ಖಾಸಗಿ ಅಬ್ಬರ; ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಬರ!
-ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ: ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅನೇಕ ಸರ್ಕಾರಿ ಶಾಲೆಗಳ ಕಟ್ಟಡಗಳು ದನದ ಕೊಟ್ಟಿಗೆಗಳಂತಾಗಿವೆ. ಇಷ್ಟೇ ಆಗಿದ್ದರೆ ಸಹಿಸಿಕೊಳ್ಳಬಹುದಿತ್ತು. ಆದರೆ, ಬಳಸಲು ಬಾರದ ಕಟ್ಟಡಗಳು ಜೂಜು ಕೇಂದ್ರಗಳಾಗಿ ಪರಿವರ್ತನೆಯಾಗಿರುವುದು ದುರಂತ. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲೂಕು ಕೇಂದ್ರಗಳನ್ನು ಹೊರತುಪಡಿಸಿ ಜಿಲ್ಲೆಯ ಇನ್ನುಳಿದ ತಾಲೂಕುಗಳಾದ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಚಿಂತಾಮಣಿ ತಾಲೂಕುಗಳು ಆಂಧ್ರದ ಗಡಿಯಲ್ಲಿದ್ದು ಇಲ್ಲಿ ತೆಲುಗಿನ ಪ್ರಭಾವವೇ ಹೆಚ್ಚು. ಹೆಚ್ಚುತ್ತಿರುವ ಖಾಸಗಿ ಶಾಲೆಗಳು ನೀಡುವ ಆಕರ್ಷಕ ಸವಲತ್ತುಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಅಲ್ಲಿಯೇ ಸೇರಿಸುತ್ತಿದ್ದಾರೆ. ಮಕ್ಕಳಿಗೆ ಮಾತ್ರವಲ್ಲ, ಶಿಕ್ಷಕರಿಗೂ ಗ್ರಾಮಗಳಲ್ಲಿರುವ ಶಾಲೆಗಳಿಗೆ ತೆರಳಲು ಸಾರಿಗೆ ಸೌಕರ್ಯದ ಕೊರತೆಯೂ ಇದೆ. ಆದ್ದರಿಂದ ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹುದೊಡ್ಡ ಸಮಸ್ಯೆಯಾಗಿದೆ.
ಕೊರತೆ ನೀಗಿಸಲು ಯತ್ನ
ಸರ್ಕಾರಿ ಶಾಲೆಗಳಲ್ಲಿ ಕಾಡುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಿದ್ದು ಜಿಲ್ಲೆಯಲ್ಲಿ 240 ಅತಿಥಿ ಶಿಕ್ಷಕರನ್ನು ನೇಮಿಸುವ ಮೂಲಕ ಶಿಕ್ಷಕರ ಕೊರತೆ ನೀಗಿಸಲು ಯತ್ನಿಸಲಾಗುತ್ತಿದೆ. ಉಳಿದಂತೆ ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿ, ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಎಸ್‌ಡಿಎಂಸಿ ನೇತೃತ್ವದಲ್ಲಿ ಸಭೆ ನಡೆಸಿ ಗ್ರಾಮಸ್ಥರ ಸಹಕಾರ ಪಡೆಯಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗಳೂ ಶೇ.100ರಷ್ಟು ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಹೊರ ಬರುತ್ತಿರುವುದು ಸಂತೋಷದ ವಿಷಯ.
