ಶ್ರೀ ಕ್ಷೇತ್ರ ಕೈವಾರದಲ್ಲಿ ವಿಶೇಷ ಕಾರ್ಯಕ್ರಮಗಳು
ಚಿಂತಾಮಣಿ: ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಕಾರ್ತಿಕ ಮಾಸದ ಹುಣ್ಣಿಮೆ ಪೂಜೆಗಳನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಪೂಜಾ ಕಾರ್ಯದಲ್ಲಿ ಅಸಂಖ್ಯ ಭಕ್ತರು ಹುಣ್ಣಿಮೆಯ ವಿಶೇಷ ರಥೋತ್ಸವದಲ್ಲಿ ಪಾಲ್ಗೊಂಡು ಸದ್ಗುರು ತಾತಯ್ಯನವರ ರಥವನ್ನು ಎಳೆದು ಧನ್ಯರಾದರು.
ಹುಣ್ಣಿಮೆ ವಿಶೇಷ ಅಧ್ಯಾತ್ಮ ಉಪನ್ಯಾಸ ನೀಡಿದ ಪ್ರವಚನಕಾರ ತಳಗವಾರ ಆನಂದ್, ಮನೆಯ ಕಸ ಗುಡಿಸುತ್ತೇವೆ ಒಮ್ಮೆ ಗುಡಿಸಿದೆ ಎಂದುಕೊಂಡು ಸುಮ್ಮನಿರುವುದಿಲ್ಲ ಪದೇ ಪದೇ ಸ್ವಚ್ಛ ಮಾಡುತ್ತೇವೆ. ಮನೆಯಲ್ಲಿ ಕಸ ಸೇರುವಂತೆ ನಮಗೆ ಗೊತ್ತಿಲ್ಲದಂತೆ ಮನಸ್ಸಿನಲ್ಲಿಯೂ ಕಸ ಶೇಖರಣೆ ಆಗುತ್ತದೆ. ಅದನ್ನು ತೊಡೆಯಲು ಮಹಾತ್ಮರ ಜೀವನ ಮತ್ತು ಸಂದೇಶಗಳು ಸರಿಯಾದ ಸಾಧನ ಎಂದರು. ಹುಣ್ಣಿಮೆಯ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು. ಹುಣ್ಣಿಮೆ ವಿಶೇಷ ಕೈಂಕರ್ಯದಲ್ಲಿ ಸದ್ಗುರು ತಾತಯ್ಯನವರ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಮತ್ತು ಅಷ್ಟಾವಧಾನ ಸೇವೆಯನ್ನು ನೆರವೇರಿಸಲಾಯಿತು. ಹುಣ್ಣಿಮೆ ಪ್ರಯುಕ್ತ ನಾದಸುಧಾರಸ ವೇದಿಕೆಯಲ್ಲಿ ಅಖಂಡ ಸಂಕೀರ್ತನೆ ಏರ್ಪಡಿಸಲಾಗಿತ್ತು.
ಲಕ್ಷ ದೀಪೋತ್ಸವ: ಕೈವಾರದ ಶ್ರೀ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಹುಣ್ಣಿಮೆಯಂದು ಲಕ್ಷದೀಪೋತ್ಸವ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಾಗಿತ್ತು. ಭಕ್ತರು ದೀಪಗಳನ್ನು ಬೆಳಗಿ ಸಂಭ್ರಮಿಸಿದರು. ಕಾರ್ತಿಕ ಹುಣ್ಣಿಮೆಯಂದು ಭೀಮಲಿಂಗೇಶ್ವರ ಲಿಂಗಕ್ಕೆ ಮಹನ್ಯಾಸಪೂರ್ವಕ ರುದ್ರಾಭಿಷೇಕವನ್ನು ಅರ್ಪಿಸಲಾಯಿತು. ರುದ್ರಹೋಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಪಾರ್ವತೀ ಅಮ್ಮನವರಿಗೆ ವಿಶೇಷ ಅಭಿಷೇಕ ಲಲಿತಾ ಸಹಸ್ರನಾಮಾರ್ಚನೆ ಮಾಡಲಾಯಿತು.
