ಕಾಲೇಜಿಗೆ ನೂತನ ಕೊಠಡಿಗಳ ನಿರ್ಮಾಣ
ಬಂಗಾರಪೇಟೆ: ಪಟ್ಟಣದ ಕೆ.ಸಿ. ರೆಡ್ಡಿ ಪ್ರಥಮ ದರ್ಜೆ ಕಾಲೇಜಿಗೆ ಗ್ರಾಮೀಣ ಪ್ರದೇಶದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬರುವ ವಿದ್ಯಾರ್ಥಿಗಳಿಗೆ ನಾಗರಿಕ ಅನುಕೂಲಗಳ ಕೊರತೆಯಿಂದ ಅವ್ಯವಸ್ಥೆಯಲ್ಲಿ ಪಾಠ ಪ್ರವಚನಗಳನ್ನು ಕೇಳುವಂತಾಗಿತ್ತು ಈಗ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಒಂದು ಕೋಟಿ ವೆಚ್ಚದಲ್ಲಿ ಕೊಠಡಿಗಳು ಸೇರಿದಂತೆ ಆಧುನಿತ ಸೌಲಭ್ಯಗಳನ್ನು ಕಲ್ಪಿಸಲು ಸೋಮವಾರ ಶಂಕುಸ್ಥಾಪನೆ ನೇರವೇರಿಸಿ ವಿದ್ಯಾರ್ಥಿಗಳಲ್ಲಿ ಸಂತಸ ಉಂಟು ಮಾಡಿದ್ದಾರೆ.
ನಂತರ ಮಾತನಾಡಿದ ಶಾಸಕ ನಾರಾಯಣಸ್ವಾಮಿ, ಗ್ರಾಮೀಣ ಮಕ್ಕಳಿಗೂ ಗುಣ ಮಟ್ಟದ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದ್ದು ಅದರಂತೆ ಹಲವು ವರ್ಷಗಳಿಂದ ಸೌಲಭ್ಯಗಳಿಲ್ಲದೆ ಸೊರಗಿದ್ದ ಕಾಲೇಜಿಗೆ ಮೇಜರ್ ಸರ್ಜರಿ ನೀಡಲು ಸರ್ಕಾರ ನಿರ್ಧರಿಸಿದ್ದು ಹಂತ ಹಂತವಾಗಿ ಅಭಿವೃದ್ಧಿಗೊಳಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳನ್ನು ಆಕರ್ಷಿಸಲಿದೆ ಎಂದರು. ಇದಲ್ಲದೆ ಕ್ಷೇತ್ರದ 26 ಪಂಚಾಯ್ತಿಗಳಲ್ಲಿ ಕೆಲವು ಕಡೆ ಪ್ಲೋರೈಡ್ ನೀರನ್ನು ಜನರು ಕುಡಿಯುತ್ತಿರುವುದರಿಂದ 18ಕಡೆ ಶುದ್ಧ ನೀರಿನ ಘಟಕ ಸ್ಥಾಪನೆಗೆ ಮುಂದಾಗಿದೆ. ಹಾಗೂ 130 ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ, ಕುಡಿಯುವ ನೀರು ಸ್ವಂತ ಕಟ್ಟಡ ಕಲ್ಪಿಸಲು 22.44ಕೋಟಿ ಅನುದಾನ ಮಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಪ್ರಾಂಶುಪಾಲ ವೆಂಕಟಪ್ಪ, ಮಂಜುಳಾ, ಇಒ ಭಟ್ ಇದ್ದರು.
ಸಮಾಜ ಸೇವಕರಿಗೆ ಸನ್ಮಾನ
ಕೆಜಿಎಫ್: ನಗರದಲ್ಲಿ ಸುಮಾರು 16 ವರ್ಷಗಳಿಂದ ನೂರಾರು ಬಡಕುಟುಂಬ ವರ್ಗದ ಮಹಿಳೆಯರಿಗೆ ಮತ್ತು ವೃದ್ಧರಿಗೆ ಮದರ್ತೆರೇಸಾ ಟ್ರಸ್ಟ್ ಹೆಸರಿನಲ್ಲಿ ಉಚಿತವಾಗಿ ಅಕ್ಕಿ, ಸೀರೆ, ಕಂಬಳಿ ಸೇರಿದಂತೆ ಇತರೆ ಆಹಾರ ಧಾನ್ಯಗಳನ್ನು ಪ್ರತಿ ತಿಂಗಳು ವಿತರಿಸುತ್ತಿರುವ ಸಮಾಜ ಸೇವಕ ಜಾನ್ಸೀದಾಸ್ ಅವರಿಗೆ ಇತ್ತೀಚೆಗೆ ತಮಿಳುನಾಡಿನ ಚೆನ್ನೈನಲ್ಲಿ ನಡೆದ ನವೀನ್ ಫೈನ್ ಆರ್ಟ್ಸ್ ವತಿಯಿಂದ ಖ್ಯಾತ ಸಂಗೀತ ನಿರ್ದೇಶಕ ಶಂಕರ್ಗಣೇಶ್ ಮತ್ತು ಹ್ಯಾರೀಸ್ ಜಯರಾಜ್ ಅವರ ನೇತೃತ್ವದಲ್ಲಿ ನಡೆದ ಉತ್ತಮ ಸಮಾಜ ಸೇವಕರಿಗೆ ಪ್ರಶಸ್ತಿ ಸನ್ಮಾನ ಕಾರ್ಯಕ್ರಮದಲ್ಲಿ ಕೆಜಿಎಫ್ನ ಜಾನ್ಸೀದಾಸ್ ಅವರನ್ನು ಉತ್ತಮ ಸಮಾಜ ಸೇವಕರು ಎಂದು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಮಿಳುನಾಡು ಮೂಲದ 7 ಮಂದಿಗೆ ಸೇರಿದಂತೆ ಕೆಜಿಎಫ್ನ ಜಾನ್ಸೀದಾಸ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿರುವುದು ತಮ್ಮ ಮದರ್ ತೆರೇಸಾ ಟ್ರಸ್ಟ್ಗೆ ಉತ್ತಮ ಗೌರವ ತಂದಿರುವುದು ತಮಗೆಲ್ಲ ಸಂತಸ ತಂದಿದೆ ಎಂದು ಟ್ರಸ್ಟ್ನ ಮುಖಂಡರು ಹಾಗೂ ಕಾರ್ಯಕರ್ತರು ತಿಳಿಸಿದ್ದಾರೆ.