ಶಾಲೆಗಳೊಂದಿಗೆ ವಿಲೀನ
ಜಿಲ್ಲೆಯಲ್ಲಿ 974 ಕಿರಿಯ ಪ್ರಾಥಮಿಕ ಶಾಲೆ, 535 ಹಿರಿಯ ಪ್ರಾಥಮಿಕ ಶಾಲೆ, 107 ಮಾಧ್ಯಮಿಕ ಶಾಲೆ ಸೇರಿದಂತೆ ಒಟ್ಟು 1,616 ಸರ್ಕಾರಿ ಶಾಲೆಗಳು, 41 ಅನುದಾನಿತ ಪ್ರಾಥಮಿಕ ಶಾಲೆಗಳು ಮತ್ತು 69 ಮಾಧ್ಯಮಿಕ ಶಾಲೆಗಳಿವೆ. ಕನ್ನಡ ಮಾಧ್ಯಮದಲ್ಲಿ ಒಟ್ಟು 1,28,427 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 2012-13ನೇ ಸಾಲಿನಲ್ಲಿ 5 ಮಕ್ಕಳಿಗಿಂತ ಕಡಿಮೆ ಇದ್ದ 90 ಸರ್ಕಾರಿ ಶಾಲೆಗಳನ್ನು ಸಮೀಪದ ಶಾಲೆಗಳೊಂದಿಗೆ ವಿಲೀನಗೊಳಿಸಲಾಗಿದೆ. ಈ ವರ್ಷದಲ್ಲೂ ವಿಲೀನದ ಹೆಸರಿನಲ್ಲಿ ಹೆಚ್ಚಿಗೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ಮುಂದುವರಿದಿದ್ದು, ಕಳೆದ ಕೆಲವು ತಿಂಗಳಲ್ಲಿ 10ಕ್ಕೂ ಹೆಚ್ಚು ಶಾಲೆಗಳು ಬಂದ್ ಆಗಿವೆ. ಹಲವು ಗ್ರಾಮಗಳಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸುಮ್ಮನಿದ್ದಾರೆ. ಕೌಟುಂಬಿಕ ಸಮಸ್ಯೆ, ವಲಸೆ, ಗೊಡ್ಡು ಸಂಪ್ರದಾಯಗಳ ಕಾರಣಗಳಿಂದ ಬಹಳ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. 2012-13ನೇ ಸಾಲಿನಲ್ಲಿ 432 ಮಕ್ಕಳು ಶಾಲೆಯನ್ನು ಮಧ್ಯದಲ್ಲಿಯೇ ತ್ಯಜಿಸಿದ್ದಾರೆ ಎಂದು ಶಿಕ್ಷಣ ಇಲಾಖೆ ಅಂಕಿ ಅಂಶಗಳು ಹೇಳುತ್ತವೆ. ಆದರೆ, ವಾಸ್ತವವಾಗಿ ಇನ್ನೂ ಹೆಚ್ಚಿನ ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ಸೆಂಚುರಿ ಹೊಡೆದ 12 ಶಾಲೆಗಳು!
ಚಿಕ್ಕಬಳ್ಳಾಪುರ ತಾಲೂಕು ಪೆರೇಸಂದ್ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1910ರಲ್ಲಿ ಸ್ಥಾಪನೆಯಾಗಿ 1952ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಯಿತು. ಈ ಶಾಲೆ ಸಾವಿರಾರು ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಉತ್ತಮ ಭವಿಷ್ಯ ರೂಪಿಸಿದೆ. ಗೌರಿಬಿದನೂರಿನ ಮರಳೂರು, ಶಿಡ್ಲಘಟ್ಟ ತಾಲೂಕಿನ ಮೇಲೂರು, ಸಾದಲಿ ಸೇರಿದಂತೆ 12 ಸರ್ಕಾರಿ ಶಾಲೆಗಳು ಶತಕ ಬಾರಿಸಿವೆ. '
ಖಾಸಗಿ ಶಾಲೆಗಳ ಪೈಪೋಟಿ ಎದುರಿಸಲು ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಆಗ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಸಹಕಾರಿಯಾಗುತ್ತದೆ. ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಏಕರೂಪ ಶಿಕ್ಷಣ ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಮುಂದೆ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾಗಬಹುದು.
-ಲಕ್ಷ್ಮೀನಾರಾಯಣಪ್ಪ, ಶಿಕ್ಷಕರು