ನಾಳೆ ಕನಕ ಜಯಂತಿ
ಚಿಂತಾಮಣಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನಕ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಕಾರ ಕೋರಿದ್ದಾರೆ. 20 ರಂದು 10 ಗಂಟೆಗೆ ಗುರುಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಗರಸಭೆ ಮತ್ತು ತಾಲೂಕು ಆಡಳಿತದ ಆಶ್ರಯದಲ್ಲಿ ಕನಕ ಜಯಂತಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ. ಕೃಷ್ಣಾರೆಡ್ಡಿ ವಹಿಸಲಿದ್ದಾರೆ, ಉದ್ಘಾಟನೆಯನ್ನು ತಾಪಂ ಅಧ್ಯಕ್ಷ ಗೌರಮ್ಮನಾಗೇಶ್, ಜಿಪಂ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಸ್ಥಬ್ಧಚಿತ್ರ ಹಾಗೂ ಮೆರವಣಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಎ.ಎಚ್. ಶಿವಯೋಗಿಸ್ವಾವು, ನಸೀರ್ ಅಹಮದ್, ವೈ.ಎ. ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ, ಶಾಸಕ ಎಂ. ರಾಜಣ್ಣ, ಎಸ್.ವಿ. ನಾರಾಯಣಸ್ವಾಮಿ, ರತ್ನಮ್ಮ, ಎಂ. ಗೋವಿಂದಪ್ಪ, ಅಶ್ವಥನಾರಾಯಣರೆಡ್ಡಿ, ತಾಪಂ ಉಪಾಧ್ಯಕ್ಷ ನಾಗರಾಜ್,ಪೊಲೀಸ್ ಉಪ ಅಧೀಕ್ಷಕ ಸಣ್ಣತಿಮ್ಮಪ್ಪ, ನಗರಸಭೆ ಆಯುಕ್ತ ಚನ್ನೇಗೌಡ, ಕಾರ್ಯನಿರ್ವಾಹಕ ಅಧಿಕಾರಿ ವಸಂತಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.
ನಾಳೆ ಆರೋಗ್ಯ ತಪಾಸಣಾ ಶಿಬಿರ
ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನ.20 ರಂದು ಬೆಳಗ್ಗೆ 10 ಗಂಟೆಗೆ ದಾಸಶ್ರೇಷ್ಠ ಕನಕದಾಸರ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸಾರ್ವಜನಿಕ ಆಸ್ಪತ್ರೆ, ಸೋಮೇನಹಳ್ಳಿಯ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಗ್ರಾಪಂ, ನಾಡಕಚೇರಿ, ಸರ್ಕಾರಿ-ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಶಿಬಿರದಲ್ಲಿ ಉಚಿತವಾಗಿ ನುರಿತ ವೈದ್ಯಕೀಯ ತಜ್ಞರು ತಪಾಸಣೆ ನಡೆಸಲಿದ್ದಾರೆ. ಫಿಜೀಶಿಯನ್, ಶಸ್ತ್ರಚಿಕಿತ್ಸಾ ತಜ್ಞರು,ಇಎನ್ಟಿ ವೈದ್ಯರು, ದಂತವೈದ್ಯರು, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು, ಮೂಳೆ ತಜ್ಞರು, ಮಕ್ಕಳ ತಜ್ಞರು, ನೇತ್ರ ತಜ್ಞರು ಸೇರಿದಂತೆ ಹಲವು ನುರಿತ ವೈದ್ಯಕೀಯ ಸಿಬ್ಬಂದಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಆರೋಗ್ಯ ಇಲಾಖೆಯ ಸವಲತ್ತುಗಳ, ವಾಜಿಪೇಯಿ ಆರೋಗ್ಯ ಶ್ರೀ ಕಾರ್ಯಕ್ರಮದಡಿ ದೊರೆಯುವ ಉಚಿತ ಚಿಕಿತ್ಸೆಗಳ ಕುರಿತು ಜಾಗೃತಿ ಮೂಡಿಸುವ ಮಾಹಿತಿ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಕಾರ್ಯದರ್ಶಿ ಜಿ.ವಿ. ವಿಶ್ವನಾಥ್ ತಿಳಿಸಿದ್ದಾರೆ.