ಇಂದು ಕನ್ನಡ ಜಾಗೃತಿ ಗೀತೆಗಳ ಗಾಯನ
ಚಿಕ್ಕಬಳ್ಳಾಪುರ: ತಾಲೂಕಿನ ಮಂಚನಬಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನ.19 ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಜಾಗೃತಿ ಗೀತೆಗಳ ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅನನ್ಯ ಕಲಾ ರಂಗವೇದಿಕೆ ಆಯೋಜಿಸಿರುವ ಕಾರ್ಯಕ್ರಮವನ್ನು ಕ್ಷೇತ್ರಶಿಕ್ಷಣಾಧಿಕಾರಿ ಎನ್. ಶ್ರೀಕಂಠ ಉದ್ಘಾಟಿಸಲಿದ್ದು ಅಧ್ಯಕ್ಷತೆಯಲ್ಲಿ ಎಸ್ ಡಿಎಂಸಿ ಅಧ್ಯಕ್ಷ ರಮೇಶ್ ವಹಿಸಲಿದ್ದಾರೆ. ಮುನೇಗೌಡ, ವೆಂಕಟನಾರಾಯಣಪ್ಪ, ರಮೇಶ್ ಭಾಗವಹಿಸಲಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಚಿಕ್ಕಬಳ್ಳಾಪುರ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಪದಾಧಿಕಾರಿಗಳನ್ನು ನೂತನವಾಗಿ ನೇಮಕ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಟಿ. ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದ್ದಾರೆ. ಈ ಹಿಂದೆಯಿದ್ದ ಸಮಿತಿ ವಿಸರ್ಜನೆ ಮಾಡಿ ನಗರದ ಸಿಟಿಜನ್ ಕ್ಲಬ್ನಲ್ಲಿ ಸಂಘದ ಜಿಲ್ಲಾ ಮಟ್ಟದ ಮುಖಂಡರ ಸಭೆ ನಡೆಸಿ ಮತ್ತಷ್ಟು ಸಂಘ ಚುರುಕಾಗಿ ಕಾರ್ಯ ನಿರ್ವಹಿಸಲಿ ಎಂಬ ಉದ್ದೇಶದಿಂದ ಹೊಸದಾಗಿ ಪದಾಧಿಕಾರಿಗಳನ್ನು ಇತ್ತೀಚೆಗೆ ಮಾಡಲಾಗಿದೆ. ತಾಲೂಕು ಅಧ್ಯಕ್ಷ ಹೂನೇಗಲ್ ಕೇಶವ, ಗೌರವಾಧ್ಯಕ್ಷ ಟಿ. ಚಿಕ್ಕಮುನಿಯಪ್ಪ, ಕಾರ್ಯದರ್ಶಿ ನವೀನ್ ಕುಮಾರ್, ಕಾರ್ಯಾಧ್ಯಕ್ಷ ರಮೇಶ್ ಬಾಬು, ಪ್ರಧಾನ ಕಾರ್ಯದರ್ಶಿ ಕರಗರಾಜು, ಉಪಾಧ್ಯಕ್ಷರಾಗಿ ಡಿ.ಎನ್.ಧಮೇಶ್, ಕೆ.ಎಂ. ಶ್ರೀನಿವಾಸ್, ಡಿ.ಎನ್. ನಂಜಿರೆಡ್ಡಿ, ಖಜಾಂಚಿ ಡಿ.ಆರ್. ಪಿಳ್ಳೇಗೌಡ, ಸಂಘಟನಾ ಕಾರ್ಯದರ್ಶಿ ಎಚ್. ಗಣೇಶ್ ಪ್ರಸಾದ್, ತಾಲೂಕು ಸಂಚಾಲಕ ಗಜೇಂದ್ರ ಬಾಬು, ಹಸಿರು ಸೇನೆ ಮುಖಂಡ ಬಚ್ಚೇಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೇಣುಗೋಪಾಲರೆಡ್ಡಿ, ನರಸಿಂಹಮೂರ್ತಿ, ವೆಂಕಟೇಶ್, ಕೃಷ್ಣಪ್ಪ, ಮಂಜುನಾಥ್, ಎಚ್.ವಿ. ಹರೀಶ್, ಶಿವನ್ನ ನೇಮಕವಾಗಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಸಾಹಿತಿಯೂ ಶುದ್ಧವಾಗಿರಬೇಕು'
ಚಿಂತಾಮಣಿ: ಸಾಹಿತ್ಯ ಶುದ್ಧವಾಗಿದ್ದರೆ ಸಾಲದು, ಸಾಹಿತಿಯೂ ಶುದ್ಧವಾಗಿರಬೇಕೆಂದು ವಿಚಾರವಾದಿ ಚಿಂತಕಿ ಹಸೀನಾಬೇಗಂ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಿರಿಗನ್ನಡ ವೇದಿಕೆ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟನೆಯಾಗಿರುವ ಸಿರಿಗನ್ನಡ ವೇದಿಕೆ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವ ಮೂಲಕ ಕನ್ನಡಮ್ಮನ ಸೇವೆಗೆ ಮುಂದಾಗಬೇಕೆಂದು ತಿಳಿಸಿದರು. ಸೀತಮ್ಮ, ಅಕ್ರಂಪಾಷ ಮಾತನಾಡಿದರು.