ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉದ್ಯೋಗ ಮೇಳ: 13,500 ಆಕಾಂಕ್ಷಿಗಳು

Srinivasa Murthy VN
Updated On : 20 Nov 2013, 12:13 pm

ಕ.ಪ್ರ. ವಾರ್ತೆ ಕೋಲಾರ ನ.19
ಇದೇ ತಿಂಗಳು 23 ಮತ್ತು 24 ರಂದು ನಗರದಲ್ಲಿ ಹಮ್ಮಿಕೊಂಡಿರುವ ಬೃಹತ್ ಉದ್ಯೋಗ ಮೇಳಕ್ಕೆ ಜಿಲ್ಲಾ ಆಡಳಿತದಿಂದ ಸಕಲ ಸಿದ್ಧತೆ ನಡೆದಿದ್ದು ಈ ಮೇಳದಲ್ಲಿ ಸುಮಾರು 13500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಉದ್ಯೋಗ ಮೇಳದ ಉಸ್ತುವಾರಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೇಂದ್ರ ಸರ್ಕಾರದ ಸಣ್ಣ,ಅತಿ ಸಣ್ಣ ಹಾಗೂ ಮಾಧ್ಯಮ ಉದ್ಯಮ ಇಲಾಖೆ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಎರಡು ದಿನಗಳು ಉದ್ಯೋಗ ಮೇಳ ನಡೆಯಲಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದರು.
ಬೃಹತ್ ಮೇಳದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದಾರೆ.
 ಮೇಳದಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ಹಾಗೂ ಅನುತ್ತೀರ್ಣರು, ಪಿಯುಸಿ, ಜಿಓಸಿ, ಐಟಿಐ, ಡಿಪ್ಲೊಮೋ, ಸಾಮಾನ್ಯ, ವೃತ್ತಿ ಆಧಾರಿತ ಪದವೀಧರರು, ಸ್ನಾತಕೋತ್ತರ ಪದವಿಧರರು ಸೇರಿದಂತೆ ಎಲ್ಲಾ ರೀತಿಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಕೋಲಾರ ಜಿಲ್ಲೆಯ ನರಸಾಪುರ, ಮಾಲೂರು ಸೇರಿದಂತೆ ಬೆಂಗಳೂರಿನ 156 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ಮತ್ತಷ್ಟು ಕೈಗಾರಿಕೋದ್ಯಮಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದ ತಿಳಿಸಿದರು.
ಈ ಕಂಪನಿಗಳು ಈಗಾಗಲೇ 8500 ಉದ್ಯೋಗವಂತರು ಬೇಕಾಗಿರುವುದಾಗಿ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದರೆ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವವರು ಮತ್ತು ಉದ್ಯೋಗ ಮೇಳಕ್ಕೆ ನೇರವಾಗಿ ಬರುವಂತಹ ಉದ್ಯೋಗಾಕಾಂಕ್ಷಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಅರ್ಜಿಯನ್ನು ಭರ್ತಿ ಮಾಡುವ ಬಗ್ಗೆ ಹಾಗೂ ಸಂದರ್ಶನವನ್ನು ಯಾವ ರೀತಿ ಎದುರಿಸಬೇಕೆಂಬುದರ ಬಗ್ಗೆ 10 ರಿಂದ 20 ನಿಮಿಷ ಅರಿವು ಮೂಡಿಸುವ ಮೂಲಕ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಲಾಗುತ್ತಿದೆ ಎಂದರು.
ಮೇಳದಲ್ಲಿ ಭಾಗವಹಿಸಿ ನೇಮಕಗೊಳ್ಳಲು ಸಾಧ್ಯವಾಗದ  ನಿರುದ್ಯೋಗ ಯುವಕ, ಯುವತಿಯರಿಗೆ ಎಂಎಸ್‌ಎಂಇ ವತಿಯಿಂದ ಅವರಿಗೆ ಬೇಕಾಗಿರುವ ಕೌಶಲ್ಯ ತರಬೇತಿಯನ್ನು ನೀಡಲಾಗುವುದರಿಂದ ನಿರಾಸೆ ಹೊಂದುವ ಅಗತ್ಯವಿಲ್ಲ,ಕಂಪನಿಗಳಿಗೆ ಬೇಕಾದ ಕೌಶಲ್ಯತೆಯನ್ನು ತಿಳಿದುಕೊಂಡು ನಿರುದ್ಯೋಗ ಯುವಕ, ಯುವತಿಯರಿಗೆ ತರಬೇತಿಯನ್ನು ನೀಡಿ ಸಜ್ಜಗೊಳಿಸಿ ಮತ್ತೊಂದು ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು.
ಉದ್ಯೋಗ ಮೇಳದ ಎಲ್ಲಾ ಚಟುವಟಿಕೆಗಳು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳು ಎಲ್ಲಿಯೂ ಹಣವನ್ನು ಪಾವತಿಸಬಾರದು ಹಾಗೂ ಮಧ್ಯವರ್ತಿಗಳ ಯಾವುದೇ ಆಮಿಷಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು.
ಉದ್ಯೋಗ ಮೇಳಕ್ಕೆ ಬರುವಂತಹ ಅಭ್ಯರ್ಥಿಗಳಿಗೆ ಆಹಾರ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೇವೆ ಕಲ್ಪಿಸುವ ಧಾನಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಆಸಕ್ತರು ತಮ್ಮನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದೆಂದರು.

