ಕಾಲುಬಾಯಿ ಜ್ವರ ತಡೆಗೆ ಮೂಢ ನಂಬಿಕೆ ಅಡ್ಡಿ
ಕ.ಪ್ರ. ವಾರ್ತೆ ಚಿಕ್ಕಬಳ್ಳಾಪುರ ನ.19
ರಾಸುಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಕಾಲುಬಾಯಿ ಜ್ವರ ಹರಡದಂತೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ರೈತರ ಮೂಢನಂಬಿಕೆ, ನಿರ್ಲಕ್ಷ್ಯದಿಂದ ಸುಲಭವಾಗಿ ಸೋಂಕನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿ ಡಾ. ರವೀಂದ್ರ ಹೆಗ್ಗಡೆ ವಿಷಾದ ವ್ಯಕ್ತಪಡಿಸಿದರು.
ನಗರದ ವಾಪಸಂದ್ರ ಹಾಲಿನ ಡೈರಿಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಜಿಲ್ಲಾ ಹಾಲು ಒಕ್ಕೂಟ, ವಾಪಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘ ಆಯೋಜಿಸಿದ್ದ ಕಾಲುಬಾಯಿ ಜ್ವರ ನಿಯಂತ್ರಣದ ಬಗ್ಗೆ ಅರಿವು ಶಿಬಿರದಲ್ಲಿ ಮಾತನಾಡಿ, ಕಾಲುಬಾಯಿ ಜ್ವರ ಬಂದಾಗ ಹೆಚ್ಚಿಗೆ ಕರುಗಳೇ ಬೇಗ ಸಾವನ್ನಪ್ಪುವುದು. ದೊಡ್ಡ ಹಸುಗಳು ಹೆಚ್ಚಿಗೆ ನಿತ್ರಾಣಗೊಳ್ಳುವುದರಿಂದ ಗುಣಮಟ್ಟದ ಹಾಲಿನ ಉತ್ಪಾದನೆ ಪ್ರಮಾಣ ಕಡಿಮೆಯಾಗುವುದಲ್ಲದೇ ಅವುಗಳ ದೈನಂದಿನ ಚಟುವಟಿಕೆಗಳಲ್ಲೂ ಕೆಲ ಬದಲಾವಣೆಗಳು ಕಂಡು ಬರುತ್ತವೆ. ಇಲ್ಲಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ರಾಸುಗಳು ಸಾವನ್ನಪ್ಪುವುದಿಲ್ಲ ಎಂದರು. ಸರ್ಕಾರ ಎಷ್ಟೇ ಜಾಗೃತಿ ಹಮ್ಮಿಕೊಂಡರೂ ರೈತರ ಸಹಕಾರವಿಲ್ಲದೇ ಸಂಪೂರ್ಣವಾಗಿ ಕಾಲುಬಾಯಿ ಜ್ವರ ನಿಯಂತ್ರದ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದರು.
ಅನ್ಯ ದೇಶಗಳಲ್ಲಿ ಎಚ್ಚರಿಕೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಲಿನಿಂದ ತಯಾರಿಸಿದ ಉತ್ಪನ್ನಗಳಿಗೆ ಬೇಡಿಕೆ ಕುಸಿಯಬಾರದೆಂಬ ಉದ್ದೇಶದಿಂದ ಅನ್ಯ ದೇಶಗಳು, ಗುಣಮಟ್ಟದ ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡುವ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಕೋಟ್ಯಂತರ ರು. ಹಣ ಖರ್ಚು ಮಾಡುತ್ತಿವೆ. ವೈರಸ್‌ಗಳಿಂದ ಹೆಮ್ಮಾರಿ ಕಾಲು ಬಾಯಿ ಜ್ವರ ಹರಡದಂತೆ ಎಚ್ಚರಿಕೆ ವಹಿಸಿ ಹಾಲಿನ ಉತ್ಪನ್ನಗಳ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿವೆ.ನಮ್ಮ ದೇಶದಲ್ಲೂ ಪ್ರಾಯೋಗಿಕವಾಗಿ ಕಾಲುಬಾಯಿ ಜ್ವರ ನಿಯಂತ್ರಣ ಯೋಜನೆಯನ್ನು 2004 ರಲ್ಲಿ ಕೈಗೊಂಡಿದ್ದು ಪಂಜಾಬ್ ಮತ್ತು ಹರಿಯಾಣ ಕಾಯಿಲೆ ಮುಕ್ತ ಮಾದರಿ ರಾಜ್ಯಗಳು ಎನಿಸಿಕೊಂಡಿವೆ ಎಂದರು.
ಕೆಎಂಎಫ್ ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿ, ಕಾಲುಬಾಯಿ ಜ್ವರದ ಬಗ್ಗೆ ಡಂಗೂರ, ಕರಪತ್ರಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ರೈತರ ಮನೆಗಳ ಬಳಿಗೆ ಹೋಗಿ ರಾಸುಗಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದರು.
ಕೋ-ಚಿ ಹಾಲು ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ರವಿಶಂಕರ್ ಹೆಗಡೆ, ಪಶುಪಾಲನ ಇಲಾಖೆಯ ಉಪ ನಿರ್ದೇಶಕ ಪ್ರಕಾಶ್, ಸಹಾಯಕ ನಿರ್ದೇಶಕ ಗೋವಿಂದಪ್ಪ, ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಮಂಜುನಾಥ್, ಯಲುವಹಳ್ಳಿ ಸೊಣ್ಣೇಗೌಡ, ಭೈರೇಗೌಡ, ಹರೀಶ್, ಪಾಪೇಗೌಡ, ನರಸಿಂಹಮೂರ್ತಿ ಇದ್ದರು.
ನಿಯಂತ್ರಣಕ್ಕೆ ಸಲಹೆಗಳು
-ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು.
-ಪ್ರತ್ಯೇಕವಾಗಿ ಸೋಂಕಿಗೆ ತುತ್ತಾದ ಜಾನುವಾರಿನ ಹಾರೈಕೆ
-ಸೋಂಕಿತ ಹಸುವಿನ ಕಾಲು ಬಾಯಿ ಹುಣ್ಣನ್ನು ಶೇ.0.5 ಅಡುಗೆ ಸೋಡ ದ್ರಾವಣದಿಂದ ದಿನಕ್ಕೆ ಮೂರು ಬಾರಿ ತೊಳೆಯಬೇಕು. ಜೇನು ತುಪ್ಪ ಅಥವಾ ಗ್ಲಿಸರಿನ್ ದ್ರಾವಣವನ್ನು ಬಾಯಿಯ ಒಳಭಾಗಕ್ಕೆ ಸವರಬೇಕು.
-ಗಂಜಿ, ಬಾಳೆಹಣ್ಣು, ಹೂರಣ, ರಾಗಿ ಅಂಬಲಿ, ಹಸಿರು ಹುಲ್ಲು ಮುಂತಾದ ಮೃದು ಆಹಾರವನ್ನು ತಿನ್ನಿಸಬೇಕು. ಕಾಲಿನ ಗಾಯವನ್ನು ಔಷಧಿ ಮಿಶ್ರಿತ ನೀರಿನಲ್ಲಿ ತೊಳೆದು ನೊಣ ಕೂರದಂತೆ ಬೇವಿನ ಎಣ್ಣೆ ಅಥವಾ ಮುಲಾಮು ಹಚ್ಚಬೇಕು.