ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೋಹಿತ್ಗೆ ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿ

Srinivasa Murthy VN
Updated On : 19 Nov 2013, 1:44 am

ಕೋಲಾರ/ಕೆಜಿಎಫ್: ಕರ್ನಾಟಕ ಬಾಲ ಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರಿನ ಬಾಲಭವನದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲೆಯ ಬೆಮೆಲ್ ನಗರದ ಹತ್ತನೇ ತರಗತಿಯ ವಿದ್ಯಾರ್ಥಿ ಜಿ.ಎಸ್. ರೋಹಿತ್ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಂದ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಪಡೆದಿದ್ದಾನೆ.
ಪ್ರತಿ ಜಿಲ್ಲೆಗೆ ಇಬ್ಬರಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಒಟ್ಟು 68 ವಿದ್ಯಾರ್ಥಿಗಳು ಈ ವಿಜ್ಞಾನ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬಂಗಾರಪೇಟೆ ತಾಲೂಕಿನ ಬೆಮೆಲ್ ಶಾಲೆಯ ವಿದ್ಯಾರ್ಥಿ ಜಿ.ಎಸ್. ರೋಹಿತ್ ತಾಲೂಕು ಮತ್ತು ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು, ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದ.
ಕಳೆದ ಅಗಸ್ಟ್ ತಿಂಗಳಿನಲ್ಲಿ ನಡೆದ ಕರ್ನಾಟಕ ಸರ್ಕಾರ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿಯನ್ನು ಈ ಬಾಲಕ ಪಡೆಯುವ ಮೂಲಕ ಗಮನ ಸೆಳೆದಿದ್ದಾನೆ.
2012-13ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಗುಲ್ಬರ್ಗಾದಲ್ಲಿ ನಡೆಸಿದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ 2011-12ನೇ ಸಾಲಿನಲ್ಲಿ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳನ್ನು ಪಡೆದಿರುತ್ತಾನಲ್ಲದೆ, ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು ಮತ್ತು ಕಳೆದ ವರ್ಷ ಹೊಯ್ಸಳ ಪ್ರಶಸ್ತಿಗೆ ಭಾಜನನಾಗಿರುತ್ತಾನೆ. ಈ ಬಾಲಕನ ಯಶಸ್ಸನ್ನು ಗಮನಿಸಿದ ಬಂಗಾರಪೇಟೆಯ ಶಿಶು ಅಭಿವೃದ್ಧಿ ಇಲಾಖೆ ಕನ್ನಡ ರಾಜೋತ್ಸವದ ಮೆರವಣಿಗೆಯಲ್ಲಿ ಜಿ.ಎಸ್. ರೋಹಿತನ ಸ್ತಬ್ಧ ಚಿತ್ರವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಪ್ರದರ್ಶಿಸಿತು.  ರೋಹಿತ್ ಚಿಕ್ಕಂದಿನಿಂದಲೂ ವಿಜ್ಞಾನ ವಿಷಯದಲ್ಲಿ ಅತೀವ ಆಸಕ್ತಿ ಉಳ್ಳವನಾಗಿದ್ದು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿರುತ್ತಾನೆ. ಇವನ ಪ್ರತಿಭೆಗೆ, ಆಸಕ್ತಿಗೆ ಪೂರಕವಾಗಿ ಸ್ಪಂದಿಸುತ್ತಿರುವ ತಂದೆ ಶಿವಾನಂದ ಗುಡ್ಡದಕೇರಿಯವರು ಬಿ.ಇ.ಎಂ.ಎಲ್. ಕಾಖಾನೆಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಬೆಮೆಲ್ನಗರದ ಸಾಂಸ್ಕೃತಿಕ ವಲಯದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ತಾಯಿ ಹೇಮಾರವರೂ ಬೆಮೆಲ್ ನಗರದ ರಂಗಭೂಮಿ, ಸಮಾಜ ಸೇವೆಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ ಜಿ.ಎಸ್. ರೋಹಿತ್ಗೆ ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ ಸಂದರ್ಭದಲ್ಲಿ ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರು ಕೋಲಾರ ಜಿಲ್ಲೆಯ ಕೀರ್ತಿ ಹೆಚ್ಚಿಸುವಂತೆ ಶುಭ ಹಾರೈಸಿದ್ದಾರೆ. ರೋಹಿತ್ಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಗಿದೆ.

ವಿದ್ಯಾರ್ಥಿಗಳಿಂದ  ಗುರುವಂದನಾ ಕಾರ್ಯಕ್ರಮ
ಗೌರಿಬಿದನೂರು:
ಉತ್ತಮ ಸಮಾಜದ ನಿರ್ಮಾಣಕ್ಕೆ ಗುಣಮಟ್ಟದ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿದರೆ ಮಾತ್ರ ಸಾಧ್ಯ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಅಭಿಪ್ರಾಯಪಟ್ಟರು. ನಾಮಗೊಂಡ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಗುರುಗಳಿಗೆ ಏರ್ಪಡಿಸಿದ್ದ  ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಯನ್ಸ್ ಸಂಸ್ಥೆ ಅಧ್ಯಕ್ಷ ಅಶ್ವತ್ಥರೆಡ್ಡಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಪದ್ಮಾ ಪ್ರಕಾಶ್, ರುಕ್ಷ್ಮಿಣಮ್ಮ, ಜಯಮ್ಮ, ಡಾ.ಬಿ.ಬಿ. ರಘುನಾಥ್, ಶ್ರೀನಿವಾಸರೆಡ್ಡಿ, ಎ.ನಾರಾಯಣಸ್ವಾಮಿ, ಹರ್ಷದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement