ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಮೂಲ ಸೌಲಭ್ಯ ಪೂರೈಕೆಗೆ ಪ್ರಾಮಾಣಿಕ ಕೆಲಸ ಮಾಡಿ'

Srinivasa Murthy VN
Updated On : 19 Nov 2013, 1:36 am

ತಾಲೂಕು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಶಾಸಕ ಡಾ.ಕೆ. ಸುಧಾಕರ್ ಅಧಿಕಾರಿಗಳಿಗೆ ಕಿವಿಮಾತು
ಚಿಕ್ಕಬಳ್ಳಾಪುರ: ಆರೋಗ್ಯ, ಶಿಕ್ಷಣ ಹಾಗೂ ಮೂಲ ಸೌಲಭ್ಯಗಳ ಪೂರೈಕೆಯಲ್ಲಿ ಜನರಿಗೆ ಲೋಪ ಆಗದಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕೆಂದು ಶಾಸಕ ಡಾ.ಕೆ. ಸುಧಾಕರ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ತಾಲೂಕು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಆರೋಗ್ಯ ಹಾಗೂ ಶಿಕ್ಷಣ ಪ್ರತಿಯೊಬ್ಬರಿಗೂ ಅನಿವಾರ್ಯ. ಚಿಕ್ಕಬಳ್ಳಾಪುರ ಯಾವುದೇ ಹಿನ್ನಡೆ ಹೊಂದಬಾರದು. ಅಧಿಕಾರಿಗಳು ಜನರ ಸೌಕರ್ಯ ಒದಗಿಸುವ ವಿಷಯದಲ್ಲಿ ಯಾವುದೇ ಲೋಪ ಎಸಗಬಾರದು ಎಂದು ತಿಳಿಸಿದರು.
ನಾನಾ ಇಲಾಖೆಗಳಲ್ಲಿ ಜನರಿಗೆ ನೀಡುತ್ತಿರುವ ಸೌಲಭ್ಯ, ಸೇವೆ ಹಾಗೂ ಮಾರ್ಗದರ್ಶನದ ವಿವರವನ್ನು ಆಯಾ ಇಲಾಖೆಯ ಅಧಿಕಾರಿಗಳಿಂದ ಪಡೆದುಕೊಂಡರು.
 ಜನ ಹಾಗೂ ಜಾನುವಾರುಗಳಿಗೆ ಎದುರಾಗಿರುವ ಸಮಸ್ಯೆಗಳು, ರೋಗ ಹಾಗೂ ಅದಕ್ಕೆ ಕೈಗೊಂಡ ಪರಿಹಾರ ಕ್ರಮವನ್ನು ವಿಚಾರಿಸಿದರು.
ಆರೋಗ್ಯ ಇಲಾಖೆಯಲ್ಲಿ ಎಷ್ಟು ಮಂದಿ ಸಿಬ್ಬಂದಿ ಇದ್ದಾರೆ, ವೈದ್ಯರ ಸಂಖ್ಯೆ ಎಷ್ಟು ಎಂದು ವಿಚಾರಿಸಿದ ಶಾಸಕರಿಗೆ ಸಮರ್ಪಕವಾದ ಉತ್ತರ ಸಿಗಲಿಲ್ಲ. ದಿಬ್ಬೂರಿನಲ್ಲಿ ಎಷ್ಟು ವೈದ್ಯರಿದ್ದಾರೆ, ಸಿಬ್ಬಂದಿ ಇದ್ದಾರೆ ಎಂದು ವಿಚಾರಿಸಿದಾಗ ಅದಕ್ಕೂ ಉತ್ತರ ಸರಿಯಾಗಿ ಸಿಗಲಿಲ್ಲ, ಕುಪಿತರಾದ ಶಾಸಕರು ಸಮರ್ಪಕ ದಾಖಲೆ ಇಲ್ಲದೆ ಸಭೆಗೆ ಬರಲೇಬೇಡಿ ಎಂದು ಅಧಿಕಾರಿಗಳ ಕಾರ್ಯ ವೈಖರಿಗೆ ಕೆಂಡಕಾರಿದರು. ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವ ಹಾಗೂ ಜಿಲ್ಲೆಯಲ್ಲಿ ಹಲವು ಜಾನುವಾರುಗಳ ಪ್ರಾಣಬಲಿ ಪಡೆದಿರುವ ಕಾಲುಬಾಯಿ ರೋಗದ ಬಗ್ಗೆ ಸಮಗ್ರ ಮಾಹಿತಿಯನ್ನು ಪಶುಪಾಲನಾ ಇಲಾಖೆಯಿಂದ ಪಡೆದರು. ಲಸಿಕೆಯ ಲಭ್ಯತೆ, ರೈತರಿಗೆ ರೋಗದ ಅರಿವು ಮೂಡಿಸುವ ಕಾರ್ಯ, ರೋಗದ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ವಿಚಾರಿಸಿದರು. ಪಶು ಆಸ್ಪತ್ರೆ, ಸಿಬ್ಬಂದಿ, ವೈದ್ಯರ ಸಂಖ್ಯೆ ಕುರಿತು ಮಾಹಿತಿ ಕಲೆ ಹಾಕಿದ ಶಾಸಕರು, ಹಂದಿ, ಕುರಿ, ಕೋಳಿ ಸಾಕಾಣಿಕೆಗೆ ಸಿಗುತ್ತಿರುವ ಸಹಾಯಧನ, ಸಬ್ಸಿಡಿಗಳ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಕೇಳಿದರು. ಸರ್ಕಾರದಿಂದ ಸಿಗುವ ಸವಲತ್ತು ಹಾಗೂ ಅದರ ಸದುಪಯೋಗದ ಬಗ್ಗೆ ಜನರಿಗೆ ತಿಳಿಸುವಂತೆ ಸೂಚಿಸಿದರು.
