಕಾರ ಉಳಿದ 200 ರು.ಗಳನ್ನು ನೀಡುತ್ತದೆ ಎಂದರು.
ರು. 1300 ಕೋಟಿ ಬಿಡುಗಡೆ: ಈ ಹಿಂದಿನ ಸರ್ಕಾರ ಸಹಕಾರ ಸಂಸ್ಥೆಗಳ ಮೂಲಕ ಸಣ್ಣ ರೈತರು ಪಡೆದ 25 ಸಾವಿರ ರು. ಸಾಲವನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡಿ ಕೇವಲ 4 ಲಕ್ಷ ರೈತರಿಗೆ 940 ಕೋಟಿ ರು. ಮೀಸಲಿಟ್ಟಿತ್ತು. ಈ ಹಣ ಸಕಾಲಕ್ಕೆ ಬಿಡುಗಡೆ ಆಗಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕೇವಲ 6 ತಿಂಗಳಲ್ಲಿ 6 ಲಕ್ಷ ರೈತರಿಗೆ ರು. 1,300 ಕೋಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು. ರೈತರ ಸಾಲ ಮನ್ನಾಕ್ಕೆ ಒಟ್ಟು ರು. 2, 400 ಕೋಟಿ ಅಗತ್ಯವಿದೆ. 15 ಲಕ್ಷ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ. ಡಿಸಿಸಿ ಬ್ಯಾಂಕುಗಳಿಂದ ಸರ್ಕಾರಕ್ಕೆ ಬರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಸಾಲ ಮನ್ನಾಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡುವುದರಿಂದ ರೈತರು ಚಿಂತನೆ ಪಡಬೇಕಾಗಿಲ್ಲವೆಂದರು.
ಸಹಕಾರ ಸಂಸ್ಥೆಗಳಿಂದ ಸಾಲ ಪಡೆದವರೇ ಮತ್ತೆ ಪಡೆಯುತ್ತಿರುವುದರಿಂದ ಹೊಸ ಅರ್ಜಿದಾರರಿಗೆ ಸಾಲ ಸಿಗುತ್ತಿಲ್ಲವೆಂಬ ದೂರುಗಳು ಕೇಳಿ ಬಂದಿರುವುದರಿಂದ ಹೊಸಬರಿಗೂ ಶೇ.25 ರಷ್ಟು ಸಾಲ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರಿಗೆ ಕೃಷಿ ಸಾಲ ಅಗತ್ಯವಾಗಿರುವುದರಿಂದ ಮೊದಲ ಆಧ್ಯತೆ ಕೃಷಿಗೆ ನೀಡಲಾಗುವುದು, ರೈತರು ತಾವು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ರೈತರೇ ಬೆಲೆ ನಿಗಧಿ ಪಡಿಸುವ ಅವಕಾಶಕ್ಕಾಗಿ ನಮ್ಮ ಸರ್ಕಾರ ಕೃಷಿ ಬೆಲೆ ಆಯೋಗವನ್ನು ಸಹ ರಚಿಸಲು ನಿರ್ಧರಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
3.50 ಲಕ್ಷ ಸದಸ್ಯತ್ವ ಗುರಿ: ನಾನು ಸಹಕಾರ ಕ್ಷೇತ್ರಕ್ಕೆ ಹೊಸಬ. ಆದರೆ ಮುಕ್ತವಾಗಿ ಕೆಲಸ ಮಾಡಲು ಬದ್ಧನಾಗಿದ್ದೇನೆ. ಉತ್ತಮ ಸಲಹೆಗಳು ಬಂದಲ್ಲಿ ಹಿರಿಯ ಸಹಕಾರಿಗಳೊಂದಿಗೆ ಚರ್ಚಿಸಿ ಅನುಷ್ಠಾನಕ್ಕೆ ತರುವೆ ಎಂದು ತಿಳಿಸಿದರು.
97ನೇ ಸಂವಿಧಾನ ತಿದ್ದುಪಡಿಯ ನಂತರ ಸಹಕಾರ ಸಂಸ್ಥೆಗಳಲ್ಲಿ ಬದಲಾವಣೆ ಕಾಣಲು ಸಾಧ್ಯವಾಗುತ್ತಿದೆ. ಚುನಾವಣೆಗಳನ್ನು ಸಹಕಾರ ಚುನಾವಣಾ ಆಯೋಗ ರಚನೆ ಮಾಡಿ ನಡೆಸಲಾಗುತ್ತಿದೆ. ಸೌಹಾರ್ದ ಸಹಕಾರ ಸಂಘಗಳಿಗೆ ಪ್ರಾತಿನಿಧ್ಯತೆ ನೀಡಲು ಸರ್ಕಾರ ಬದ್ಧವಾಗಿದ್ದು, ರಾಜ್ಯದಲ್ಲಿ ಕನಿಷ್ಠ 3.30 ಕೋಟಿ ಜನರು ಸಹಕಾರ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆಯುವಂತಹ ವಾತಾವರಣ ಸೃಷ್ಟಿಸುವುದು ಎಲ್ಲ ಸಹಕಾರಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ ವಹಿಸಿದ್ದರು.
ಶಾಸಕ ಕೆ.ಆರ್. ರಮೇಶ್ ಕುಮಾರ್, ಕೊತ್ತೂರು ಮಂಜುನಾಥ್, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ಬಿ.ಎಲ್. ಲಕ್ಕೇಗೌಡ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ಗುರುನಾಥ್, ಕೋಚಿಮುಲ್ ಅಧ್ಯಕ್ಷ ಕೆ. ಗುಡಿಯಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮಳ್ಳೂರು ಎಂ.ಆರ್. ಶಿವಣ್ಣ, ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಬ್ಯಾಲಹಳ್ಳಿಹಳ್ಳಿ ಎಂ. ಗೋವಿಂದಗೌಡ, ನಾಗನಾಳ ಸೋಮಣ್ಣ, ಉರಿಗಿಲಿ ರುದ್ರಸ್ವಾಮಿ, ಹೊಳಲಿ ಪ್ರಕಾಶ್, ಆಲಂಗೂರು ಶಿವಣ್ಣ ಸೇರಿದಂತೆ ಅನೇಕ ಹಿರಿಯ ಸಹಕಾರಿಗಳು ಇದ್ದರು.
ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ಅಗತ್ಯ
ಕ.ಪ್ರ.ವಾರ್ತೆ ಕೋಲಾರ ನ.18
ರಾಜ್ಯದ ಎಲ್ಲಾ ಸಹಕಾರ ಸೇವಾ ಬ್ಯಾಂಕುಗಳು ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ಕಲ್ಪಿಸಬೇಕು, ಈ ಸಂಬಂಧ ರಾಜ್ಯ ಸರ್ಕಾರ ನೀತಿಯನ್ನು ರೂಪಿಸಿ ಅದನ್ನು ಸಹಕಾರ ಸಂಸ್ಥೆಗಳು ಅನುಷ್ಠಾನಕ್ಕೆ ತರುವಂತೆ ನೋಡಿಕೊಳ್ಳಬೇಕೆಂದು ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್. ರಮೇಶ್ ಕುಮಾರ್ ಸಲಹೆ ನೀಡಿದರು.
ನಗರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆಯಲು ಕಷ್ಟವಾಗುತ್ತಿದೆ. ಇದರಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆಂದರು.
ಸಹಕಾರ ಸಪ್ತಾಹಗಳಲ್ಲಿ ಶಾಲು ಹೊದಿಸಿ ಸನ್ಮಾನ ಮಾಡುವುದರಿಂದ, ಉಪ್ಪಿಟ್ಟು-ಕೇಸರಿ ಬಾತ್ ತಿನ್ನುವುದರಿಂದ ಯಾವುದೇ ಪ್ರಯೋಜನವಿಲ್ಲ, ಅಗತ್ಯವಿರುವ ಜನರಿಗೆ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಪ್ರಯೋಜನ ದೊರೆತಾಗ ಸಹಕಾರ ಕ್ಷೇತ್ರಕ್ಕೆ ಒಳ್ಳೆ ಹೆಸರು ಬರುತ್ತದೆ. ಉಳ್ಳವರಿಗೆ ಸಾಲ ನೀಡುವುದರಿಂದ ಬಡವರಿಗೆ ಆಗುವ ಲಾಭವೇನು ಎಂದು ಪ್ರಶ್ನಿಸಿದರು. ಸೇವಾ ಸಹಕಾರ ಬ್ಯಾಂಕುಗಳು ನಾಮಕಾವಸ್ತೆಯಾಗಿವೆ, ಟಿಎಪಿಸಿಎಂಸ್ಗಳಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಯುತ್ತಿಲ್ಲ, ಪಿಎಲ್ಡಿ ಬ್ಯಾಂಕಿನಿಂದ ಸಾಲ ಕೊಡುವುದನ್ನು ನಿಲ್ಲಿಸಬೇಕು, ವಿವಿಧ ಸಹಕಾರ ಸಂಸ್ಥೆಗಳಿಂದ ಸಿಗುವ ಸಾಲವನ್ನು ಒಂದೇ ಸೂರಿನಡಿ ಪಡೆಯುವಂತಾಗಲು ಸರ್ಕಾರ ನಿಯಮಗಳಿಗೆ ತಿದ್ದುಪಡಿ ತರಬೇಕೆಂದು ತಿಳಿಸಿದರು.
ಸಹಕಾರ ಬ್ಯಾಂಕು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡವರಿಗೆ ಸಾಲ ಸಿಗದಿರುವುದರಿಂದ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿ, ಮೀಟರ್ ಬಡ್ಡಿಗೆ ಸಾಲ ಪಡೆದು ಶೋಷಣೆಗೆ ಒಳಗಾಗುತ್ತಿದ್ದಾರೆ. ಬಡವರ ಪಾಲಿಗೆ ಸಾಲ ಎಂಬ ಎರಡು ಅಕ್ಷರದ ಪದ ಶೂಲವಾಗಿ ಕಾಡುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಖಾಸಗಿಯವರು ಸಾಲ ಕೊಟ್ಟು ಬಡ್ಡಿ ಸಮೇತ ಅಸಲು ವಸೂಲಿ ಮಾಡಿದ್ರೆ ಒಪ್ಪಿಕೊಳ್ಳಬಹುದು. ಆದರೆ, ಜನರ ರಕ್ತವನ್ನು ಹೀರುತ್ತಿದ್ದಾರೆ. ಸರ್ಕಾರದಿಂದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯಗಳು ಜಾರಿಯಲ್ಲಿದ್ದರೂ ಬಡವರು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಮೀಟರ್ ಬಡ್ಡಿಗೆ ಸಾಲ ಪಡೆಯುವಂತಾಗಿರುವುದು ತಲೆ ತಗ್ಗಿಸುವ ವಿಚಾರವೆಂದು ಸರ್ಕಾರಕ್ಕೆ ಚಾಟಿ ಬೀಸಿದ ಶಾಸಕ ರಮೇಶ್ ಕುಮಾರ್, ಸಹಕಾರ ಸಂಸ್ಥೆಗಳಲ್ಲಿ ಸಾಲ ಪಡೆದು ಮರು ಪಾವತಿ ಮಾಡದೆ ಸಂಸ್ಥೆಗಳನ್ನು ಮುಳುಗಿಸಿರುವವರು ಇದ್ದಾರೆ, ಕೆಲವರು ಹೊಸ ಸಾಲಕ್ಕಾಗಿ ಡ್ರಸ್ ಕೋಡ್ ಬದಲಾವಣೆ ಮಾಡಿಕೊಂಡಿದ್ದಾರೆ, ವಿಸಿಟ್ಟಿಂಗ್ ಕಾರ್ಡು ಮಾಡಿಸಿಕೊಂಡಿದ್ದಾರೆ, ಹೊಸ ಪ್ರಾಜೆಕ್ಟ್ ರಿಪೋರ್ಟ್ಗಳನ್ನು ತಯಾರಿಸಿ ಸಾಲ ಪಡೆದು ಸಹಕಾರ ಸಂಸ್ಥೆಗಳಿಗೆ ಮತ್ತು ಸರ್ಕಾರಕ್ಕೆ ಪಂಗನಾಮ ಹಾಕುತ್ತಿದ್ದು ಇಂತಹವರಿಗೆ ಕಡಿವಾಣ ಹಾಕಲು ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕೆಂದರು. ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಮಾಮೂಲಿಯಂತೆ ಈ ವೇದಿಕೆಯಲ್ಲೂ ಶಾಶ್ವತ ನೀರಾವರಿಗೆ ಒತ್ತಾಯಿಸಿದರು.