ಕನ್ನಡ ಭಾಷೆ ಗಟ್ಟಿಯಾಗುತ್ತಿದೆ: ಜೆ.ಜಿ. ನಾಗರಾಜ್
ಕೆಜಿಎಫ್: ಕನ್ನಡ ಭಾಷೆ ಸಾಹಿತ್ಯ ಕರ್ನಾಟಕದಲ್ಲಿ ಸೊರಗುತ್ತಿದೆ ಅಥವಾ ಕಡೆಗಣಿಸಲಾಗುತ್ತದೆ ಎನ್ನುವುದು ತಪ್ಪು, ಅದು ಇನ್ನಷ್ಟು ಗಟ್ಟಿಯಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜಿ. ನಾಗರಾಜ್ ತಿಳಿಸಿದರು. ಬೇತಮಂಗಲ ಹೋಬಳಿ ಘಟಕವನ್ನು ಪ್ರಾರಂಭಿಸಲು ಆಗಮಿಸಿದ್ದ ಅವರು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ತೆಲುಗು, ತಮಿಳು ಭಾಷಿಕರ ಸಹಕಾರದಿಂದಲೇ ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ ಉಳಿಸಲು ಬೆಳೆಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಕಳೆದ ಒಂದು ವರ್ಷದ ಹಿಂದೆ ನೂತನ ಪರಿಷತ್ ತಂಡವಾದ ನಂತರ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾಹಿತ್ಯ ಪರಿಷತ್ ಕೇವಲ ಹೆಸರಿಗಲ್ಲ ಎನ್ನುವುದನ್ನು ಸಾಭೀತುಪಡಿಸಿದ್ದೇವೆ. ಜೊತೆಗೆ ಫರಿಷತ್ತು ಒಂದು ವರ್ಷದಲ್ಲಿ 4 ಲಕ್ಷ ಉಳಿತಾಯ ಮಾಡುವ ಮೂಲಕ ಫರಿಷತ್ ಘಟಕದ ಪಾರದರ್ಶಕತೆ ಮತ್ತು ಕ್ರಿಯಾಶೀಲತೆಯನ್ನು ತೋರಿಸಿದ್ದೇವೆ ಎಂದರು. ಜಿಪಂ ಸದಸ್ಯ ಆ.ಮು. ಲಕ್ಷ್ಮೀನಾರಾಯಣ, ಅಶ್ವತ್ರೆಡ್ಡಿ, ಜನಾರ್ದನ್, ವೀರವೆಂಕಟಪ್ಪ, ಪುರುಷೋತ್ತಮರಾವ್, ಅಪ್ಪಾಜಿಗೌಡ, ಬಾಲಕೃಷ್ಣಗೌಡ, ವೆಂಕಟಮುನಿಯಪ್ಪ ಹಾಜರಿದ್ದರು. ಈ ಸಂದರ್ಭದಲ್ಲಿ ಬೇತಮಂಗಲ ಹೋಬಳಿಯ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಶಿಕ್ಷಕ ವಿಜಯಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸರ ಅಪಹರಣ
ಬಂಗಾರಪೇಟೆ: ಹಾಡಹಗಲೇ ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಮಲಗಿದ್ದ ವೃದ್ಧೆಯೊಬ್ಬಳ ಕತ್ತಿನಲ್ಲಿದ್ದ 75 ಸಾವಿರ ರು. ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಪಟ್ಟಣದ ನ್ಯೂಟೌನ್ ಬಡಾವಣೆಯ ಬೂದಿಕೋಟೆ ಎಸ್ಬಿಎಂ ಉದ್ಯೋಗಿ ವೆಂಕಟೇಶ್ ಅವರ ತಾಯಿ ವಿಜಯಲಕ್ಷ್ಮಿ ಎಂಬವರಿಂದ ಸರ ಕಸಿದು ಹೋಗಿದ್ದು, ದುಷ್ಕರ್ಮಿ ಮನೆಯೊಳಗೆ ನುಗ್ಗಿ 40ಗ್ರಾಂ ತೂಕದ 75ಸಾವಿರ ರು. ಮೌಲ್ಯದ ಸರ ಕಸಿದುಕೊಂಡು, ವೃದ್ಧೆಯನ್ನು ರೂಂನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾನೆ. ಪಟ್ಟಣದಲ್ಲಿ ಚೈನು ಕಳ್ಳರ ಹಾವಳಿ ಕೆಲ ತಿಂಗಳಿಂದ ದೂರವಾಗಿತ್ತು. ಈಗ ಮತ್ತೆ ಮರುಕಳಿಸುವ ಮೂಲಕ ಮಹಿಳೆಯರನ್ನು ಬೆಚ್ಚಿ ಬೀಳಿಸಿದೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
'ಉಚಿತ ತರಬೇತಿಗಳನ್ನು ಉಪಯೋಗಿಸಿಕೊಳ್ಳಿ'
ಗೌರಿಬಿದನೂರು: ಸರ್ಕಾರದ ಉಚಿತ ತರಬೇತಿಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಜಿಲ್ಲಾ ನಗರಾಭಿವೃದ್ಧಿ ಯೋಜನಾಧಿಕಾರಿ ನಾಗರಾಜ ಶೆಟ್ಟಿ ಕರೆ ನೀಡಿದರು. ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ನಗರಾಭಿವೃದ್ಧಿ ಇಲಾಖೆ ಚಿಕ್ಕಬಳ್ಳಾಪುರ, ಪುರಸಭೆ ಗೌರಿಬಿದನೂರು ಹಾಗೂ ಅಭ್ಯುದಯ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಸ್ವರ್ಣ ಜಯಂತಿ ಶಹರಿ ಯೋಜಗಾರ್ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ, ನಗರ ಸಭೆ ಹಾಗೂ ಪುರ ಸಭೆ ವ್ಯಾಪ್ತಿಯಲ್ಲಿ ವಾಸಿಸುವ ಬಡ ನಿರುದ್ಯೊಗಿ ಯುವಕ ಯುವತಿಯವರಿಗೆ ಉಚಿತವಾಗಿ ತರಬೇತಿ ನೀಡುವ ಕೌಶಲ್ಯ ವೃತ್ತಿಗಳಾದ ಟೈಲರಿಂಗ್, ಬ್ಯೂಟೀಷಿಯನ್ ಮತ್ತಿತರ ತರಬೇತಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಪ್ರಬಲರಾಗಿ ಎಂದರು. ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ ಮಂಜುನಾಥ್ ಮಾತನಾಡಿ, ಫಲಾನುಭವಿಗಳು ತರಬೇತಿಗೆ ನಿರ್ಧಿಷ್ಠ ವೇಳೆಗೆ ಹಾಜರಾಗಬೇಕೆಂದರು. ಆರೋಗ್ಯ ನಿರೀಕ್ಷಕ ಶಿವಣ್ಣ, ತಿಮ್ಮರಾಜು, ಸರಳ, ತ್ಯಾಗರಾಜು ಇದ್ದರು.
ಡೆಂಘೀ ಜ್ವರಕ್ಕೆ ಮಹಿಳೆ ಬಲಿ
ಬಂಗಾರಪೇಟೆ: ಕಳೆದ ಬುಧವಾರ ಅರಣ್ಯ ಇಲಾಖೆ ಗಾರ್ಡ್ ಆಗಿದ್ದ ತಿಮ್ಮಾಪುರ ಗ್ರಾಮದ ಚಂದ್ರಪ್ಪ ಡೆಂಘೀ ಜ್ವರಕ್ಕೆ ಬಲಿಯಾಗಿದ ಘಟನೆ ಹಸಿಯಾಗಿರುವಾಗಲೇ ಪಟ್ಟಣದ ಯುವತಿಯೊಬ್ಬಳು ಡೆಂಘೀಗೆ ಬಲಿಯಾಗಿದ್ದಾಳೆ. ಪಟ್ಟಣದ ಕೆರೆಕೋಡಿ ಬಡಾವಣೆಯ ಶೇಖರ್ ಎಂಬವರ ಮಗಳಾದ ರಮ್ಯಾ (23) ಎಂಬವರು ಮೃತಪಟ್ಟಿದ್ದು, ಕಳೆದ ಮೂರು ದಿನಗಳಿಂದ ಜ್ವರ ಕಾಣಿಸಿಕೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಫಲಕಾರಿಯಾಗದೆ ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಪಟಾಕಿ ಸಿಡಿತಕ್ಕೆ ವ್ಯಕ್ತಿ ಬಲಿ: ಮಾಲೂರು ತಾಲೂಕಿನ ಆಗ್ರಹಾರ ಗ್ರಾಮದ ವೆಂಕಟೇಶ ಎಂಬವರು ಪಟಾಕಿ ಸಿಡಿಸುವಾಗ ಮೈಮೇಲೆ ಬಿದ್ದು ತೀವ್ರ ಗಾಯಗಳಾಗಿದ್ದು, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಳೆ ಕನಕ ಜಯಂತಿ
ಮಾಲೂರು: ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಆಚರಣಾ ಸಮಿತಿಯಿಂದ ಬುಧವಾರ ಪಟ್ಟಣದ ಮಾಸ್ತಿ ವೆಂಕಟೇಶ್ವರ ಅಯ್ಯಂಗಾರ್ ರಂಗಮಂದಿರದಲ್ಲಿ ಕನಕದಾಸರ ಜಯಂತ್ಯುತ್ಸವ ನಡೆಲಿದೆ. ಕನಕದಾಸರ ಭಾವಚಿತ್ರಕ್ಕೆ ಪೂಜೆಯೊಂದಿಗೆ ಪಟ್ಟಣದಲ್ಲಿ ಅದ್ಧ್ದೂರಿ ಮೆರವಣಿಗೆ ನಡೆಯಲಿದೆ. ನಾಡಿನ ಜನಪದ ಕಲಾ ತಂಡಗಳಾದ ಕಾಯಿ ಪವಾಡ, ಪೂಜಾಕುಣಿತ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ವೇದಿಕೆಯಲ್ಲಿ ನಡೆಯುವಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು, ತಾಪಂ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷೆ ರಾಜಮ್ಮ, ಜಿಪಂ ಸದಸ್ಯೆ ರತ್ನಮ್ಮ ನಂಜೇಗೌಡ, ಮಂಜುಳಾ ವೆಂಕಟೇಶ್, ರಾಮಸ್ವಾಮಿ ರೆಡ್ಡಿ ಇತರರು ಭಾಗವಹಿಸಲಿದ್ದಾರೆ.