ಯೋಚಿಸಿ ನಿರ್ಧಾರ ಕೈಗೊಳ್ಳಿ
ಉದ್ಯೋಗ ಮೇಳಕ್ಕೆ ಬರುವಂತಹ ಕಂಪನಿಗಳ ಹೆಸರನ್ನು ನೋಡಿಕೊಂಡು ಅದೇ ಕಂಪನಿಗೆ ಹೋಗಬೇಕೆಂದು ಉದ್ಯೋಗಾಕಾಂಕ್ಷಿಗಳು ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದ ಅವರು, ಎಲ್ಲಾ ಕಂಪನಿಗಳು ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿರುವುದರಿಂದ ಸಿಗುವಂತಹ ಉತ್ತಮ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ಡಿ.ಕೆ. ರವಿ ಕಿವಿ ಮಾತು ಹೇಳಿದರು.

200 ಸ್ಟಾಲ್‌ಗಳು
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪನಿಗಳ ಅನುಕೂಲಕ್ಕಾಗಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ 150 ರಿಂದ 200 ಸ್ಟಾಲ್‌ಗಳನ್ನು ನಿರ್ಮಿಸಲಾಗುವುದು ಎಂದು ಅವರು, ಈ ಸ್ಟಾಲ್‌ಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಭ್ಯರ್ಥಿಗಳಿಗೆ ಮಾಹಿತಿ ನೀಡಲು ಹಾಗೂ ಒಂದು ಸಾವಿರ ಅಭ್ಯರ್ಥಿಗಳು ಕುಳಿತುಕೊಳ್ಳಬಹುದಾದ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಲಾಗುವುದು, 4 ದೊಡ್ಡ ಸ್ಕ್ರೀನ್‌ಗಳು ಅಡವಡಿಸಿ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶ ನೀಡುವುದಕ್ಕೂ ಸಿದ್ಧತೆ ನಡೆದಿದೆ, ಉದ್ಯೋಗ ಮೇಳಕ್ಕೆ ಭಾಗವಹಿಸುವಂತ ನಿರುದ್ಯೋಗಿಗಳನ್ನು ಅರ್ಹತೆಯ ಮೇಲೆ ವಿಂಗಡಿಸಿ, ಸಂದರ್ಶನ ನಡೆಸಲಾಗುತ್ತದೆ. ಆಯ್ಕೆಯಾದವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರವನ್ನು ಸಹ ನೀಡಲಾಗುತ್ತದೆ ಎಂದರು.

ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ
ವಿಕಲಚೇತನರಿಗೆ ಉದ್ಯೋಗ ಮೇಳದಲ್ಲಿ ಪ್ರತ್ಯೇಕ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಮೂರು ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸಿ ವಿಕಲಚೇತನಿರಿಗೆ ಉದ್ಯೋಗಾವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು.

ಏನೇನು ತರಬೇಕು?
ಉದ್ಯೋಗ ಮೇಳಕ್ಕೆ ಆಗಮಿಸುವ ಉದ್ಯೋಗಾಕಾಂಕ್ಷಿಗಳು ವ್ಯಕ್ತಿ ಪರಿಚಯ ಪತ್ರದ ಅಗತ್ಯ. ಪ್ರತಿಗಳು ಹಾಗೂ ಸ್ವೀಕೃತಿ ಪತ್ರವನ್ನು ತರಲು ಸೂಚಿಸಲಾಗಿದ್ದು, ಅಭ್ಯರ್ಥಿಗಳು ಅಂಕಪಟ್ಟೆ ಹಾಗೂ ಇತರ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಮಾತ್ರ ಉದ್ಯೋಗ ಮೇಳಕ್ಕೆ ತರಲು ಸೂಚಿಸಲಾಗಿದೆ ಎಂದರು.

ಮೇಳದಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ ಹಾಗೂ ಅನುತ್ತೀರ್ಣರು, ಪಿಯುಸಿ, ಜಿಓಸಿ, ಐಟಿಐ, ಡಿಪ್ಲೊಮೋ, ಸಾಮಾನ್ಯ, ವೃತ್ತಿ ಆಧಾರಿತ ಪದವೀಧರರು, ಸ್ನಾತಕೋತ್ತರ ಪದವಿಧರರು ಸೇರಿದಂತೆ ಎಲ್ಲಾ ರೀತಿಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ
-ಡಿ.ಕೆ. ರವಿ, ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement