ರಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಕ್ಕೆ ಡಿಸಿ ಸೂಚನೆ
ಕೋಲಾರ: ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ಎ.ಪಿ.ಎಂ.ಸಿ ಯಾರ್ಡ್ಗಳಲ್ಲಿ ಬೆಂಬಲ ಬೆಲೆ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿಯವರು ತಿಳಿಸಿದರು.
ಅವರು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ರಾಗಿ ಬೆಳೆ ಉತ್ತಮವಾಗಿದ್ದು ಈ ವರ್ಷ ಒಂದು ಲಕ್ಷ ಹನ್ನೊಂದು ಸಾವಿರ ಟನ್ ರಾಗಿ ಉತ್ಪಾದನೆಯಾಗಲಿದ್ದು ರೈತರಿಗೆ ಅನುಕೂಲವಾಗುವಂತೆ ಕ್ವಿಂಟಾಲ್ಣಗೆ 1,800 ರುಪಾಯಿ ಬೆಂಬಲ ಬೆಲೆ ನೀಡಿ ರಾಗಿಯನ್ನು ಖರೀದಿ ಮಾಡಲಾಗುವುದು ಎಂದು ಹೇಳಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಿಕ್ಕಣ್ಣ ಮಾತನಾಡಿ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಲ್ಲಿ ಹೆಚ್ಚು ರಾಗಿ ಉತ್ಪಾದನೆಯಾಗಲಿದೆ. ಎಂದು ಹೇಳಿದರು. ಈ ವರ್ಷ ಅಂದಾಜಿನಂತೆ ಕೋಲಾರ 30780 ಟನ್, ಮಾಲೂರು 23,835 ಟನ್, ಬಂಗಾರಪೇಟೆ 25,554ಟನ್, ಮುಳಬಾಗಲು 16,625 ಟನ್, ಶ್ರೀನಿವಾಸಪುರ 14,596 ಟನ್ ರಾಗಿ ಉತ್ಪಾದನೆಯಾಗಲಿದೆ ಎಂದು ಹೇಳಿದರು. ರಾಗಿಯನ್ನು ಎ.ಪಿ.ಎಂ.ಸಿ ಯಾರ್ಡ್ಗಳಲ್ಲಿ ಖರೀದಿ ಮಾಡಿ ಕೆ.ಎಸ್.ಎಫ್.ಸಿ ಯವರು ಗೋದಾಮುಗಳಲ್ಲಿ ದಾಸ್ತಾನು ಮಾಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಎ.ಪಿ.ಎಂ.ಸಿ ಸಹಾಯಕ ನಿರ್ದೇಶಕ ಶಿವಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಿ. ಗಿರಿಜಾದೇವಿ ಇದ್ದರು.
ವೈದ್ಯರ ಮೇಲೆ ಹಲ್ಲೆ; ಬಂಧನ
ಬಾಗೇಪಲ್ಲಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದ ಮೇಲೆ ದಲಿತ ಮುಖಂಡರೊಬ್ಬರನ್ನು ಬಂಧಿಸಲಾಗಿದೆ. ರಾತ್ರಿ ಸಾರ್ವಜನಿಕ ಆಸ್ಪ್ಪತ್ರೆಗೆ ಕುಡಿದು ಬಂದ ದಲಿತ ಮುಖಂಡ ರಾಮಾಂಜನೇಯಪ್ಪ ಮತ್ತು ರಮೇಶ್ ಎಂಬವರು ಕರ್ತವ್ಯದಲ್ಲಿದ್ದ ಚರ್ಮ ತಜ್ಞ ಡಾ.ಶ್ರೀಧರ್ ಎಂಬವರು ಅಪಘಾತದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ಔಷಧಿ ನೀಡಲು ಕೇಳಿದ್ದು ಅದಕ್ಕೆ ವೈದ್ಯರು ಅಪಘಾತದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದು ಇದಾದ ನಂತರ ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಕೆರಳಿದ ರಾಮಾಂಜಿನಪ್ಪ ಮತ್ತು ರಮೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದರಲ್ಲದೇ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇವರ ದಾಳಿಯಿಂದ ತಪ್ಪಿಸಿಕೊಂಡು ಬಂದ ವೈದ್ಯರು ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿ, ಪ್ರಾಣಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಸಬ್ಇನ್ಸ್ ಪೆಕ್ಟರ್ ಮುನಿರೆಡ್ಡಿ ದಲಿತ ಮುಖಂಡ ರಾಮಾಂಜಿನಪ್ಪರನ್ನು ಬಂಧಿಸಿ ಸ್ಥಳೀಯ ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ರಮೇಶ್ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.