ರಕ್ತದಾನ ಶಿಬಿರ
ಕೆಜಿಎಫ್: ಪ್ರತಿ ಹನಿ ರಕ್ತ ಅಮೂಲ್ಯವಾದದ್ದು ಆದ್ದರಿಂತ ಪ್ರತಿಯೊಬ್ಬ ನಾಗರಿಕನೂ ರಕ್ತದಾನ ಮಾಡಲು ಮುಂದಾಗಬೇಕು ಎಂದು ಮಾಜಿ ಶಾಸಕ ವೈ. ಸಂಪಂಗಿ ಹೇಳಿದರು. ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಯುವಕರು ರಕ್ತದಾನ ಮಾಡಲು ಹೆಚ್ಚಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. ಜಿಪಂ ಸದಸ್ಯ ಆ.ಮು.ಲಕ್ಷ್ಮೀನಾರಾಯಣ, ಗ್ರಾ.ಪಂ ಅಧ್ಯಕ್ಷೆ ರಾಧಮ್ಮ, ಮುನಿಸ್ವಾಮಿರೆಡ್ಡಿ ಇದ್ದರು.
'ರೈತರಿಗೆ ಸೌಲಭ್ಯ ನೀಡಿ'
ಬಂಗಾರಪೇಟೆ: ರೈತರಿಗೆ ಸರ್ಕಾರಗಳು ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಚಿಕ್ಕ ಅಂಕಂಡಹಳ್ಳಿ ಗ್ರಾಮದಲ್ಲಿ ಭೂಚೇತನ ಯೋಜನೆಯಡಿ ಬೆಳೆ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ನದಿ ನಾಲೆಗಳಿಲ್ಲದಿದ್ದರೂ ಬರಗಾಲದಲ್ಲಿಯೂ ಉತ್ತಮವಾಗಿ ಬೆಳೆಗಳನ್ನು ಮಾಡುವುದರ ಮೂಲಕ ದೇಶಕ್ಕೆ ಮಾದರಿ ಜಿಲ್ಲೆಯಾಗಿದೆ ಎಂದರು. ಜಿಪಂ ಸದಸ್ಯ ಎಂ.ಎಸ್. ಆನಂದ್, ಕೃಷಿ ವಿಜ್ಞಾನಿ ಡಾ.ಬಿ.ಆರ್. ಪ್ರೇಮಲತಾ ಮಾತನಾಡಿದರು. ಇದೇ ವೇಳೆ ಕೃಷಿ ಉಪಕರಣಗಳನ್ನು ಪ್ರದರ್ಶನ ಮಾಡಲಾಯಿತು. ತಾಪಂ ಅಧ್ಯಕ್ಷೆ ರೇಣುಕಾ, ಸದಸ್ಯೆ ವೆಂಕಟರತ್ನಮ್ಮ, ಪಪಂ ಅಧ್ಯಕ್ಷೆ ಅನಿತ ಚಂದ್ರಯ್ಯಶೆಟ್ಟಿ, ಎಸ್.ನಾಗರಾಜ್, ಶ್ರೀನಿವಾಸಗೌಡ ಇದ್ದರು.
ಜಾಗೃತಿ ಉಸ್ತುವಾರಿ ಸಮಿತಿ ಸಭೆ
ಚಿಕ್ಕಬಳ್ಳಾಪುರ: ಜಿಪಂ ಸಭಾಂಗಣದಲ್ಲಿ ನ.19 ರಂದು ಬೆಳಗ್ಗೆ 10 ಗಂಟೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದ ಮೇಲೆ ದೌರ್ಜನ್ಯಗಳನ್ನು ನಿಯಂತ್ರಿಸಲು ರಚಿಸಿರುವ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆ(ಅಟ್ರಾಸಿಟಿ ಸಭೆ) ನಡೆಯಲಿದೆ. ಜಿಲ್ಲಾಧಿಕಾರಿ ವಿಶಾಲ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಡಾ.ಬಿ.ಕೆ. ನಾಗರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾರ್ಥ ನಾಯಕರಿಂದ ದಿಕ್ಕುತಪ್ಪಿದ ಹೋರಾಟ
ಗೌರಿಬಿದನೂರು: ನ.18, 1970ರಲ್ಲಿ ರಾಜ್ಯದಲ್ಲಿ ಪ್ರಾರಂಭವಾದ ದಲಿತ ಚಳವಳಿ ಇಂದು ಕೆಲವು ಸ್ವಾರ್ಥ ದಲಿತ ನಾಯಕರಿಂದ ದಿಕ್ಕುತಪ್ಪುತ್ತಿದೆ ಇದನ್ನು ತಡೆದು ಎಲ್ಲ ಹೋಬಳಿಗಳಲ್ಲಿ ಸಂಘಟನೆ ಗಟ್ಟಿಗೊಳಿಸಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಜಿ.ನರಸಿಂಹಮೂರ್ತಿ ತಿಳಿಸಿದರು. ಪಟ್ಟಣದಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಾಲೂಕಿನ ಬಹುತೇಕ ದಲಿತ ಕಾಲೋನಿಗಳಲ್ಲಿ ಮೂಲ ಸೌಲಭ್ಯಗಳಿಲ್ಲ, 20 ವರ್ಷಗಳಿಂದ ಶಾಸಕರಾಗಿ, ವಿಧಾನಸಭಾ ಉಪಾಧ್ಯಕ್ಷರಾಗಿರುವ ಎನ್.ಎಚ್. ಶಿವಶಂಕರರೆಡ್ಡಿ ಅವರ ಸ್ವಂತಗ್ರಾಮ ಎಚ್.ನಾಗಸಂದ್ರದಲ್ಲಿ ಅನೇಕ ಮಂದಿ ದಲಿತರಿಗೆ ವಸತಿ ಸೌಲಭ್ಯಗಳಿಲ್ಲ ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ. ನಂಜುಂಡಪ್ಪ, ಜಿಲ್ಲಾ ಕಲಾ ಮಂಡಳಿ ಸಂಚಾಲಕ ವೆಂಕಟೇಶ್, ನಗರ ಸಂಚಾಲಕ ಗಂಗಾಧರಯ್ಯ, ತಾಲೂಕು ಸಂಚಾಲಕ ರಂಗಪ್ಪ, ಟಿ. ವೆಂಕಟೇಶ್, ನರಸಿಂಹಮೂರ್ತಿ, ರಾಮಾಂಜನಪ್ಪ, ಅಶ್ವತ್ಥಪ್ಪ, ರಮೇಶ್, ಗಂಗಪ್ಪ ಇದ್ದರು.
ಅಕ್ರಮ ಮರಳು; ಲಾರಿ ವಶ
ಚಿಂತಾಮಣಿ: ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯನ್ನು ಮರಳು ಸಮೇತ ದಿಬ್ಬೂರಹಳ್ಳಿ ವೃತ್ತದಲ್ಲಿ ಸಬ್ಇನ್ಸ್ಪೆಕ್ಟರ್ ತಬರಾ ಆಲಂಪಾಷ ದಾಳಿ ನಡೆಸಿ ವಾಹನವನ್ನು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ತಾಲೂಕಿನ ಗಡಿಭಾಗದ ದಿಬ್ಬೂರಹಳ್ಳಿ ಗ್ರಾಮದ ವೃತ್ತದ ಬಳಿ ಸೋಮವಾರ ಬೆಳಗಿನ ಜಾವ 5 ಗಂಟೆ ವೇಳೆಯಲ್ಲಿ ಕೋರ್ಲಪರ್ತಿ ಮಾರ್ಗವಾಗಿ ತಲಕಾಯಲಬೆಟ್ಟದಿಂದ ಬೆಂಗಳೂರು ನಗರಕ್ಕೆ ಮರಳು ತುಂಬಿಕೊಂಡು ಕಾವೇರಿಯೆಂಬ ಖಾಸಗಿ ಲಾರಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ರಾಯಪ್ಪಲ್ಲಿ ಗ್ರಾಮದ ಹಲವರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ ಲಾರಿಯನ್ನು ಮರಳು ಸಮೇತ ದಿಬ್ಬೂರಹಳ್ಳಿ ವೃತ್ತದಲ್ಲಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.