ಪಿಜಿ ಸೆಂಟರ್ ಕಾಮಗಾರಿ ಅಪೂರ್ಣ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ನ.18
ತಾಲೂಕಿನ ಮಂಗಸಂದ್ರದಲ್ಲಿರುವ ಬೆಂಗಳೂರು ವಿವಿಗೆ ಸೇರಿದ ಸ್ನಾತಕೋತ್ತರ ಕೇಂದ್ರದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಹಾಗೂ ಮೂಲಭೂತ ಸೌಲಭ್ಯಗಳಿಗೆ ಒತ್ತಾಯಿಸಿ ಎಸ್.ಎಫ್.ಐ ನಿಂದ ಸೋಮವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.
ಸ್ನಾತಕೋತ್ತರ ಕೇಂದ್ರವು 1995 ರಲ್ಲಿ ಸ್ಥಾಪನೆಯಾಗಿ 18 ವರ್ಷ ಕಳೆದಿದ್ದು ಇದುವರೆಗೂ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ವಂಚನೆಗೊಳಪಟ್ಟಿರುತ್ತದೆ. 16 ವರ್ಷಗಳಿಂದ ಕೋಲಾರ ನಗರದ ಬಾಲಕರ ಕಾಲೇಜಿನ ಹಳೆಯ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿದ್ದ ಸ್ನಾತಕೊತ್ತರ ಕೇಂದ್ರವು ಕಳೆದ 1 ವರ್ಷದ ಹಿಂದೆ ಮಂಗಸಂದ್ರಕ್ಕೆ ಸ್ಥಳಾಂತರಗೊಂಡಿದ್ದರೂ ಶೈಕ್ಷಣಿಕ ಚಟುವಟಿಕೆಗಳಿಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಮಂಗಸಂದ್ರದಲ್ಲಿ 30 ಎಕರೆ ಜಮೀನಿನಲ್ಲಿ 12 ಕೋಟಿ ವೆಚ್ಚದಲ್ಲಿ 4 ವರ್ಷಗಳ ಹಿಂದೆ ಕಾಮಗಾರಿ ಪ್ರಾರಂಭಿಸಿ ಸರ್ಕಾರದ ಯೋಜನೆಯಂತೆ 2013 ಅಕ್ಟೋಬರ್ 19ಕ್ಕೆ ಹೊಸ ಕಟ್ಟಡ ಉದ್ಘಾಟನೆಯಾಗಬೇಕಾಗಿತ್ತು, ಗುತ್ತಿಗೆದಾರರ ಮತ್ತು ವಿವಿಯ ಮುಖ್ಯ ಇಂಜಿನಿಯರ್ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗಳು ಸ್ಥಗಿತಗೊಂಡಿದ್ದು ಕೇವಲ ಆಡಳಿತಾತ್ಮಕ ಕಚೇರಿಯನ್ನು ಮಾತ್ರ ಕಟ್ಟಲಾಗಿದೆ ಎಂದು ದೂರಿದರು.
ಈ ಕಟ್ಟಡದಲ್ಲಿಯೇ ಪ್ರಸ್ತುತ ನಾಲ್ಕು ವಿಭಾಗಗಳ 8 ತರಗತಿಗಳು ಮತ್ತು ನಾನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಕನಿಷ್ಠ ಮೂಲ ಸೌಲಭ್ಯಗಳಾದ ಕೊಠಡಿಗಳು, ರಸ್ತೆ, ಸಾರಿಗೆ, ಶುದ್ದ ಕುಡಿಯುವ ನೀರು, ವಿದ್ಯತ್, ಕಾಂಪೌಂಡ್ ಗ್ರಂಥಾಲಯ, ಕ್ಯಾಂಟೀನ್, ಫ್ರಥಮ ಚಿಕಿತ್ಸಾ ಘಟಕ ಇಲ್ಲದೆ ಸಮಸ್ಯೆಗಳ ನಡುವೆ ವಿದ್ಯಾರ್ಥಿಗಳು ಬೆಟ್ಟಗುಡ್ಡಗಳಲ್ಲಿ ಚಿರತೆ ಮತ್ತು ಹಾವುಗಳ ಭಯದಿಂದ ವಿದ್ಯಾಭ್ಯಾಸ ಮಾಡುವಂತಾಗಿದೆ ಹಾಗೂ ದೂರದ ಹಳ್ಳಿಗಳಿಂದ ಬರುವ ವಿದ್ಯಾರ್ಥಿನಿಯರಿಗೆ ಯಾವುದೇ ಸೂಕ್ತ ರಕ್ಷಣೆ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ನಾತಕೋತ್ತರ ಕೇಂದ್ರದ ಕಟ್ಟಡ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು, ಮೂಲ ಸೌಲಭ್ಯ ಕಲ್ಪಿಸಬೇಕು, ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಪಿಜಿ ಕೇಂದ್ರದಲ್ಲೇ ಆಗಬೇಕು, ಈಗಿರುವ 4 ಕೋಸುಗಳ ಜೊತೆಗೆ ಇತರೆ ಕೋಸುಗಳನ್ನು ಪ್ರಾರಂಭಿಸಬೇಕು, ಗ್ರಂಥಾಲಯಕ್ಕೆ ಕಳೆದ 2 ವರ್ಷಗಳಿಂದ ನಿಂತು ಹೋಗಿರುವ ಹೊಸ ಪುಸ್ತಕಗಳ ಖರೀದಿಸಬೇಕು, ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಕಂಪ್ಯೂಟರ್ ವ್ಯವಸ್ಥೆ ಮಾಡಬೇಕು, ಪರೀಕ್ಷಾ ಮೌಲ್ಯಮಾಪನ ಫಲಿತಾಂಶ ಮತ್ತು ಅಂಕಪಟ್ಟಿ ಸಮಸ್ಯೆಯನ್ನು ಬಗೆಹರಿಸಿ ಸ್ಫರ್ಧಾತ್ಮಕ ಪರೀಕ್ಷಗಳಿಗೆ ಬೇಕಾದ ತರಬೇತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ಎಫ್.ಐ. ಜಿಲ್ಲಾಧ್ಯಕ್ಷ ವಿ. ಅಂಬರೀಶ್. ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ, ವಿದ್ಯಾರ್ಥಿಗಳಾದ ಮರಳೀಧರ, ಜಬೀವುಲ್ಲಾ, ಮಹದೇವ್, ಮುರುಗೇಶ್, ಲಕ್ಷ್ಮೀಪತಿ, ಅನಿಲ್, ಸಂಜಯ್, ಚಂದ್ರಶೇಖರ್, ಲಕ್ಷ್ಮಿ, ಶ್ವೇತ, ಆಶ್ವತಿ, ಹಾಗೂ ಕಾಲೇಜು ಕನ್ನಡ ಸಂಘದ ಅಧ್ಯಕ್ಷ ಅಂಬರೀಶ್ ಇದ್ದರು.
ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯ
ಚಿಂತಾಮಣಿ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಮಾಡಿಕೆರೆ ಕ್ರಾಸ್ನಿಂದ ಕಾಲ್ನಡಿಗೆ ಜಾಥಾ ನಡೆಸಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮನೆ ಮುಂದೆ ಮಾದಿಗ ದಂಡೋರ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡಲು ಒತ್ತಾಯಿಸಿದರು. ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಂಗಮಶೀಗೇನಹಳ್ಳಿ ದೇವರಾಜ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ತರಲು ಕಳೆದ 16 ವರ್ಷಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಕಾರ್ಯರೂಪಕ್ಕೆ ಬರದೆ ಇರಲು ಸರ್ಕಾರದ ನಿರ್ಲಕ್ಷವೇ ಕಾರಣವೆಂದು ಕಿಡಿಕಾರಿದರು. ನಂತರ ಮಾದಿಗ ದಂಡೋರದ ಪಿ.ವಿ. ವೆಂಕಟರವಣಪ್ಪ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧ್ಯಕ್ಷ ಎಂ.ವಿ. ರಾಮಪ್ಪ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮನೆ ಮುಂಭಾಗದಲ್ಲಿ ಜಮಾವಣೆಗೊಂಡಾಗ ಪೊಲೀಸ್ ವೃತ್ತ ನಿರೀಕ್ಷಕ ನಂಜಪ್ಪ ಬಂದೋಬಸ್ತ್ ಕಲ್ಪಿಸಿದರು. ನಂತರ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಶಾಸಕರ ಆಪ್ತ ಸಹಾಯಕ ನಾಗರಾಜ್ ಅವರಿಗೆ ಮನವಿ ನೀಡಿದರು. ಸಮಿತಿಯ ಕಲ್ಲಹಳ್ಳಿ ಕೃಷ್ಣಮೂರ್ತಿ, ಶ್ಯಾಮರಾಜ್, ಗುರುಪ್ರಸಾದ್, ಮಿಟ್ಟಹಳ್ಳಿ ಮಂಜುನಾಥ್, ಆನೂರು ಸೀನಾ ಭಾಗವಹಿಸಿದ್ದರು.