ಶಾಸಕರು ಮೀನುಗಾರಿಕೆ, ಕೆಎಸ್ಆರ್ಟಿಸಿ, ಗಣಿಗಾರಿಕೆ, ಬೆಸ್ಕಾಂ, ಕೃಷಿ, ಅರಣ್ಯ, ಕಾರ್ಮಿಕ, ಶಿಕ್ಷಣ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳಿಂದ ವಿಸ್ತ್ರೃತ ಮಾಹಿತಿ ಪಡೆದುಕೊಂಡರು. ಉಪ ತಹಸೀಲ್ದಾರ್, ಆರ್ಟಿಒ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ತಾಪಂ ಅಧ್ಯಕ್ಷರು ಹಾಗೂ ನಾನಾ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಹಲ್ಲೆ ಯತ್ನ; ಬಿಗುವಿನ ವಾತಾವರಣ
ಚಿಂತಾಮಣಿ;
ನಗರಸಭಾ ಮಾಜಿ ಸದಸ್ಯ ಹಾಗೂ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ದೇವಳಂ ಶಂಕರ್ ಮೇಲೆ ಕ್ಷುಲ್ಲಕ ಕಾರಣಕ್ಕೆ ಗುಂಪೊಂದು ಹಲ್ಲೆ ಮಾಡಲು ಯತ್ನಿಸಿದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪನ್ನು ಚದುರಿಸಿರುವುದರಿಂದ ಗಜಾನನ ವೃತ್ತದ ಬಳಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಪಟ್ಟಣದ ಗಜಾನನ ವೃತ್ತದ ಬಳಿ ಬೈಕಿನಲ್ಲಿ ದೇವಳಂ ಶಂಕರ್ ಬರುತ್ತಿರುವಾಗ ಯುವಕರಿಬ್ಬರು ಅಡ್ಡ ಬಂದು ಹಲ್ಲೆ ಮಾಡಲು ಮುಂದಾದಾಗ ನೆರೆಹೊರೆಯರು ಗುಂಪು ಸೇರಿದ್ದು, ತಕ್ಷಣ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮುರಳಿ ಹಾಗೂ ಸಿಬ್ಬಂದಿ ಬಂದು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ವೃದ್ಧರ ಅನುಭವದ ಮಾರ್ಗದರ್ಶನ ಅಮೂಲ್ಯ
ಗೌರಿಬಿದನೂರು:
ವೃದ್ಧರ ಅನುಭವ ಹಾಗೂ ಮಾರ್ಗದರ್ಶನ ಸಮಾಜಕ್ಕೆ ಅಮೂಲ್ಯವಾದದ್ದು, ವೃದ್ಧ ತಂದೆ ತಾಯಿಗಳ ಪೋಷಣೆ ಮಾಡದವನ ಜೀವನ ವೈರ್ಥ ಎಂದು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.
ಪಟ್ಟಣದ ಸಮತಾ ಶಾಲೆಯ ಆವರಣದಲ್ಲಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ಏರ್ಪಡಿಸಿದ್ದ 80 ವಸಂತಗಳನ್ನು ಕಂಡ ನಿವೃತ್ತ ನೌಕರರು ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೃದ್ಧರ ಅನುಭವಗಳನ್ನು ಕಡೆಗಣಿಸಬಾರದು ಎಂದರು. ತಾಲೂಕಿನ ಕುಡುಮುಲಕುಂಟೆ ಸಮೀಪ 250 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರದಿಂದ ಅನುವುಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ 30 ಮಂದಿ 80 ವಸಂತ ಕಂಡ ನಿವೃತ್ತ ನೌಕರರು, ವಿವಿಧ ಗಣ್ಯರು ಹಾಗೂ ಶಾಸಕರನ್ನು ಸನ್ಮಾನಿಸಲಾಯಿತು. ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಕೆ.ವಿ. ನಂಜುಂಡೇಗೌಡ, ಎಂ.ಜೆ. ಬ್ರಹ್ಮಯ್ಯ, ಡಿ. ಅಶ್ವತ್ಥಪ್ಪ, ಎಂ. ರಾಮಯ್ಯ, ಎಸ್. ರಾಮೋಜೀರಾವ್. ಜಿ.ಸಿ. ಸಂಜೀವರೆಡ್ಡಿ, ಆರ್.ಟಿ. ಹನುಮಂತರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement